ಸಂಭಲ್, ಆ. 23 – ಜಗಳವಾಡದ, ಸದಾ ಪ್ರೀತಿಸುವ, ತಪ್ಪು ಮಾಡಿದರೂ ಬೈಯ್ಯದ, ಮನೆ ಕೆಲಸದಲ್ಲಿ ನೆರವಾಗುವ ‘ಪರಿಪೂರ್ಣ’ ಗಂಡನಿಂದ ‘ಬೇಸತ್ತ’ ಪತ್ನಿಯೊಬ್ಬಳು ವಿಚ್ಛೇದನಕ್ಕೆ ಅರ್ಜಿ ಗುಜರಾ ಯಿಸಿರುವ ಘಟನೆ ಉತ್ತರ ಪ್ರದೇಶದ ಸಂಭಲ್ನಲ್ಲಿ ನಡೆದಿದೆ. ಮದುವೆಯಾಗಿ 18 ತಿಂಗಳಾದರೂ ಗಂಡ ಒಂದು ಬಾರಿಯೂ ಜಗಳವಾಡಿಲ್ಲ, ಯಾವುದೇ ವಿಷಯಕ್ಕೂ ಕಿತ್ತಾಡಿಲ್ಲ. ಇದರಿಂದ ಕೋಪಗೊಂಡ ಪತ್ನಿ, ಶರಿಯಾ ನ್ಯಾಯಾಲಯಕ್ಕೆ ಹೋಗಿ ವಿಚ್ಛೇದನ ನೀಡಬೇಕೆಂದು ಕೇಳಿದ್ದಾಳೆ. ಆದರೆ, ಶರಿಯಾ ನ್ಯಾಯಾಲಯ ಪತ್ನಿ ಬೇಡಿಕೆ ತಳ್ಳಿ ಹಾಕಿದೆ.
ಮದುವೆಯಾಗಿ 18 ತಿಂಗಳಾದರೂ ಜಗಳವಾಡಿಲ್ಲ, ಯಾವುದೇ ವಿಷಯಕ್ಕೆ ಕೋಪಗೊಂಡಿಲ್ಲ. ಮನಸಿಗೆ ನೋವಾಗುವ ಅವಕಾಶವನ್ನೇ ಕೊಟ್ಟಿಲ್ಲ. ಈ ಅತಿಯಾದ ಪ್ರೀತಿ ಸಹಿಸಲಾಗದು ಎಂದು ಪತ್ನಿ ಆಕ್ಷೇಪಿಸಿದ್ದಾಳೆ.
ಈ ಬಗ್ಗೆ ಪತಿರಾಯನನ್ನು ಏಕಪ್ಪಾ ಹೀಗೆ ಮಾಡ್ತಿದ್ದೀಯ? ಎಂದು ಕೇಳಿದಾಗ, ನಾನು ‘ಪರಿಪೂರ್ಣ’ ಪತಿಯಾಗಲು ಬಯಸಿದ್ದೇನೆ. ಪತ್ನಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ವಿಚ್ಛೇದನ ಮಾಡಿಕೊಳ್ಳದಂತೆ ತಿಳಿಸಿ ಎಂದು ಶರಿಯಾ ನ್ಯಾಯಾಲಯಕ್ಕೆ ಕೇಳಿದ್ದಾನೆ.
ಆದರೆ, ಗಂಡನ ಅತಿಯಾದ ಪ್ರೀತಿಯಿಂದ ಉಸಿರು ಕಟ್ಟಿದ ವಾತಾರವಣ ಉಂಟಾಗಿದೆ. ಒಂದು ಜಗಳಕ್ಕಾಗಿ ಪರಿತಪಿಸುತ್ತಿದ್ದೇನೆ. ಜಗಳವಾಡುವುದು ಈ ಗಂಡನ ಜೊತೆ ಸಾಧ್ಯವೇ ಇಲ್ಲ. ಏನೇ ತಪ್ಪು ಮಾಡಿದರೂ ಕ್ಷಮಿಸಿ ಬಿಡುತ್ತಾನೆ. ನನ್ನ ಪ್ರತಿಯೊಂದು ಮಾತನ್ನೂ ಒಪ್ಪುವ ಗಂಡ ಬೇಕಿಲ್ಲ ಎಂದು ಪತ್ನಿ ಹೇಳಿದ್ದಾಳೆ.
ಶರಿಯಾ ನ್ಯಾಯಾಲಯ ವಿಚ್ಛೇದನ ಕೊಡಲು ಸಮ್ಮತಿಸದಿದ್ದಾಗ, ಪತ್ನಿ ಪಂಚಾಯ್ತಿ ಬಳಿ ಹೋಗಿ ದೂರು ಸಲ್ಲಿಸಿದ್ದಾಳೆ. ನಂತರ ಪಂಚಾಯ್ತಿಯವರು ದಿನವಿಡೀ ಚರ್ಚಿಸಿದರೂ ವಿಷಯ ಬಗೆಹರಿದಿಲ್ಲ. ಕೊನೆಗೆ, ಮನೆಯಲ್ಲೇ ಈ ವಿಷಯ ಬಗೆಹರಿಸಿಕೊಳ್ಳಿ ಎಂದು ಪಂಚಾಯ್ತಿಯವರು ವಿಷಯದಿಂದ ಕೈ ತೊಳೆದುಕೊಂಡಿದ್ದಾರೆ.