ಮಾಯಕೊಂಡದಿಂದ ಕಂದಗಲ್ವರೆಗೆ 22 ಕೀ.ಮೀ ಉದ್ದದ ರಸ್ತೆ ಹಾಗೂ ಮಳಲ್ಕೆರೆ ಬಳಿ ಶ್ಯಾಗಲೆ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯನ್ನು 22 ಕೋಟಿ ರೂ.ವೆಚ್ಚದ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ, ಆ.27- ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ಬಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಹಳ್ಳಿಗಳು ಪಟ್ಟಣಗಳೊಂದಿಗೆ ಸಂಪರ್ಕ ಹೊಂದುವಂತಾಗಿವೆ ಎಂದು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರು ತಿಳಿಸಿದ್ದಾರೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಂದಗಲ್ಲು ಗ್ರಾಮದಲ್ಲಿ ಮಾಯಕೊಂಡದಿಂದ ಕಂದಗಲ್ವರೆಗೆ 22 ಕೀ.ಮೀ ಉದ್ದದ ರಸ್ತೆ ಹಾಗೂ ಮಳಲ್ಕೆರೆ ಬಳಿ ಶ್ಯಾಗಲೆ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯನ್ನು 22 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಇಂದು ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಿ.ಎಂ.ಜಿ.ಎಸ್.ವೈ ಯೋಜನೆ ಜಾರಿಗೆ ಬಂದ ಮೇಲೆ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಗೊಂಡಿವೆ. ರೈತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಕೂಡ ಈ ರಸ್ತೆಗಳು ಅತ್ಯಂತ ಉಪಯುಕ್ತವಾಗಿವೆ.
ರಸ್ತೆ ನಿರ್ಮಾಣ ವಿಷಯದಲ್ಲಿ ಗುಣಮಟ್ಟದಲ್ಲಿ ರಾಜಿಯಾಗದೇ ಇಂದಿಗೂ ಕೂಡ ವಿಶಿಷ್ಟ ಸ್ಥಾನದಲ್ಲಿ ಗ್ರಾಮ ಸಡಕ್ ರಸ್ತೆಗಳು ನಿಂತಿವೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ-3 ರಡಿ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 166 ಕಿ.ಮೀ ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲು 140 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪ್ರತಿ ವಿಧಾ ನಸಭಾ ಕ್ಷೇತ್ರದಲ್ಲಿ ಸುಮಾರು 20 ರಿಂದ 25 ಕಿ.ಮೀ ರಸ್ತೆಗಳು ಅಭಿವೃದ್ಧಿಯಾಗಲಿವೆ. 2020-21 ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ 19500 ಕೋಟಿಯಷ್ಟು ಅನುದಾನವನ್ನು ಪಿ.ಎಂ.ಜಿ.ಎಸ್.ವೈ. ಯೋಜನೆಗೆ ಮೀಸಲಾಗಿ ಟ್ಟಿದ್ದು, ಒಟ್ಟಾರೆಯಾಗಿ 1.21 ಲಕ್ಷ ಕೋಟಿ ಯಷ್ಟು ಅನುದಾನವನ್ನು ಗ್ರಾಮೀಣಾಭಿವೃದ್ಧಿಗೆ ಮೀಸಲಾಗಿಡುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ.
ಈ ಯೋಜನೆಯಡಿ ನಿರ್ಮಾಣವಾಗುವ ರಸ್ತೆಗಳಿಗೆ ಹತ್ತು ವರ್ಷಗಳ ಕಾಲ ನಿರ್ವಹಣಾ ಅವಧಿಯಿರುತ್ತದೆ, ಆರು ವರ್ಷಗಳ ನಂತರ ಗುತ್ತಿಗೆ ಪಡೆದ ಗುತ್ತಿಗೆದಾರರು ಮತ್ತೊಮ್ಮೆ ಪೂರ್ತಿ ರಸ್ತೆಗಳನ್ನು ಡಾಂಬರೀಕರಣ ಮಾಡಿಕೊಡುವಂತಹ ವ್ಯವಸ್ಥೆ ಈ ಸಾಲಿನಿಂದ ಜಾರಿಗೆ ಬಂದಿದೆ. ರಸ್ತೆ ನಿರ್ಮಾಣವಾ ಗುವಾಗಲೇ ಇದರ ಉಪಯೋಗ ಪಡೆಯುವ ಸುತ್ತಮುತ್ತಲಿನ ಗ್ರಾಮಸ್ಥರು ಇದರ ಬಗ್ಗೆ ನಿಗಾವಹಿಸಿ ರಸ್ತೆ ಕಾಮಗಾರಿ ಕಳಪೆಯಾ ಗದಂತೆ ಉಸ್ತುವಾರಿ ವಹಿಸಬೇಕು. ಇದಕ್ಕೆ ಬಳಕೆಯಾಗುವ ಪ್ರತಿಯೊಂದು ರೂಪಾಯಿ ನೀವು ಕಟ್ಟಿದ ತೆರಿಗೆ ಹಣ ಎನ್ನುವುದನ್ನು ನೀವು ಮರೆಯಬಾರದು. ಸಾರ್ವಜನಿಕರಲ್ಲಿ ಜಾಗೃತಿ ಮೂಡುವವರೆಗೆ ಯಾವುದೇ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುವುದು ಕಷ್ಟಸಾಧ್ಯ, ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದೆ ಎಂದು ಸಿದ್ದೇಶ್ವರ ಅವರು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಲಿಂಗಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ್, ಉಪಾಧ್ಯಕ್ಷರಾದ ಸಾಕಮ್ಮ ಗಂಗಾಧರನಾಯ್ಕ್, ಜಿ.ಪಂ ಸದಸ್ಯರಾದ ಶ್ರೀಮತಿ ಶೈಲಜಾ ಬಸವರಾಜ್, ಮಾಜಿ ಶಾಸಕ ಎಂ.ಬಸವರಾಜನಾಯ್ಕ, ಮಂಡಲ ಬಿಜೆಪಿ ಅಧ್ಯಕ್ಷ ಶ್ಯಾಗಲೆ ದೇವೇಂದ್ರಪ್ಪ, ಮುಖಂಡರುಗಳಾದ ಅಣಬೇರು ಜೀವನಮೂರ್ತಿ. ಕಂದಗಲ್ ತಾ.ಪಂ. ಸದಸ್ಯರಾದ ಪರಮೇಶ್ವರಪ್ಪ, ಅಶೋಕ್, ಅತ್ತಿಗೆರೆ ದೇವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.