ಸಾಂತ್ವನಕ್ಕೇ ಸಂಬಳವಿಲ್ಲ !

ಸಾಂತ್ವನ ಕೇಂದ್ರಗಳ ಉದ್ಯೋಗಿಗಳ ಕಷ್ಟಕ್ಕೆ ಸ್ಪಂದಿಸಲು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಭರವಸೆ

ದಾವಣಗೆರೆ, ಆ. 28 – ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನೆರವಾಗುವ ಸಾಂತ್ವನ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರಿಗೇ ವರ್ಷದಿಂದ ವೇತನ ಸಿಕ್ಕಿಲ್ಲ!

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಂತ್ವನದ ಉದ್ಯೋಗಿಗಳು ತಮ್ಮ ಕಷ್ಟವನ್ನು ಹೇಳಿಕೊಂಡರು.

ಸಾಂತ್ವನ ಕೇಂದ್ರಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಕೊರೊನಾ ಸಮಸ್ಯೆ ಹಾಗೂ ಪ್ರವಾಹಗ ಳಿಂದಾಗಿ ಆರ್ಥಿಕ ಒತ್ತಡದಿಂದ ಈ ಸಂಸ್ಥೆ ಗಳ ಕಾರ್ಯ ನಿರ್ವಹಣೆಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ನಾಯ್ಡು ತಿಳಿಸಿದರು.

ಈ ಯೋಜನೆಯ ಬಗ್ಗೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೋಜನೆಯ ಶೇ.50ರಷ್ಟಾದರೂ ಹಣ ಬಿಡುಗಡೆ ಮಾಡಿದರೆ ವೇತನ ನೀಡಲು ಸಂಸ್ಥೆಗಳಿಗೆ ಸಾಧ್ಯವಾಗಲಿದೆ. ಈ ಬಗ್ಗೆ ಮುಖ್ಯ ಮಂತ್ರಿಗಳ ಬಳಿ ಮನವಿ ಸಲ್ಲಿಸಲಾಗುವು ದು ಎಂದವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಐದು ಸಾಂತ್ವನ ಕೇಂದ್ರಗಳಿದ್ದು, ಏಪ್ರಿಲ್ ನಂತರದ ಲಾಕ್‌ ಡೌನ್‌ ಅವಧಿಯಲ್ಲಿ 91 ದೂರುಗಳು ದಾಖಲಾಗಿವೆ. ಇವುಗಳಲ್ಲಿ 81 ದೂರು ಗಳನ್ನು ಇತ್ಯರ್ಥಪಡಿಸಲಾಗಿದೆ. ಇದೇ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಶಿಶು ಅಭಿವೃದ್ಧಿ ಯೋಜ ನಾಧಿಕಾರಿಗಳ ಬಳಿ 12 ದೂರುಗಳು ದಾಖಲಾಗಿವೆ. ಈ ಪೈಕಿ ಎಂಟನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್. ವಿಜಯ್ ಕುಮಾರ್ ಮಾಹಿತಿ ನೀಡಿದರು. ಸಿ.ಜಿ. ಆಸ್ಪತ್ರೆ ಆವರಣದಲ್ಲಿ ರುವ ಸಖಿ – ಒನ್ ಸ್ಟಾಫ್‌ ಸೆಂಟರ್‌ನಲ್ಲಿ ಏಪ್ರಿಲ್ ನಂತರ 12 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಲಾಕ್‌ಡೌನ್‌ ಅವಧಿಯಲ್ಲೇ ದೌರ್ಜನ್ಯಗಳು ಹೆಚ್ಚಾಗಿವೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಈ ವರ್ಷ 24,500 ಬಾಣಂತಿಯರನ್ನು ಗುರುತಿಸಲಾಗಿದೆ. ಇವರ ಪೈಕಿ 6,073 ಜನರು ಮಾತೃ ವಂದನೆ ಯೋಜನೆಯಡಿ 5,000 ರೂ.ಗಳ ನೆರವು ಪಡೆಯಲು ಅರ್ಜಿ ಸಲ್ಲಿಸಿದ್ದು, ಅವರೆಲ್ಲರಿಗೂ ನೆರವು ಕಲ್ಪಿಸಲಾಗಿದೆ ಎಂದು ವಿಜಯ್‌ಕುಮಾರ್ ಹೇಳಿದರು.

ಸ್ವಾಧಾರ ಯೋಜನೆಯಡಿ ಜಾಗೃತಿ ಹಾಗೂ ಶುಭೋದಯ ಸಂಘಗಳ ಮೂಲಕ 46 ಮಹಿಳೆಯರು ಹಾಗೂ ನಾಲ್ವರು ಮಕ್ಕಳಿಗೆ ಆಶ್ರಯ ನೀಡಲಾಗಿದೆ. ಮಹಿಳೆಯರಿಗೆ ಟೈಲರಿಂಗ್, ಬ್ಯಾಗ್ ತಯಾರಿಕೆ, ಆಹಾರ ಉತ್ಪಾದನೆ, ಕೃತಕ ಆಭರಣ ಸೇರಿದಂತೆ, ಹಲವು ತರಬೇತಿಗಳನ್ನು ನೀಡಲಾಗಿದೆ ಎಂದವರು ತಿಳಿಸಿದರು.

ಲಾಕ್‌ಡೌನ್‌ ವೇಳೆ ಅತ್ಯಾಚಾರ ಹಾಗೂ ಬಾಲ್ಯವಿವಾಹ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಕುಟುಂಬದವರ ರೀತಿ ಕೆಲಸ ಹಾಗೂ ಹೋರಾಟ ಮಾಡಬೇಕಿದೆ ಎಂದು ತಿಳಿಸಿದ ಆಯೋಗದ ಅಧ್ಯಕ್ಷೆ ನಾಯ್ಡು, ಕಾನೂನಿನ ಅರಿವು ಹಾಗೂ ನೆರವು ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಿಡಿಪಿಒಗಳಾದ ಸದಾನಂದ, ಲೋಕೇಶ್, ಧರಣಿಕುಮಾರ್, ಜಫ್ರುನ್ನಿಸಾ, ವಿವಿಧ ಎನ್.ಜಿ.ಒ.ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸರ್ಕಾರಿ ಕಚೇರಿ ಮುಖ್ಯಸ್ಥರ ಕೋಣೆಗಳಲ್ಲೂ ಸಿಸಿಟಿವಿ
ಮುಖ್ಯಮಂತ್ರಿ ಬಳಿ ಮನವಿ : ನಾಯ್ಡು

ದಾವಣಗೆರೆ, ಆ. 28 – ಸರ್ಕಾರಿ ಕಚೇರಿಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಿರುವ ರೀತಿಯಲ್ಲೇ, ಎಲ್ಲಾ ಕಚೇರಿ ಮುಖ್ಯಸ್ಥರ ಕೋಣೆಗಳಲ್ಲೂ ಸಿಸಿ ಟಿವಿ ಅಳವಡಿಸುವಂತೆ ಆದೇಶ ಹೊರಡಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕಚೇರಿಗಳಲ್ಲಿ ಪಾರದರ್ಶಕತೆ ಇರಬೇಕು. ಅದರಂತೆ ಕಚೇರಿಗಳ ಮುಖ್ಯಸ್ಥರ ಕೋಣೆಗಳಲ್ಲೂ ಸಿಸಿ ಟಿವಿ ಅಳವಡಿಕೆ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಸರ್ಕಾರಿ ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುವ ಘಟನೆಗಳು ವರದಿಯಾಗುತ್ತಿವೆ. ಆದರೆ, ಇಡೀ ಕಚೇರಿಯಲ್ಲಿ ಸಿಸಿ ಟಿವಿ ಇದ್ದರೂ, ಕಚೇರಿಯ ಮುಖ್ಯಸ್ಥರ ಕೋಣೆಯಲ್ಲಿ ಸಿಸಿ ಟಿವಿ ಇರುವುದಿಲ್ಲ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.

ಕುಷ್ಟಗಿ ತಹಶೀಲ್ದಾರ್ ಗುರುಬಸವರಾಜ್ ತಮ್ಮ ಕಚೇರಿಯ ಸಹೋದ್ಯೋಗಿಯನ್ನು ಚುಂಬಿಸಿದ ದೃಶ್ಯ ವೈರಲ್ ಆಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯ ತಮ್ಮ ಗಮನಕ್ಕೆ ಬಂದಿದೆ. ಕೊಪ್ಪಳ ಜಿಲ್ಲೆಯ ಎಸ್ಪಿ ಜೊತೆ ಮಾತನಾಡುವುದಾಗಿ ಹೇಳಿದರು.

ನಗರದ ಶ್ರೀರಾಮ ನಗರದಲ್ಲಿ ಬಾಲಕಿಯರಿಗೆ ಶಾಲೆ ಬೇಕು ಎಂದು ಸ್ಥಳೀಯರು ತಮ್ಮಲ್ಲಿ ಇಂದು ಮನವಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಗಮನಕ್ಕೆ ತರಲಾಗಿದ್ದು, ಶಾಲೆ ಸ್ಥಾಪನೆಗೆ ಅವರು ಸಮ್ಮತಿಸಿದ್ದಾರೆ ಎಂದು ನಾಯ್ಡು ಇದೇ ಸಂದರ್ಭದಲ್ಲಿ ಹೇಳಿದರು.

ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಪ್ರಥಮ ಚಿಕಿತ್ಸೆ ನೀಡಿ, ಆತ್ಮಸ್ಥೈರ್ಯ ತುಂಬಬೇಕು ಹಾಗೂ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಇದಕ್ಕಾಗಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕುಟುಂಬದ ರೀತಿಯಲ್ಲಿ ಕೆಲಸ ಮಾಡಬೇಕು ಎಂದವರು ಅಭಿಪ್ರಾಯ ಪಟ್ಟರು.

ಲಾಕ್‌ಡೌನ್‌ ಸಂದರ್ಭದಲ್ಲಿ ಬಾಲ್ಯ ವಿವಾಹ ಹಾಗೂ ಮಹಿಳಾ ದೌರ್ಜನ್ಯದ ದೂರುಗಳು ಹೆಚ್ಚಾಗಿವೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ತಾವು ಕೊರೊನಾ ಸಂದರ್ಭದಲ್ಲೂ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವುದಾಗಿ ಅವರು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತರಾದಾಗ  ಇಲ್ಲವೇ ಸಾವನ್ನಪ್ಪಿದ ಸಂದರ್ಭದಲ್ಲಿ ತಕ್ಷಣವೇ ಹುದ್ದೆಗಳಿಗೆ ನೇಮಕ ಮಾಡಬೇಕು. ಈ ಬಗ್ಗೆ ಸಿಡಿಪಿಒಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು.

ಯುವ ಪೀಳಿಗೆಯಲ್ಲಿ ತಾಳ್ಮೆ ಕಡಿಮೆ ಇರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಇದು ಕೌಟುಂಬಿಕ ಬಿಕ್ಕಟ್ಟುಗಳಿಗೆ ಕಾರಣವಾಗುತ್ತಿದೆ. ಬಿಕ್ಕಟ್ಟು ಎದುರಾದಾಗ ವೈಜ್ಞಾನಿಕವಾಗಿ ಆಪ್ತ ಸಮಾಲೋಚನೆ ಕೈಗೊಳ್ಳಲು ಮಹಿಳಾ ಆಯೋಗದ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದವರು ಹೇಳಿದರು.

ಪೋಷಕರಿಗೆ ಸಮಸ್ಯೆ : ಕೊರೊನಾ ನಂತರ ಬಾಲ್ಯ ವಿವಾಹಗಳ ದೂರುಗಳು ಹೆಚ್ಚಾಗಿವೆ. ಆದರೆ, ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವುದು ಕಷ್ಟವಾಗುತ್ತಿದೆ. ದೂರದ ಊರುಗಳಿಗೆ ಕಳಿಸಲು ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ. ಪ್ರೇಮದ ಸೆಳೆತಕ್ಕೆ ಸಿಲುಕುವ ಕಳವಳವಿದೆ ಎಂದು ಹಲವಾರು ಪೋಷಕರು ಹೇಳುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವಂತೆ ಜಿಲ್ಲಾಡಳಿತಗಳಿಗೆ ತಿಳಿಸಿದ್ದೇನೆ ಎಂದು ನಾಯ್ಡು ಹೇಳಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್. ವಿಜಯ್ ಕುಮಾರ್ ಉಪಸ್ಥಿತರಿದ್ದರು.

error: Content is protected !!