ಹೆಚ್ಚು ಹಣ ತಂದು ನಗರಾಭಿವೃದ್ಧಿಗೆ ಶ್ರಮಿಸುವೆ

ಪಾಲಿಕೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದ ಸಂಸದ ಸಿದ್ದೇಶ್ವರ
________________________________________________________________________________________________

ಶೇ 5ರ ಯೋಜನೆಯಡಿ ಅಂಗವಿಕಲರಿಗೆ 28 ಯಂತ್ರಚಾಲಿತ ವಾಹನ, ಮೂಗ ಹಾಗೂ ಕಿವುಡ ವಿದ್ಯಾರ್ಥಿಗಳಿಗೆ 19 ಲ್ಯಾಪ್‌ಟಾಪ್, ಶೇ 24.10ರ ಯೋಜನೆಯಡಿ
121 ಮ್ಯಾನುಯಲ್ ಸ್ಕ್ಯಾವೆಂಜರ್ ಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 55 ಹೊಲಿಗೆ ಯಂತ್ರ, 46 ಜೆರಾಕ್ಸ್‌ ಮಷಿನ್, 20 ತಳ್ಳುವ ಗಾಡಿಗಳನ್ನು ಇಂದು ವಿತರಿಸಲಾಯಿತು.
________________________________________________________________________________________________

ದಾವಣಗೆರೆ, ಆ. 28- ಮಹಾನಗರ ಪಾಲಿಕೆಗೆ 100 ಕೋಟಿ ರೂ. ಅನುದಾನ ತರುವ ವಿಶ್ವಾಸವಿತ್ತು. ಆದರೆ ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಹಣ ತರಲು ಶ್ರಮಿಸುತ್ತೇನೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು.

ಮಹಾನಗರ ಪಾಲಿಕೆ ಆವರಣಲ್ಲಿಂದು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಲ್ಯಾಪ್‌ಟಾಪ್, ಹೊಲಿಗೆ ಯಂತ್ರ, ಜೆರಾಕ್ಸ್ ಮಿಷನ್ ಹಾಗೂ ತಳ್ಳುವ ಗಾಡಿ ವಿತರಿಸಿ ಅವರು ಮಾತನಾಡಿದರು.

ಪಾಲಿಕೆಗೆ 125 ಕೋಟಿ ರೂ.  ಅನುದಾನ ಬಂದಿತ್ತು. ಆದರೆ ಕಾಮಗಾರಿಗಳ ಆಯ್ಕೆ ವೇಳೆ ತಡವಾಯಿತು. ಇದೀಗ ಕಾಮಗಾರಿ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರ ಒಪ್ಪಿಗೆಯೂ ಸಿಕ್ಕಿದೆ ಎಂದರು.

ಕೊರೊನಾ ನಡುವೆಯ ಜುಲೈ ಅಂತ್ಯಕ್ಕೆ 15 ಕೋಟಿ ರೂ. ಕಂದಾಯ ವಸೂಲಿಯಾಗಿದೆ. ಈ ಹಣವನ್ನು ಮೂಲ ಸೌಲಭ್ಯದ ಕಾಮಗಾರಿಗಳಿಗೆ ಬಳಸಿಕೊಂಡರೂ, ಇನ್ನೂ  10 ಕೋಟಿ ರೂ. ಉಳಿಯಲಿದೆ. ಶಾಸಕ ಎಸ್.ಎ. ರವೀಂದ್ರನಾಥ್ ಸಹ 10 ಕೋಟಿ ರೂ. ವಿಶೇಷ ಅನುದಾನ ತಂದಿದ್ದಾರೆ. ಹಳೆಯ ಅನುದಾನ 5 ಕೋಟಿ  ಉಳಿದಿದೆ. ಒಟ್ಟು 25 ಕೋಟಿ ರೂ. ಅನುದಾನದಲ್ಲಿ ಅಗತ್ಯ ಯೋಜನೆಗಳಡಿ ಜನರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಮಾತನಾಡಿ,  ಮುಂದಿನ ಒಂದು ತಿಂಗಳ ಒಳಗಾಗಿ 3.78 ಕೋಟಿ ರೂ.ಗಳ ಅನುದಾನದಲ್ಲಿ ಕ್ರೀಡಾಪಟುಗಳಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ವೈದ್ಯಕೀಯ ವೆಚ್ಚ, ವಸತಿ ಸೇರಿದಂತೆೆ ಹಲವು ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದರು.

ಸರ್ಕಾರದಿಂದ ಪರಿಶಿಷ್ಟ ಜಾತಿ, ಪಂಗಡ ವರ್ಗಕ್ಕೆ 2.80 ಕೋಟಿ ರೂ. ಹಾಗೂ ಸಾಮಾನ್ಯ ವರ್ಗಕ್ಕೆ 53.44 ಲಕ್ಷ ಬಿಡುಗಡೆಯಾಗಿದೆ. ವಿಕಲಚೇತರಿಗೆ 43.87 ಲಕ್ಷ ಬಿಡುಗಡೆ ಮಾಡಿದೆ. ಮುಂದಿನ ತಿಂಗಳೊಳಗೆ ಸರ್ಕಾರದ ಎಲ್ಲಾ ಅನುದಾನವನ್ನು ಜನರಿಗೆ ತಲುಪಿಸಲು ಪ್ರಯತ್ನಿಸಲಾಗುವುದು ಎಂದರು.

 ಉಪ ಮೇಯರ್ ಸೌಮ್ಯ ನರೇಂದ್ರನಾಥ್, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್, ತೆರಿಗೆ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ  ಸಮಿತಿ ಅಧ್ಯಕ್ಷೆ ಜಯಮ್ಮ ಗೋಪಿನಾಯ್ಕ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಗಿರಿರಾಜ್, ಸದಸ್ಯ ಎಲ್.ಡಿ. ಗೋಣೆಪ್ಪ ಉಪಸ್ಥಿತರಿದ್ದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸ್ವಾಗತಿಸಿದರು.

error: Content is protected !!