ನ್ಯೂಯಾರ್ಕ್, ಆ. 26 – ಕೊರೊನಾ ವೈರಸ್ ಸೋಂಕು ಬಂದಾಗ ರೋಗ ನಿರೋಧಕತೆಗಾಗಿ ಬಿಡುಗಡೆಯಾಗುವ ‘ಟಿ ಕಣ’ಗಳು ಮಹಿಳೆಯರಲ್ಲಿ ಹೆಚ್ಚು ಸಶಕ್ತವಾಗಿರುತ್ತವೆ. ಹೀಗಾಗಿಯೇ ಸೋಂಕು ಬಂದಾಗ ಮಹಿಳೆ ಹಾಗೂ ಪುರುಷರ ರೋಗ ನಿರೋಧಕತೆಯಲ್ಲಿ ವ್ಯತ್ಯಾಸವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ನೇಚರ್ ನಿಯತಕಾಲಿಕದಲ್ಲಿ ಅಧ್ಯಯನ ಪ್ರಕಟಿಸ ಲಾಗಿದೆ. ಅಮೆರಿಕದ ಯಾಲೆ ನ್ಯೂ ಹ್ಯಾವನ್ ಆಸ್ಪತ್ರೆಯಲ್ಲಿ 98 ರೋಗಿಗಳ ಅಧ್ಯಯನ ನಡೆಸಿ ಈ ವರದಿ ರೂಪಿಸಲಾಗಿದೆ.
ಕೊರೊನಾ ವೈರಸ್ ಮಹಿಳೆಯರಿಗಿಂತ ಪುರುಷರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ಈ ಹಿಂದಿನಿಂದಲೂ ಕಂಡು ಬರುತ್ತಿತ್ತು. ಆದರೆ, ಇದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿರಲಿಲ್ಲ ಎಂದು ಯಾಲೆ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹೇಳಿದ್ದಾರೆ.
ಇತ್ತೀಚಿನ ಅಧ್ಯಯನದ ಪ್ರಕಾರ ಸೋಂಕು ಬಂದಾಗ ಅದನ್ನು ತಡೆಯಲು ಬಿಡುಗಡೆಯಾಗುವ ಟಿ ಸೆಲ್‌ಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಶಕ್ತವಾಗಿರುವುದು ಕಂಡು ಬಂದಿದೆ. ರೋಗ ನಿರೋಧಕತೆಯಲ್ಲಿ ಟಿ ಕಣಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಕಣಗಳು ಸೋಂಕಿತ ಸೆಲ್‌ಗಳನ್ನು ಕೊಲ್ಲುವ ಕಾರ್ಯವನ್ನೂ ಮಾಡುತ್ತವೆ.
ಟಿ ಕಣಗಳ ಸ್ಪಂದನೆ ಕಡಿಮೆಯಾದಾಗ ಪುರುಷ ರೋಗಿಗಳ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸುತ್ತವೆ ಎಂದು ಯಾಲೆ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಅಕಿಕೊ ಇವಾಸಾಕಿ ಹೇಳಿದ್ದಾರೆ. ಪುರುಷ ರೋಗಿಗಳ ವಯಸ್ಸು ಹೆಚ್ಚಾದಂತೆ ಟಿ ಕಣಗಳ ಸ್ಪಂದನೆ ಕಡಿಮೆಯಾಗುವುದು ಕಂಡು ಬಂದಿದೆ. ಆದರೆ, ಮಹಿಳಾ ರೋಗಿಗಳಲ್ಲಿ ಈ ರೀತಿ ಆಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಆದರೆ, ಕೊರೊನಾ ವೈರಸ್ ತೀವ್ರತೆ ಮಹಿಳೆ ಹಾಗೂ ಪುರುಷರಲ್ಲಿ ಬೇರೆ ಬೇರೆಯಾಗಿರುವುದಕ್ಕೆ ಇನ್ನೂ ಹಲವಾರು ಕಾರಣಗಳಿರು ವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.