ಬಸವ ನಗರ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಸನಾವುಲ್ಲಾ ಅಮಾನತ್ತು
ತನಿಖೆ ವೇಳೆ ಸನಾವುಲ್ಲಾ ವಾಟ್ಸಪ್, ಫೇಸ್ಬುಕ್ನಲ್ಲಿ ಆಘಾತಕಾರಿ ವಿಷಯಗಳು ಬಯಲು?
ದಾವಣಗೆರೆ, ಆ.23- ಪೊಲೀಸ್ ಕಾನ್ಸ್ ಟೇಬಲ್ ಓರ್ವ ಪವರ್ ಆಫ್ ಪಾಕಿಸ್ತಾನ್ ಎಂಬ ಫೇಸ್ ಬುಕ್ ಪೇಜ್ ಲೈಕ್ ಮಾಡಿ ವಾಟ್ಸಪ್ ಗ್ರೂಪ್ಗೆ ಶೇರ್ ಮಾಡುವ ಮೂಲಕ ಪಾಕಿಸ್ತಾನ ಪರ ತನ್ನ ಪ್ರೇಮವನ್ನು ವ್ಯಕ್ತಪಡಿಸಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬಸವ ನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಸನಾವುಲ್ಲಾ ಪೊಲೀಸ್ ಇಲಾಖೆಯಲ್ಲಿದ್ದುಕೊಂಡೇ ಪಾಕಿಸ್ತಾನದ ಸಮರ್ಥನೆಯ ಕೃತ್ಯ ಎಸಗಿದ್ದು, ಹೀಗೆ ದೇಶ ವಿರೋಧಿ ಪೋಸ್ಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಪವರ್ ಆಫ್ ಪಾಕಿಸ್ಥಾನ್ ಎಂಬ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿರುವ ಈತನು ಅದನ್ನು ವಾಟ್ಸಪ್ ಗ್ರೂಪ್ನಲ್ಲೂ ಶೇರ್ ಮಾಡಿದ್ದಾನೆ. 2008ನೇ ಸಾಲಿನ ಪೊಲೀಸ್ ಬ್ಯಾಚ್ ಎಂಬ ವಾಟ್ಸಪ್ ಗ್ರೂಪ್ಗೆ ಪವರ್ ಆಫ್ ಪಾಕಿಸ್ತಾನ ಎಂಬ ಪೇಜ್ನ ಲಿಂಕ್ ಅನ್ನು ಸನಾವುಲ್ಲಾ ಶೇರ್ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿಗಳ 2008ನೇ ಸಾಲಿನ ಪೊಲೀಸ್ ಬ್ಯಾಚ್ಗೆ ಪವರ್ ಆಫ್ ಪಾಕಿಸ್ಥಾನ್ ಎಂಬ ಫೇಸ್ ಬುಕ್ ಲಿಂಕ್ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕಾರ್ಯೋನ್ಮುಖರಾದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ತನಿಖೆ ಕೈಗೊಂಡಿದ್ದಾರೆ. ತನಿಖೆ, ವಿಚಾರಣೆ ವೇಳೆ ಸನಾವುಲ್ಲಾ ವಾಟ್ಸಪ್, ಫೇಸ್ಬುಕ್ನಲ್ಲಿ ಆಘಾತಕಾರಿ ವಿಷಯ, ವಿಚಾರಗಳೂ ಬಯಲಾಗಿವೆ ಎಂದು ಹೇಳಲಾಗಿದೆ.
ತನ್ನ ಪಾಕ್ ಪರ ಪ್ರೇಮದ ವಿಚಾರ ಬಯಲಾಗುತ್ತಿದ್ದಂತೆ ಪೊಲೀಸ್ ಕಾನ್ಸಟೇಬಲ್ ಸನಾವುಲ್ಲಾ ನಾಪತ್ತೆಯಾಗಿದ್ದು, ಸದ್ಯಕ್ಕೆ ಈತನನ್ನು ಅಮಾನತಿನಲ್ಲಿಡಲಾಗಿದೆ. ಮೂಲತಹ ಹರಿಹರ ತಾಲ್ಲೂಕಿನ ಮಲೆಬೆನ್ನೂರು ಪಟ್ಟಣದ ವಾಸಿಯಾದ ಪೊಲೀಸ್ ಕಾನ್ಸಟೇಬಲ್ ಸನಾವುಲ್ಲಾ ಉತ್ತಮ ಕರಾಟೆಪಟುವಾಗಿದ್ದು, 2008ನೇ ಸಾಲಿನ ಪೊಲೀಸ್ ನೇಮಕಾತಿಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕೆಲಸಕ್ಕೆ ಸೇರಿದ್ದ.
ಹಾಲಿ ಬಸವ ನಗರ ಠಾಣೆ ಗಸ್ತು ವಾಹನ ದೇವನಗರಿ(ಪಿಸಿಆರ್) ಚಾಲಕನಾಗಿ ಕೆಲಸ ಮಾಡುತ್ತಿದ್ದ. 2014ರಲ್ಲೂ ಯುವಕನೊಬ್ಬನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಎನ್ನಲಾಗಿದ್ದು, ದಾವಣಗೆರೆ ಮೀನು ಮಾರುಕಟ್ಟೆ ಸಮೀಪದ ಕೆಲ ದೇಹದಾಢ್ಯ ಪಟುಗಳನ್ನು ಮುಂದಿಟ್ಟುಕೊಂಡು ರಾಜಿ, ಪಂಚಾಯಿತಿಗಳನ್ನು ನಡೆಸುವ ಕೆಲಸವನ್ನು ಮಾಡುತ್ತಿದ್ದನ್ನೆಲಾಗುತ್ತಿದೆ.