ನವದೆಹಲಿ, ಆ. 26 – ಎನ್.ಪಿ.ಎ. ಪ್ರಮಾಣ ಉಲ್ಬಣಿಸುತ್ತಿರುವ ಹಾಗೂ ಐ.ಬಿ.ಸಿ. ಸಂಹಿತೆಯ ಹೊರಗೆ ಸಾಲಗಳನ್ನು ಇತ್ಯರ್ಥ ಮಾಡಬೇಕಿರುವ ಈ ಪರಿಸ್ಥಿತಿಯಲ್ಲಿ ‘ಕೆಟ್ಟ ಬ್ಯಾಂಕ್’ ರೂಪಿಸುವುದು ಅನಿವಾರ್ಯ ಎಂದು ಆರ್.ಬಿ.ಐ. ಮಾಜಿ ಗವರ್ನರ್ ಡಿ. ಸುಬ್ಬರಾವ್ ಅಭಿಪ್ರಾಯ ಪಟ್ಟಿದ್ದಾರೆ.
2017ರ ಆರ್ಥಿಕ ಸಮೀಕ್ಷೆಯಲ್ಲೂ ಸಹ ಕೆಟ್ಟ ಬ್ಯಾಂಕ್ ರೂಪಿಸುವ ಪ್ರಸ್ತಾಪ ಮಾಡಲಾ ಗಿತ್ತು. ಇದಕ್ಕೆ ‘ಪಬ್ಲಿಕ್ ಸೆಕ್ಟರ್ ಅಸೆಟ್ ರಿಹ್ಯಾಬಿ ಲಿಟೇಷನ್ ಏಜೆನ್ಸಿ’ (ಪಿ.ಎ.ಆರ್.ಎ.) ಎಂಬ ಹೆಸರಿಡಲಾಗಿತ್ತು. ಎನ್.ಪಿ.ಎ. ಸಾಲಗಳನ್ನು ಮಾತ್ರ ಬೇರೆ ಬ್ಯಾಂಕುಗಳಿಂದ ಖರೀದಿಸಿ ಅವುಗಳನ್ನು ಇತ್ಯರ್ಥಪಡಿಸುವ ಬ್ಯಾಂಕುಗಳಿಗೆ ‘ಕೆಟ್ಟ ಬ್ಯಾಂಕ್’ ಎಂದು ಕರೆಯಲಾಗುತ್ತದೆ.
ಕೆಟ್ಟ ಬ್ಯಾಂಕ್ ಸ್ಥಾಪಿಸಿದಾಗ ನಿಷ್ಕ್ರಿಯ ಆಸ್ತಿಗಳ ಬೆಲೆಯನ್ನು ನಿಗದಿಪಡಿಸುವ ಹಾಗೂ ಬೆಲೆ ಒಪ್ಪಿಕೊಳ್ಳುವ ಸಂಸ್ಥೆಗಳನ್ನು ಬೇರೆ ಬೇರೆ ಮಾಡಿದಂತಾಗುತ್ತದೆ. ಇದರಿಂದಾಗಿ ಭ್ರಷ್ಟಾಚಾರ ಹಾಗೂ ಹಿತಗಳ ಸಂಘರ್ಷ ತಪ್ಪುತ್ತದೆ. ಈ ಕುರಿತ ಆರೋಪ ಮಾಡುವುದೂ ಸಹ ನಿಲ್ಲುತ್ತದೆ ಎಂದು ಸುಬ್ಬರಾವ್ ತಿಳಿಸಿದ್ದಾರೆ.
ಅತ್ಯುತ್ತಮ ಮಾದರಿಗಳ ಮೂಲಕ ಕೆಟ್ಟ ಬ್ಯಾಂಕುಗಳನ್ನು ರೂಪಿಸಿರುವ ಉದಾಹರಣೆಗಳಿವೆ. ಮಲೇಷಿಯಾದ ದನಹರ್ತಾ ಬ್ಯಾಂಕು ಕೆಟ್ಟ ಬ್ಯಾಂಕುಗಳಿಗೆ ಒಂದು ಒಳ್ಳೆಯ ಉದಾಹರಣೆಯಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಬ್ಬರಾವ್ ತಿಳಿಸಿದ್ದಾರೆ.
ಈ ವರ್ಷ ಆರ್ಥಿಕತೆ ಶೇ.5ರಷ್ಟು ಕಿರಿದಾಗುತ್ತಿರುವ ಹಿನ್ನೆಲೆಯಲ್ಲಿ ಎನ್.ಪಿ.ಎ. ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಆರ್.ಬಿ.ಐ. ವರದಿಯ ಪ್ರಕಾರ ಮಾರ್ಚ್ 2021ರ ವೇಳೆಗೆ ಎನ್.ಪಿ.ಎ. ಪ್ರಮಾಣ ಶೇ.12.5ಕ್ಕೆ ತಲುಪಬಹುದಾಗಿದೆ ಎಂದವರು ಹೇಳಿದ್ದಾರೆ.
ದಿವಾಳಿ ಸಂಹಿತೆ ಚೌಕಟ್ಟಿನ ಮೇಲೆ ಈಗಾಗಲೇ ಅತಿಯಾದ ಹೊರೆ ಬಿದ್ದಿದೆ. ಅಲ್ಲಿ ಇನ್ನಷ್ಟು ಹೊರೆ ಹೇರಲಾಗದು. ಹೀಗಾಗಿ ದಿವಾಳಿ ಸಂಹಿತೆ ಚೌಕಟ್ಟಿನ ಹೊರಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.