ದಾವಣಗೆರೆ, ಆ.23- ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎಂದು ಹೆಸರಾಗಿರುವ ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರದ ಸರ್ವೆ ಕಾರ್ಯ ಕೈಗೊಳ್ಳುವಂತೆ ಮೂರು ವರ್ಷಗಳಿಂದಲೂ ಆಗ್ರಹಿಸುತ್ತಾ ಬಂದಿದ್ದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಶೀಘ್ರ ಸರ್ವೆ ಕಾರ್ಯ ಮುಗಿಸಿ ಅದರ ಮಾಹಿತಿ ನೀಡಬೇಕು ಎಂದು ಖಡ್ಗ ಸಂಘದಿಂದ ಒತ್ತಾಯಿಸಲಾಗಿದೆ.
ಸೂಳೆಕೆರೆಯ ಒತ್ತುವರಿ ತೆರವು ಮಾಡಿ, ಸರ್ವೆ ಮಾಡುವಂತೆ ಜಿಲ್ಲಾಧಿಕಾರಿ, ನೀರಾವರಿ ನಿಗಮದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಒತ್ತುವರಿ ತೆರವು ಮಾಡಿದರೆ ಹಾಗೂ ಕೆರೆ ನೀರಿನಲ್ಲಿ ಮುಳುಗಡೆಯಾದ ರೈತರ ಜಮೀನಿಗೆ ಪರಿಹಾರ ನೀಡುವ ಸಂಬಂಧ ಯಾವ ಯೋಜನೆ ಕೈಗೊಳ್ಳಲಾಗಿದೆ ಎಂಬುದನ್ನೂ ತಿಳಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬಿ.ಆರ್. ರಘು ಆರೋಪಿಸಿದ್ದಾರೆ.
ಕಟ್ಟಡ ನಿರ್ಮಾಣ, ಬೋಟಿಂಗ್, ವಿದ್ಯುತ್ ಘಟಕಗಳ ನಿರ್ಮಾಣಕ್ಕೆ ಶೀಘ್ರ ಸ್ಪಂದಿಸುವ ಇಲಾಖೆಗಳು ಸರ್ವೆ ಕಾರ್ಯ, ಹೂಳು ತೆಗೆಸಲು ಮುಂದಾಗದಿರುವುದು ಖಂಡನೀಯ. ಅಧಿಕಾರಿಗಳು, ಜನಪ್ರತಿನಿಧಿಗಳ ಕಾರ್ಯವೈಖರಿಗೆ ಬೇಸತ್ತು ಖಡ್ಗ ಸಂಘದಿಂದಲೇ ಮುಂದಿನ ವರ್ಷ ಕೆರೆಯ ಹೂಳು ತೆಗೆಸುವ ಯೋಜನೆ ರೂಪಿಸಿದ್ದು, ಶೀಘ್ರ ಕೆರೆಯ ಸರಹದ್ದು ಗುರುತಿಸಿಕೊಡಬೇಕು ಎಂದು ಆಗ್ರಹಿಸಿದರು.
ಫೆ. 29, 2020ರೊಳಗೆ ಸೂಳೆಕೆರೆಯ ಸರ್ವೆ ಕಾರ್ಯ ಮುಗಿಸಿ ಅದರ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗಿ ಕರ್ನಾಟಕ ನೀರಾವರಿ ನಿಗಮ ಮತ್ತು ಸರ್ವೇ ಗುತ್ತಿಗೆದಾರರಿಗೆ ನಿರ್ದೇಶಿಸಿದ್ದು, ಈ ಬಗ್ಗೆ ಮಾಹಿತಿ ನೀಡಬೇಕು ಮತ್ತು ಒತ್ತುವರಿ ತೆರವು , ಹೂಳು ತೆಗೆಯುವುದು ಮತ್ತು ಸೂಳೆಕೆರೆ ನೀರಿನಿಂದ ಮುಳುಗಡೆಯಾದ ಜಮೀನುಗಳ ರೈತರ ಪರಿಹಾರಕ್ಕೆ ಮುಂದಿನ ಯೋಜನೆ, ನಿರ್ಧಾರ, ನಿಲುವಿನ ಬಗ್ಗೆ ಸಂಸದ ಜಿ.ಎಂ. ಸಿದ್ದೇಶ್ವರ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಕೊರೊನಾ ಕಾರಣ ಅಧಿಕಾರಿಗಳ ಭೇಟಿ ಸಾಧ್ಯವಾಗಿಲ್ಲ. ಶೀಘ್ರ ಹೇಳಿಕೆ ನೀಡಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಬಸವರಾಜ್, ಷಣ್ಮುಖಸ್ವಾಮಿ, ಚಂದ್ರಹಾಸ ಇದ್ದರು.