ದಾವಣಗೆರೆ, ಆ. 27- ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪೇಟೆಂಟ್‌ಗಳನ್ನು ಪಡೆದುಕೊಳ್ಳಲು ತಗಲುವ ಶುಲ್ಕವನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಗುಣ ಮಟ್ಟದ ಸಂಶೋಧನೆಗಳನ್ನು ಕೈಗೊಂಡು ಈ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಸಹಯೋಗದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ 11ನೇ ಸಂಸ್ಥಾಪನಾ ದಿನಾಚರಣೆ ಸ್ಮರಣೆಗಾಗಿ ಆರಂಭಿಸಿರುವ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಘಟಕಕ್ಕೆ ಆನ್‌ಲೈನ್ ಮೂಲಕ ಮೊನ್ನೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಯುವ ಸಂಶೋಧಕರಿಂದ ಹಲವು ಸಂಶೋಧನೆಗಳಾಗುತ್ತಿವೆ. ಈ ಸಂಶೋಧಕರು ಬೌದ್ಧಿಕ ಆಸ್ತಿ ಹಕ್ಕಿನ ಮಹತ್ವ ಅರಿತುಕೊಂಡು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಶೋಧನೆಗಳಿಗೆ ಹಕ್ಕು ಸ್ವಾಮ್ಯ ಪಡೆದುಕೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡಿರುವ ಈ ಘಟಕವು ಯುವ ಸಂಶೋಧಕರಿಗೆ ಪೇಟೆಂಟ್, ಕಾಪಿರೈಟ್, ಟ್ರೇಡ್ ಮಾರ್ಕ್ಸ್, ಡಿಸೈನ್ ರಿಜಿಸ್ಟ್ರೇಷನ್‌ನಂತಹ ಬೌದ್ಧಿಕ ಆಸ್ತಿ ಹಕ್ಕುಗಳನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳಲು ನೆರವಾಗಲಿದೆ. ಈ ಘಟಕದ ಮೂಲಕ ಬಹಳಷ್ಟು ಒಳ್ಳೆಯ ಸಂಶೋಧನೆಗಳಿಗೆ ಹಕ್ಕು ಸ್ವಾಮ್ಯ ಸಿಗುವಂತಾಗಲಿದೆ ಎಂದು ಅಶ್ವತ್ಥನಾರಾಯಣ ಆಶಿಸಿದರು.
ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಲು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಮೂಲಕ ರಾಜ್ಯ ಸರ್ಕಾರವು ಪೇಟೆಂಟ್ ಶುಲ್ಕವನ್ನು ಭರಿಸುತ್ತಿದ್ದು, ಯುವ ಸಂಶೋಧಕರು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್‌ನ ಕಾರ್ಯನಿರ್ವಹಣಾ ಕಾರ್ಯದರ್ಶಿ ಹೆಚ್. ಹೇಮಂತ್‌ಕುಮಾರ್ ಅವರು, ಬೌದ್ಧಿಕ ಆಸ್ತಿ ಹಕ್ಕಿನ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್‌ನ ನೆರವಿನೊಂದಿಗೆ ಬೌದ್ಧಿಕ ಆಸ್ತಿ ಹಕ್ಕು ಘಟಕವನ್ನು ಆರಂಭಿಸಿದ್ದೇವೆ. ನಮ್ಮ ವಿಶ್ವವಿದ್ಯಾಲಯದ ಹಾಗೂ ಅಧೀನ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಕೈಗೊಳ್ಳುವ ಗುಣಮಟ್ಟದ ಸಂಶೋಧನೆಗಳಿಗೆ ಹಕ್ಕು ಸ್ವಾಮ್ಯ ಪಡೆದುಕೊಳ್ಳಲು ಈ ಘಟಕವು ನೆರವು ನೀಡಲಿದೆ ಎಂದು ಹೇಳಿದರು.
ನ್ಯಾಕ್ ಸಂಚಾಲಕ ಡಾ. ನಾಗಸ್ವರೂಪ ಅವರು ಬೌದ್ಧಿಕ ಹಕ್ಕು ಘಟಕಗಳ ದ್ಯೇಯೋದ್ಧೇ ಶಗಳನ್ನು ವಿವರಿಸಿದರು.
ಕೆ ಎಸ್ ಸಿ ಎಸ್ ಟಿ ಸಲಹೆಗಾರ ವಿವೇಕ್ ಆನಂದ್ ಸಾಗರ್ ಅವರು ತಮ್ಮ ಉಪನ್ಯಾಸದಲ್ಲಿ, ಭಾರತೀಯ ವೈಜ್ಞಾನಿಕ ಸಂಗತಿಗಳು ಪಾರಂಪರಿಕವಾಗಿ ಸಾಗುತ್ತಲೇ ಬಂದಿರುತ್ತದೆ. ಅರಿಶಿನದಿಂದ ಆರಂಭವಾದ ಪೇ ಟೆಂಟ್ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ ಎಂದರು.
ಕೆ ಎಸ್ ಸಿ ಎಸ್ ಟಿ ಸಂಚಾಲಕ ನಾಗಾರ್ಜುನ್ ಅವರು ಮಾತನಾಡಿ, ಪೇಟೆಂಟ್ ಗಳ ವಿಧಗಳು ಮತ್ತು ಭೌಗೋಳಿಕ ಪ್ರಾಮುಖ್ಯತೆ, ನೋಂದಣಿ ಮಾಡುವ ಪ್ರಕ್ರಿಯೆ ವಿನ್ಯಾಸ ಕುರಿತಂತೆ ಮಾಹಿತಿ ನೀಡಿದರು.
ಕುಲ ಸಚಿವ ಪ್ರೊ. ಬಸವರಾಜ್ ಬಣಕಾರ್, ಪರೀಕ್ಷಾಂಗ ಕುಲಸಚಿವೆ ಪ್ರೊ. ಹೆಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರೊ. ಗೋಪಾಲ್ ಎಂ. ಅಡವಿರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆರಂಭದಲ್ಲಿ ಸ್ವಾಗತ ಕೋರಿದ ಐಕ್ಯುಎಸಿ ಘಟಕದ ನಿರ್ದೇಶಕರಾದ ಡಾ. ಗಾಯತ್ರಿ ದೇವರಾಜ್ ಅವರು, ಕೆ ಎಸ್ ಸಿ ಎಸ್ ಟಿ – ದಾವಣಗೆರೆ ವಿಶ್ವವಿದ್ಯಾನಿಲಯ ಆಸ್ತಿ ಹಕ್ಕು ಗಳ ಘಟಕವು ಯುವ ವಿಶ್ವವಿದ್ಯಾನಿಲಯಕ್ಕೆ ವಿಶೇಷ ವಾದ ಅವಕಾಶವಾಗಿದ್ದು ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ದ್ಯೋತಕ ವಾಗಲಿದೆ ಎಂದರು.
ಐ ಕ್ಯೂ ಎ ಸಿ ಸಹ ಸಂಚಾಲಕ ಡಾ. ಶಿವರಾಜ್ ಕುಮಾರ್ ವಂದಿಸಿದರು.