ದಾವಣಗೆರೆ, ಆ.23- ಸಮಾಜದಲ್ಲಿ ಆಚರಣೆಯಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಹಲವು ಕಾನೂನುಗಳನ್ನು ಜಾರಿಗೆ ತರುವ ಮೂಲಕ ಹಿಂದುಳಿದ, ದುರ್ಬಲ ವರ್ಗಗಳ ಜನರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸುವಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಕೊಡುಗೆ ಅಪಾರವಾದುದು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮೊನ್ನೆ ಏರ್ಪಡಿಸಿದ್ದ ಡಿ. ದೇವರಾಜ ಅರಸು ಅವರ 105ನೇ ಜನ್ಮ ದಿನಾಚರಣೆ ಹಾಗೂ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದ ಎಲ್ಲಾ ವರ್ಗಗಳ ಬಲವರ್ಧನೆಗಾಗಿ ಜೀತ ಪದ್ಧತಿಯನ್ನು ನಿರ್ಮೂಲನೆಗೊಳಿಸಿದರು. ಉಳುವವನೇ ಭೂಮಿ ಒಡೆಯ ಹಾಗೂ ಭೂ-ಸುಧಾರಣ ಕಾಯ್ದೆಯನ್ನು ಜಾರಿಗೆ ತಂದಿದ್ದು ರಾಜ್ಯಕ್ಕೆ ಅರಸು ಅವರು ನೀಡಿದ ಮಹತ್ವದ ಕೊಡುಗೆ ಎಂದರು. ಮಲ ಹೊರುವ ಪದ್ಧತಿ ಹಾಗೂ ಜೀತ ಪದ್ಧತಿಯನ್ನು ತೊಲಗಿಸುವ ಮೂಲಕ ಶೋಷಿತ ವರ್ಗಗಳ ಧ್ವನಿಯಾಗಿ ಅರಸು ಕಾರ್ಯ ನಿರ್ವಹಿಸಿದರು ಎಂದು ಅವರು ಸ್ಮರಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ನೇರವಾಗಲು ರಾಜ್ಯದಾದ್ಯಂತ ವಿದ್ಯಾರ್ಥಿ ನಿಲಯ ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು. ವೃದ್ಧಾಪ್ಯ ವೇತನ ಜಾರಿಗೆ ತರುವ ಮೂಲಕ ಎಲ್ಲಾ ವರ್ಗಗಳ ಬಡಜನರ ಆರ್ಥಿಕ ಬಲವರ್ಧನೆಗಾಗಿ ಅರಸು ಅವರು ಶ್ರಮಿಸಿದ್ದಾರೆ ಎಂದರು.
ಕುಲಸಚಿವ ಪ್ರೊ. ಬಸವರಾಜ ಬಣಕಾರ ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಪರೀ ಕ್ಷಾಂಗ ಕುಲಸಚಿವೆ ಪ್ರೊ. ಹೆಚ್. ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರೊ. ಗೋಪಾಲ್ ಎಂ. ಅಡಿವಿರಾವ್, ಹಿಂದುಳಿದ ವರ್ಗಗಳ ಘಟಕದ ಸಂಯೋಜನಾಧಿಕಾರಿ ಕುಮಾರ್ ಸಿದ್ದಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.