ಇನ್ನೂ ‍`ನೀಟ್` ಆಗದ ಪರೀಕ್ಷೆಗಳು

ಪದೇ ಪದೇ ಮುಂದೂಡಿಕೆಯಿಂದ ಹೈರಾಣಾದ ವಿದ್ಯಾರ್ಥಿಗಳು

ದಾವಣಗೆರೆ, ಆ. 27 – ಈ ವರ್ಷದ ಪಿಯು ವಿಜ್ಞಾನ ವಿದ್ಯಾರ್ಥಿಗಳ ಸಮಸ್ಯೆಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಕೊರೊನಾ ಕಾರಣದಿಂದಾಗಿ ಓದು ಹಾಗೂ ಪರೀಕ್ಷೆಗೆ ಎದುರಾದ ಆತಂಕಗಳು ಈಗ ನೀಟ್‌ವರೆಗೂ ಕಾಡುತ್ತಿವೆ.

ಕೊರೊನಾ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಮೊಟಕಾಯಿತು. ಕೊನೆ ಹಂತದಲ್ಲಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆಯಾಯಿತು. ಹಾಗೂ ಹೀಗೂ ಪರೀಕ್ಷೆ ಮುಗಿಸುವಷ್ಟರಲ್ಲಿ ನೀಟ್ ಹಾಗೂ ಜೆಇಇ ಪರೀಕ್ಷೆಗಳ ಗೊಂದಲ ಆರಂಭವಾಗುತ್ತಿದೆ. ಈಗಾಗಲೇ ಮುಂದೂಡಿಕೆಯಾಗಿರುವ ಪರೀಕ್ಷೆಗಳನ್ನು  ಇನ್ನೊಮ್ಮೆ ಮುಂದೂಡಲು ಒತ್ತಾಯ ಕೇಳಿ ಬರುತ್ತಿದೆ. 

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30 ಲಕ್ಷ ದಾಟುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಆರು ರಾಜ್ಯಗಳ ಸಚಿವರು  ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರ ನಿಗದಿಯಾದಂತೆ ಸೆಪ್ಟೆಂಬರ್ 13ರಂದು ನೀಟ್ ಪರೀಕ್ಷೆ ಮತ್ತು ಸೆಪ್ಟೆಂಬರ್ 1ರಿಂದ 6ರವರೆಗೆ ಜೆಇಇ ಮೇನ್ ಪರೀಕ್ಷೆ ನಡೆಸುವುದಾಗಿ ಹೇಳುತ್ತಿದೆ.

ಪರೀಕ್ಷೆ ಮುಂದೂಡಿಕೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಪರೀಕ್ಷೆ ನಿಗದಿಯಂತೆ ಮಾಡಿ ಮುಗಿಸಿ, ಓದಿ ಓದಿ ಸಾಕಾಗಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಪರೀಕ್ಷೆ ಮುಂದೂಡಿದರೆ ಅನುಕೂಲವಾಗುತ್ತದೆ ಎಂಬ ಭಾವನೆಯಲ್ಲಿದ್ದರೆ. ಮತ್ತೆ ಕೆಲವರು, ಯಾವಾಗ ಬಂದರೂ ಅಷ್ಟೇ, ನಮಗೇನೂ ವ್ಯತ್ಯಾಸವಿಲ್ಲ ಎಂಬ ಸ್ಥಿತಿಯಲ್ಲಿದ್ದಾರೆ.

ಪರೀಕ್ಷೆಗಾಗಿ ದಿನಕ್ಕೆ ಎಂಟರಿಂದ ಹತ್ತು ಗಂಟೆ ಓದುವುದಾಗಿದೆ. ಮಾರ್ಚ್ ತಿಂಗಳಿನಿಂದಲೂ ಪಿಯು, ಸಿಇಟಿ, ನೀಟ್ ಎಂದು ನಿರಂತರ ಓದುವುದೇ ಆಗಿದೆ. ಪರೀಕ್ಷೆ ಮುಗಿದರೆ ಸಾಕಾಗಿದೆ ಎಂದು ವಿದ್ಯಾರ್ಥಿನಿ ಎಂ.ಆರ್. ನಿಧಿ ಹೇಳುತ್ತಾರೆ.

ಪರೀಕ್ಷೆಯಷ್ಟೇ ಅಲ್ಲದೇ, ಅದರಾಚೆಗಿನ ಓದಿನ ಬಗ್ಗೆಯೂ ಗಮನ ಹರಿಸಬೇಕಿದೆ. ಪರೀಕ್ಷೆ ತಡವಾದಷ್ಟೂ ಮುಂದಿನ ವರ್ಷದ ಓದಿಗೆ ಸಮಸ್ಯೆಯಾಗುತ್ತದೆ. ಹೀಗಿರುವಾಗ ಪರೀಕ್ಷೆ ಮಂದೂಡುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ನಿಧಿ.

ಕೊರೊನಾ ಕಾರಣಕ್ಕಾಗಿ ಪರೀಕ್ಷೆಗಳನ್ನು ಮುಂದೂಡುವುದರಲ್ಲಿ ಅರ್ಥವಿಲ್ಲ ಎನ್ನುವ ವಿದ್ಯಾರ್ಥಿ ಮನೋಜ್ ದಯಾನಂದ್, ಕೊರೊನಾ ನಡುವೆಯೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಸಿಇಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಹೀಗಾಗಿ ನೀಟ್ ಮಾತ್ರ ಬೇಡ ಎನ್ನುವುದು ಸರಿಯಲ್ಲ ಎಂದಿದ್ದಾರೆ.

ಆದರೆ, ಸಿಇಟಿ ದಾಖಲೆಗಳ ಪರಿಶೀಲನೆಗೆ ನೀಟ್ ನಡುವೆಯೇ ಸಮಯ ನಿಗದಿ ಪಡಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಸಮಸ್ಯೆ ತರುತ್ತಿದೆ ಎಂದವರು ಹೇಳಿದ್ದಾರೆ.

ಪರೀಕ್ಷೆ ದಿನಾಂಕ ಏನೇ ಆದರೂ ಮಾನಸಿಕವಾಗಿ ಸಿದ್ಧವಾಗಿದ್ದೇನೆ. ವರ್ಷವಿಡೀ ಅರೆ ಬರೆ ಓದುವುದು, ಪರೀಕ್ಷೆ ಮುಂದೂಡುವುದು ಒಂದು ರೀತಿ ಅಭ್ಯಾಸದಂತಾಗಿದೆ. ಆದರೆ, ತೀರಾ ತಡವಾಗಿ, ಶೈಕ್ಷಣಿಕ ವರ್ಷ ಕೈ ತಪ್ಪಬಾರದು ಎಂದು ನೀಟ್ ಹಾಗೂ ಜೆಇಇ ಪರೀಕ್ಷೆಗಳೆರಡರ ಸಿದ್ಧತೆಯಲ್ಲಿರುವ ವಿದ್ಯಾರ್ಥಿ ಶ್ರೀಹರಿ ಹೇಳಿದ್ದಾರೆ.

ಈಗಾಗಲೇ ದ್ವಿತೀಯ ಪಿಯುಸಿಯಲ್ಲಿರುವ ನನ್ನ ತಮ್ಮನ ಓದು ಅರ್ಧ ಮುಗಿದಿದೆ. ಇನ್ನು ಸ್ವಲ್ಪ ದಿನದಲ್ಲಿ ಅವನೂ ಓದು ಮುಗಿಸಿ, ನಾವಿಬ್ಬರೂ ಜೊತೆಗೇ ಪರೀಕ್ಷೆ ಎದುರಿಸುವ ಸ್ಥಿತಿ ಬರಬಾರದು. ಒಂದೇ ವರ್ಷದ ಸೀಟುಗಳಿಗೆ ಎರಡು ವರ್ಷಗಳ ವಿದ್ಯಾರ್ಥಿಗಳು ಸ್ಪರ್ಧಿಸುವಂತಾದರೆ ತೊಂದರೆ ತಪ್ಪಿದ್ದಲ್ಲ ಎಂದವರು ತಿಳಿಸಿದ್ದಾರೆ.

ನೀಟ್ ಹಾಗೂ ಜೆಇಇ ಪರೀಕ್ಷೆಗಳನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಪ್ರತಿ ಬಾರಿ ಪರೀಕ್ಷೆ ಮುಂದೂಡುತ್ತಾ ಬಂದಾಗಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆಯೇ ಹೊರತು ಕಡಿಮೆಯಾಗಿಲ್ಲ. ಈಗ ಕೊರೊನಾ ಉಲ್ಬಣಿಸಿದೆ ಎಂದು ನೀಟ್ ಮುಂದೂಡಿದರೆ ಸೋಂಕಿತರ ಸಂಖ್ಯೆ ಮುಂದೆ ಹೆಚ್ಚಾಗದು ಎಂಬ ಗ್ಯಾರಂಟಿ ಏನೂ ಇಲ್ಲ. ಹೀಗಾಗಿ ಸಕಾರಣವಿಲ್ಲದ ಮುಂದೂಡಿಕೆ ವಿದ್ಯಾರ್ಥಿಗಳಿಗೆ ನೆರವಾಗುವ ಬದಲು ಸಮಸ್ಯೆ ತರುವುದರಲ್ಲಿ ಸಂಶಯವಿಲ್ಲ.

error: Content is protected !!