ದಾವಣಗೆರೆ, ಆ.26- ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಜಿಲ್ಲೆಯ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಾರಂಭಿಸಲಾಗಿದ್ದ ಮೈಸೂರು ಸೀಲ್ಕ್ಸ್ ಮಾರಾಟ ಮಳಿಗೆಯನ್ನು ಇದೀಗ ಏಕಾಏಕಿ ಎತ್ತಂಗಡಿ ಮಾಡಲು ಅಧಿಕಾರಿಗಳು ಸಂಚು ರೂಪಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಎಸ್ಸೆಸ್, ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಹಾಗೂ ಜಿಲ್ಲೆಯ ಶಾಸಕರುಗಳ ಸಹಕಾರ ಪಡೆದು ನಗರದಲ್ಲಿ ಆರಂಭಿಸಲಾಗಿದ್ದ ಈ ಮಳಿಗೆಯನ್ನು ಮುಚ್ಚಲು ಮುಂದಾಗಿರುವುದು ಖಂಡನಿಯ ಎಂದು ಕೆಎಸ್‍ಐಸಿ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ನಗರ ಪಾಲಿಕೆಯ ವಾಣಿಜ್ಯ ಮಳಿಗೆಯಲ್ಲಿ ಮೈಸೂರು ಸೀಲ್ಕ್ಸ್ ಶೋ ರೂಂ ಅನ್ನು 2016ರ ಜು. 19ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಸಿದ್ದರಾಮಯ್ಯ ಅವರು ತಮ್ಮ ಶ್ರೀಮತಿಯವರಿಗೆ ಒಂದು ಲಕ್ಷದ ರೇಷ್ಮೆ ಸೀರೆಯನ್ನು ಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸ್ಮಾರ್ಟ್ ಸಿಟಿಯಾಗಿರುವ ದಾವಣಗೆರೆಯಲ್ಲಿ ಮೈಸೂರು ಸಿಲ್ಕ್ ಶೋರೂಂ ಪ್ರಾರಂಭದಿಂದಲೂ ಉತ್ತಮ ವ್ಯಾಪಾರ ನಡೆಸುತ್ತಾ ಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಜನರು ನಗರ ಕ್ಕಾಗಮಿಸಿ ಕೆಎಸ್‍ಐಸಿ ಮಾರಾಟ ಮಳಿಗೆ ಯಿಂದ ರೇಷ್ಮೆ ಸೀರೆ ಹಾಗೂ ವಸ್ತ್ರಗಳನ್ನು ಖರೀದಿಸುತ್ತಿದ್ದರು. ಈ ಮಾರಾಟ ಮಳಿಗೆಗೆ ನೀಡಿದ ಗುರಿಗಿಂತಲೂ ಹೆಚ್ಚಿನ ವ್ಯಾಪಾರ ಮಾಡಿ ಗುರಿ ಸಾಧಿಸಲಾಗಿದೆ. ಆದರೆ ಇದಕ್ಕಿದ್ದ ಹಾಗೆ ದಾವಣಗೆರೆ ಮಾರಾಟ ಮಳಿಗೆಯನ್ನು ರದ್ದುಗೊಳಿಸಲು ಕೆಎಸ್‍ಐಸಿ ಆಡಳಿತ ಮಂಡಳಿಯು ಅವೈಜ್ಞಾನಿಕವಾಗಿ ತೀರ್ಮಾನಿಸಲಾಗಿದೆ ಎಂದು ಆಕ್ಷೇಪಿಸಿದರು.
ಯಾವುದೇ ಕಾರಣಕ್ಕೂ ಮಾರಾಟ ಮಳಿಗೆ ತೆರವುಗೊಳಿಸಲು ಬಿಡುವುದಿಲ್ಲ. ಪಕ್ಷಾತೀತವಾಗಿ ಹೋರಾಟ ನಡೆಸುವುದಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶರಾವ್ ಜಾಧವ್, ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಸೈಯದ್ ಚಾರ್ಲಿ, ಮುಖಂಡರುಗಳಾದ ಸುಷ್ಮ, ರಾಜೇಶ್ವರಿ, ಶುಭ ಮಂಗಳ, ಕೆ.ಎನ್. ಮಂಜುನಾಥ್, ಮಧುಕುಮಾರ್, ಜೆ.ಬಿ. ವೆಂಕಟೇಶ, ಹರ್ಷದ್ ಅಲಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.