ಲಂಡನ್, ಆ. 25 – ಏಪ್ರಿಲ್ ತಿಂಗಳಲ್ಲಿ ಕೊರೊನಾ ಸೋಂಕಿಗೆ ಗುರಿಯಾಗಿ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಪ್ರಕರಣ ವನ್ನು ಅಧಿಕೃತವಾಗಿ ದಾಖಲಿಸಲಾಗಿದೆ.
ಈ ತಿಂಗಳು ಯುರೋಪ್‌ನಿಂದ ಹಾಂಕಾಂಗ್‌ಗೆ ಮರಳಿದ್ದ 33 ವರ್ಷದ ವ್ಯಕ್ತಿಯಲ್ಲಿ ಎರಡನೇ ಬಾರಿ ಕೊರೊನಾ ಸೋಂಕು ಬಂದಿರುವುದು ಪತ್ತೆಯಾಗಿದೆ.
ಹಾಂಕಾಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಜಿನೋಮ್ ಅಧ್ಯಯನ ನಡೆಸಿ ಆತನಿಗೆ ಎರಡು ಬೇರೆ ಬೇರೆ ರೂಪಾಂತರಣದ ಕೊರೊನಾ ಸೋಂಕು ಗಳು ಬಂದಿವೆ ಎಂದು ತಿಳಿಸಿದ್ದಾರೆ.
ಟೆಕಿ ಆಗಿರುವ ಈ ವ್ಯಕ್ತಿಗೆ ಮೊದಲ ಬಾರಿಗೆ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಆದರೆ, ಎರಡನೇ ಬಾರಿ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಹೀಗಾಗಿ ಎರಡನೇ ಬಾರಿಗೆ ಬಂದಿರುವ ಸೋಂಕು ಲಘು ತೀವ್ರತೆಯದ್ದು ಎಂದು ಸಂಶೋಧಕರು ಹೇಳಿದ್ದಾರೆ.
ಈ ಬೆಳವಣಿಗೆಯಿಂದಾಗಿ ಕೊರೊನಾ ಕುರಿತು ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಕೊರೊನಾ ಸೋಂಕು ಒಬ್ಬನೇ ವ್ಯಕ್ತಿಗೆ ಮತ್ತೆ ಮತ್ತೆ ಬರುತ್ತದೆಯೇ? ಅದರ ಬೇರೆ ಬೇರೆ ರೂಪಾಂತರಣದ ಸೋಂಕುಗಳ ಕಾರಣ ದಿಂದಾಗಿ ಲಸಿಕೆ ಕೆಲಸ ಮಾಡುವುದಿ ಲ್ಲವೇ? ಶೀತದಂತೆಯೇ ಕೊರೊನಾ ಸೋಂಕೂ ಸಹ ಮತ್ತೆ ಮತ್ತೆ ಬರುತ್ತ ದೆಯೇ? ಒಮ್ಮೆ ಸೋಂಕು ಬಂದ ನಂತರ, ಇನ್ನೊಮ್ಮೆ ಸೋಂಕು ಬಂದರೂ ಅದು ತೀವ್ರ ಸ್ವರೂಪದ್ದಾಗಿರುವು ದಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಈಗ ಸಂಶೋಧಕರನ್ನು ಕಾಡತೊಡಗಿವೆ.
ಕೊರೊನಾ ವೈರಸ್ ಮನುಷ್ಯರಲ್ಲಿ ಉಳಿದುಕೊಂಡೇ ಇರುತ್ತದೆ ಎಂಬುದು ನಮ್ಮ ಸಂಶೋಧನೆಗಳು ಇಂಗಿತ ವ್ಯಕ್ತಪ ಡಿಸುತ್ತಿವೆ ಎಂದು ಹಾಂಕಾಂಗ್ ವಿಶ್ವವಿದ್ಯಾ ನಿಲಯದ ಕ್ವಾಕ್ – ಯಂಗ್ ಮತ್ತು ಸಹೋದ್ಯೋಗಿಗಳು ಹೇಳಿದ್ದಾರೆ.
ಹಾಂಕಾಂಗ್ ಮರು ಸೋಂಕಿನ ಬಗ್ಗೆ ಅತಿಯಾದ ಗಾಬರಿ ಬೇಡ : ಐ.ಸಿ.ಎಂ.ಆರ್.
ನವದೆಹಲಿ, ಆ. 25 – ಹಾಂಕಾಂಗ್ ವ್ಯಕ್ತಿಯಲ್ಲಿ ಎರಡನೇ ಬಾರಿ ಕೊರೊನಾ ಸೋಂಕು ಕಂಡು ಬಂದಿರುವ ಬಗ್ಗೆ ಅತಿಯಾಗಿ ಗಾಬರಿಯಾಗಬೇಕಿಲ್ಲ ಎಂದು ಐ.ಸಿ.ಎಂ.ಆರ್. ಅಭಿಪ್ರಾಯ ಪಟ್ಟಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐ.ಸಿ.ಎಂ.ಆರ್.) ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ, ಹಾಂಕಾಂಗ್ನಲ್ಲಿ ನಡೆದಿರುವುದು ಒಂಟಿ ಪ್ರಕರಣ. ಹಲವಾರು ಅಂಶಗಳನ್ನು ಆಧರಿಸಿ ರೋಗ ನಿರೋಧಕತೆ ನಿರ್ಧಾರವಾಗುತ್ತದೆ ಎಂದಿದ್ದಾರೆ.
ವ್ಯಕ್ತಿಯಲ್ಲಿನ ರೋಗ ನಿರೋಧಕ ಸಾಮರ್ಥ್ಯ ಹಾಗೂ ವೈರಸ್ ಯಾವ ರೀತಿ ಮ್ಯುಟೇಟ್ ಆಗಿದೆ ಇಲ್ಲವೇ ತೀವ್ರ ಸ್ವರೂಪ ಪಡೆದಿದೆ ಎಂಬ ಎಲ್ಲವನ್ನೂ ಆಧರಿಸಿ ಈ ವಿಷಯ ನಿರ್ಧಾರವಾಗುತ್ತದೆ ಎಂದಿರುವ ಅವರು, ಮತ್ತೆ ಕೊರೊನಾ ವೈರಸ್ ಬಂದಿರುವ ಒಂದೇ ಒಂದು ಪ್ರಕರಣ ಇದಾಗಿದೆ. ಇದು ಅಪರೂಪದ ಪ್ರಕರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ದಡಾರ ಒಮ್ಮೆ ಬಾಧಿಸಿದ ನಂತರ ರೋಗ ನಿರೋಧಕತೆ ಜೀವನವಿಡೀ ಇರುತ್ತದೆ. ಎರಡನೇ ಬಾರಿ ದಡಾರ ಬರುವುದು ಬಹಳ ಅಪರೂಪ. ಅದೇ ರೀತಿ, ಹಾಂಕಾಂಗ್ನದ್ದು ಅಪರೂಪದ ಪ್ರಕರಣ. ರೋಗ ನಿರೋಧಕತೆ ಎಷ್ಟು ಅವಧಿಯವರೆಗೆ ಇರುತ್ತದೆ ಎಂಬುದನ್ನು ನಾವು ಪತ್ತೆ ಮಾಡಬೇಕಿದೆ ಎಂದವರು ತಿಳಿಸಿದ್ದಾರೆ.
ರೋಗಿಯಲ್ಲಿ ರೋಗ ನಿರೋಧಕ ಶಕ್ತಿ ಬಂದರೂ ಸಹ ಸಾಮಾನ್ಯ ಶೀತದ ರೀತಿಯಲ್ಲೇ ಕೊರೊನಾ ವೈರಸ್ ಸೋಂಕೂ ಸಹ ಮತ್ತೆ ಮತ್ತೆ ಬರುತ್ತದೆ ಎಂಬುದರತ್ತ ನಮ್ಮ ಸಂಶೋಧನೆ ಇಂಗಿತ ವ್ಯಕ್ತಪಡಿಸುತ್ತಿದೆ. ಸಹಜ ಸೋಂಕಿನಿಂದ ಇಲ್ಲವೇ ಲಸಿಕೆಯ ಮೂಲಕ ರೋಗ ನಿರೋಧಕತೆ ಪಡೆದರೂ ಸೋಂಕು ತಪ್ಪದು ಎಂದವರು ತಿಳಿಸಿದ್ದಾರೆ.
ಕೊರೊನಾ ಸೋಂಕಿತರ ಪೈಕಿ ಕೆಲವರಲ್ಲಿ ಹಲವಾರು ವಾರಗಳ ಕಾಲ ವೈರಸ್ ಇರುವುದು ಕಂಡು ಬಂದಿತ್ತು. ರೋಗ ಲಕ್ಷಣಗಳು ನಿವಾರಣೆಯಾದರೂ ವೈರಸ್ ಹೋಗಿರಲಿಲ್ಲ. ಹೀಗಾಗಿ ವೈರಸ್ ಗುಣಲಕ್ಷಣಗಳ ಬಗ್ಗೆ ವಿಜ್ಞಾನಿಗಳಿಗೆ ಇನ್ನೂ ಪೂರ್ಣ ಚಿತ್ರಣ ಸಿಕ್ಕಿಲ್ಲ.
ಕೊರೊನಾದಿಂದ ಚೇತರಿಸಿಕೊಂಡ ರೋಗಿಯೊಬ್ಬರಲ್ಲಿ, ಇನ್ನೊಂದು ಸ್ವರೂಪದ ಕೊರೊನಾ ಬಂದಿರುವ ಮೊದಲ ಅಧಿಕೃತವಾಗಿ ದಾಖಲಿಸಲ್ಪಟ್ಟ ಪ್ರಕರಣ ಇದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಒಮ್ಮೆ ಕೊರೊನಾದಿಂದ ಚೇತರಿಸಿಕೊಂಡವರಲ್ಲಿ, ಇನ್ನೊಮ್ಮೆ ಸೋಂಕು ಬಂದಾಗಲೂ ಲಕ್ಷಣಗಳು ಕಾಣದೇ ಇರಬಹುದು. ಹೀಗಾಗಿ ಅಂಥವರ ಪತ್ತೆ ಕಷ್ಟಸಾಧ್ಯ ಎಂದು ಬ್ರಿಸ್ಬೇನ್‌ನಲ್ಲಿರುವ ಕ್ಯೂ.ಐ.ಎಂ.ಆರ್. ಬೆರ್ಘೋಫರ್ ಮೆಡಿಕಲ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಕೇರಿ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ಬಾರಿ ಸೋಂಕು ಬಂದಾಗ ವ್ಯಕ್ತಿಯಲ್ಲಿ ಲಕ್ಷಣಗಳು ಕಂಡಿಲ್ಲ. ಮೊದಲ ಬಾರಿ ಸೋಂಕು ಬಂದಾಗಿನ ರೋಗ ನಿರೋಧಕ ಸ್ಪಂದನೆಯ ನೆನಪು ದೇಹಕ್ಕಿರಬಹುದು. ಹೀಗಾಗಿ ಲಕ್ಷಣ ಹೊಂದಿದ ರೋಗ ಬಂದಿರಲಿಕ್ಕಿಲ್ಲ ಎಂದವರು ತಿಳಿಸಿದ್ದಾರೆ.
ಸಹಜ ಸೋಂಕಿನ ಕಾರಣದಿಂದಾಗಿ ರೋಗ ನಿರೋಧಕತೆ ಬಂದಾಗ ಅದು ರೋಗದಿಂದ ರಕ್ಷಣೆ ನೀಡುತ್ತದೆಯೇ ವಿನಹ, ಮತ್ತೆ ರೋಗ ಬರುವುದನ್ನು ತಡೆಯಲು ಅಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದವರು ಹೇಳಿದ್ದಾರೆ.
ಮತ್ತೆ ಸೋಂಕು ಬರುವುದನ್ನು ತಪ್ಪಿಸಲಾಗದು ಎಂದು ಓಹಿಯೋದ ಅಕ್ರಾನ್‌ನಲ್ಲಿರುವ ಸುಮ್ಮ ಹೆಲ್ತ್ ಆಸ್ಪತ್ರೆಯ ಪರಿಣಿತರಾದ ಥಾಮಸ್ ಫೈಲ್ ಹೇಳಿದ್ದು, ರೋಗದಿಂದ ರಕ್ಷಣೆ ಪಡೆಯುವ ಸಾಮರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಎಂದಿದ್ದಾರೆ.
ಕೊರೊನಾ ವೈರಸ್ ಪ್ರಭೇದಗಳಿಂದ ಸೋಂಕು ಉಂಟಾದಾಗ ಕಂಡು ಬರುವ ರೋಗ ನಿರೋಧಕತೆಯು ನಾಲ್ಕು ತಿಂಗಳಿನಿಂದ ಹಿಡಿದು ಒಂದು ಇಲ್ಲವೇ ಎರಡು ವರ್ಷಗಳವರೆಗೆ ಇರುತ್ತದೆ ಎಂದು ಫೈಲ್ ತಿಳಿಸಿದ್ದಾರೆ.