ಅಪ್ರಾಪ್ತರಲ್ಲೇ ಹೆಚ್ಚು ಸೋಂಕು

ಅಪ್ರಾಪ್ತರಲ್ಲೇ ಹೆಚ್ಚು ಸೋಂಕು - Janathavani

 

ನವದೆಹಲಿ, ಆ. 25 – ಐದರಿಂದ ಹದಿನೇಳು ವರ್ಷಗಳ ನಡುವಿನ ಅಪ್ರಾಪ್ತರು ದೆಹಲಿಯಲ್ಲಿ ಕೊರೊನಾ ವೈರಸ್ ಸಂಪರ್ಕಕ್ಕೆ ಹೆಚ್ಚಾಗಿ ಬಂದಿದ್ದಾರೆ ಎಂದು ಸೆರೋ ಸಮೀಕ್ಷೆ ವರದಿ ತಿಳಿಸಿದೆ. ಆಗಸ್ಟ್ 1ರಿಂದ 7ರ ನಡುವೆ ಸಮೀಕ್ಷೆ ನಡೆಸಲಾಗಿತ್ತು.

ದೆಹಲಿಯಲ್ಲಿ 15,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ದೆಹಲಿಯಲ್ಲಿ ನಡೆಸಲಾದ ಎರಡನೇ ಸಮೀಕ್ಷೆ ಇದಾಗಿದೆ. ಒಟ್ಟಾರೆ ಶೇ.29.1ರಷ್ಟು ಜನರು ವೈರಸ್ ಸೋಂಕಿಗೆ ಗುರಿಯಾಗಿರುವುದಾಗಿ ಸಮೀಕ್ಷೆ ತಿಳಿಸಿತ್ತು.

5ರಿಂದ 17ರ ವಯೋಮಾನವದರಲ್ಲಿ ಕೊರೊನಾ ವೈರಸ್ ಕಂಡು ಬಂದಿರುವ ಪ್ರಮಾಣ ಶೇ.34.7ರಷ್ಟಿದೆ.

50 ವರ್ಷಕ್ಕಿಂತ ಹೆಚ್ಚಿನವರಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ.31.2ರಷ್ಟಿದೆ. 18ರಿಂದ 50ರ ವಯಸ್ಸಿನವರಲ್ಲಿ ವೈರಸ್ ಪ್ರಮಾಣ ಶೇ.28.5ರಷ್ಟಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

21ರಿಂದ 50ರ ವಯಸ್ಸಿನವರಲ್ಲಿ ಕೊರೊನಾ ಸೋಂಕಿಗೆ ಗುರಿಯಾಗಿರುವವರ ಪ್ರಮಾಣ ಶೇ.61.31ರಷ್ಟಿದೆ ಎಂದು ತಿಳಿಸಲಾಗಿದೆ. 

ಮನೆಯಲ್ಲಿರುವ ಹಿರಿಯರು ಹಾಗೂ ಮನೆ ಕೆಲಸದವರ ಸಂಪರ್ಕದಿಂದಾಗಿ ಮಕ್ಕಳಿಗೆ ವೈರಸ್‌ ತಗುಲಿರಬಹುದು ಎಂದು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.

ಚಿಕ್ಕ ಮಕ್ಕಳು ಹಾಗೂ ಯುವಕರನ್ನು ಮನೆಯಲ್ಲಿ ಬಂಧಿಸಿಡುವುದು ಕಷ್ಟ. ಅವರು ಶಾಲೆಗೆ ಹೋಗದಿದ್ದರೂ ಸಹ ಆಡಲು ಹೋಗುತ್ತಾರೆ. ಇಲ್ಲವೇ ಪರೋಕ್ಷವಾಗಿಯೂ ಅವರಿಗೆ ಸೋಂಕು ಬಂದಿರಬಹುದು ಎಂದು ದೆಹಲಿ ಸರ್ಕಾರಿ ಆಸ್ಪತ್ರೆಗಳನ್ನು ಸಶಕ್ತಗೊಳಿಸಲು ರೂಪಿಸಿದ್ದ ಸಮಿತಿಯ ಮುಖ್ಯಸ್ಥ ಡಾ. ಮಹೇಶ್ ವರ್ಮ ತಿಳಿಸಿದ್ದಾರೆ. ಜನರಿಗೆ ಹೇಗೆ ಸೋಂಕು ಬರುತ್ತದೆ ಎಂಬುದು ಈಗಲೂ ಸಂಕೀರ್ಣ ವಿಷಯವಾಗಿದೆ. ಮನೆಯಿಂದ ಒಟ್ಟಾಗಿಯೇ ಹೊರ ಬರದ ಕುಟುಂಬಗಳವರಿಗೂ ಸೋಂಕು ಬಂದಿರುವುದನ್ನು ನೋಡಿದ್ದೇನೆ ಎಂದು ವರ್ಮ ಹೇಳಿದ್ದಾರೆ.

ಶಾಲೆಗಳು ಮುಚ್ಚಿವೆ. ಹೀಗಾಗಿ ನಿಯಮಿತವಾಗಿ ಮನೆಯಿಂದ ಹೊರಗೆ ಹೋಗಿ ಬರುವವರ ಮೂಲಕ ಮಕ್ಕಳಿಗೆ ಸೋಂಕು ಬಂದಿರಬಹುದು ಎಂದು ಸೀಡ್ಸ್ ಆಫ್ ಇನ್ನೋಸೆನ್ಸ್ ಅಂಡ್ ಜೀನ್‌ಸ್ಟ್ರಿಂಗ್ಸ್ ಲ್ಯಾಬ್‌ನ ಡಾ. ಗೌರಿ ಅಗರ್‌ವಾಲ್ ಹೇಳಿದ್ದಾರೆ.

error: Content is protected !!