ದಾವಣಗೆರೆ, ಆ. 23- ಇದೇ ಮೊದಲ ಬಾರಿ ಅಬ್ಬರವಿಲ್ಲದ ಗಣೇಶನ ಚತುರ್ಥಿಗೆ ಆಚರಣೆಗೆ ದೇವನಗರಿ ಸಾಕ್ಷಿಯಾಯಿತು. ಡೊಳ್ಳು, ಡಿಜೆಗಳ ಸದ್ದು ಕೇಳಲಿಲ್ಲ, ಕೇಕೆ- ಕುಣಿತವಂತೂ ಕಾಣಲೇ ಇಲ್ಲ.
ಹೌದು, ಇತ್ತೀಚಿನ ದಿನಗಳಲ್ಲಿ ಗಣೇಶನ ಹಬ್ಬ ಎಂದರೆ ಡಿಜೆ ಸದ್ದು, ಡೊಳ್ಳು ಕುಣಿತ ಇರಲೇ ಬೇಕು. ಸಂಘ ಸಂಸ್ಥೆಗಳು ವಿನಾಯಕನ ವಿಗ್ರಹ ಪ್ರತಿಷ್ಠಾಪಿಸುವಾಗ ಹಾಗೂ ವಿಸರ್ಜನೆ ವೇಳೆ ಅಬ್ಬರವಿರಲೇಬೇಕಿತ್ತು. ಆದರೆ ಶನಿವಾರ ನಗರದಲ್ಲಿ ಈ ರೀತಿಯ ಯಾವ ಅಬ್ಬರವೂ ಕಾಣಲಿಲ್ಲ.
ಅಬ್ಬರ ಕಾಣದಿದ್ದರೂ ಮನೆಗಳಲ್ಲಿನ ಸಂಭ್ರಮಕ್ಕೆ ಕೊರತೆ ಇರರಿಲ್ಲ. ಗಾತ್ರಕ್ಕೆ ತಕ್ಕಂತೆ ಹಣ ನೀಡಿ ವಿಗ್ರಹಗಳನ್ನು ಕೊಂಡು ತಂದಿದ್ದ ಜನತೆ, ಬೆಳಿಗ್ಗೆ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಿ ಸಂಭ್ರಮಿಸಿದರು. ಸಂಜೆ ವೇಳೆಗೆ ಹಲವರು ಮೂರ್ತಿಗಳನ್ನು ವಿಸರ್ಜಿಸಲಾಯಿತು. ಕೆಲವರು ಮೂರು ದಿನ, ಐದು ದಿನ, ಒಂಭತ್ತು ದಿನ ಹೀಗೆ ವಿಸರ್ಜಿಸುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ.
ಸಾರ್ವಜನಿಕ ಗಣಪತಿ ವಿರಳ: ಬೀದಿಗಳ ಬದಿ ಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದ ಸಾರ್ವಜನಿಕ ಮೂರ್ತಿ ಗಳು ಈ ಬಾರಿ ಅತಿ ವಿರಳವಾಗಿದ್ದವು. ಕೆಲವೆಡೆ ಅಂದೇ ಪ್ರತಿಷ್ಠಾಪಿಸಿ, ವಿಸರ್ಜನೆಯನ್ನೂ ಮಾಡಲಾಯಿತು. ಈ ವೇಳೆ ಡೊಳ್ಳು, ಡಿಜೆಗಳಿಗೆ ಅನುಮತಿ ಇರಲಿಲ್ಲ. ಬೆರಳೆಣಿಕೆಯಷ್ಟು ಜನರು ಮಾತ್ರ ಭಾಗವಹಿಸಿ ಗಣೇಶನ ಮೂರ್ತಿ ವಿಸರ್ಜಿಸಿದರು.
1. ದಾವಣಗೆರೆಯ ತೊಟಗವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ 2. ಹೈಸ್ಕೂಲ್ ಮೈದಾನದಲ್ಲಿನ ಹಿಂದೂ ಮಹಾಗಣಪತಿ. 3. ಮಾಮಾಸ್ ಜಾಯಿಂಟ್ ರಸ್ತೆಯಲ್ಲಿನ ಶಿವಶಕ್ತಿ ಬಳಗದ ಗಣಪತಿ. 4. ವಿನೋಬನಗರ 2ನೇ ಮುಖ್ಯ ರಸ್ತೆಯಲ್ಲಿನ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯ ಗಣಪತಿ. 5. ರಾಂ ಅಂಡ್ ಕೋ ವೃತ್ತದಲ್ಲಿ ಪ್ರತಿಷ್ಠಾಪಿತ ಗಣಪತಿ 6. ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿ ಪ್ರತಿಷ್ಠಾಪಿತ ವಿನಾಯಕ. 7. ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿನ ಗಣಪತಿ.
ಪಾಲಿಕೆ ಟ್ರ್ಯಾಕ್ಟರ್ ಬಳಿ ಹಣ ವಸೂಲಿ : ಮಹಾನಗರ ಪಾಲಿಕೆ ವತಿಯಿಂದ 30 ಕಡೆ ಗಣೇಶನ ಮೂರ್ತಿಗಳ ವಿಸರ್ಜನೆಗೆ ಟ್ರ್ಯಾಕ್ಟರ್ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರ್ವಜನಿಕರಿಗೆ ಇದು ಉಚಿತವಾಗಿತ್ತಾದರೂ, ಅಲ್ಲಿನ ಕೆಲವರು 10 ರೂ., 20 ರೂ. ಹಿಗೆ ಮನ ಬಂದಂತೆ ವಿಸರ್ಜನೆಗೆ ಗಣೇಶ ಮೂರ್ತಿ ತಂದವರಿಂದ ಹಣ ವಸೂಲಿ ಮಾಡುತ್ತಿದ್ದುದು ಕಂಡು ಬಂತು. ಈ ವೇಳೆ ಕೆಲವರು ಹಣ ವಸೂಲಿ ಮಾಡುವವರೊಂದಿಗೆ ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು. ಸಂಬಂಧಿಸಿದ ಅಧಿಕಾರಿಗಳು ಹಣ ವಸೂಲಿಗೆ ತಡೆ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ದಾವಣಗೆರೆಯ ಗಮನ ಸೆಳೆಯುವ ವಿನೋಬ ನಗರ 2ನೇ ಮುಖ್ಯ ರಸ್ತೆಯ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ವಿನಾಯಕನ ದೇವಸ್ಥಾನದಲ್ಲಿಯೇ 21 ಇಂಚಿನ ಸುಂದರ ವಿಘ್ನನಿವಾರಕನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. 9 ದಿನಕ್ಕೆ ವಿಸರ್ಜನೆ ನಡೆಯಲಿದೆ. ನಗರದ ಹೈಸ್ಕೂಲ್ ಮೈದಾನದಲ್ಲಿ 10 ಅಡಿ ಎತ್ತರದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಲಾಗಿದೆ
ಎಂ.ಸಿ.ಸಿ. ಬಿ ಬ್ಲಾಕ್ನ ಮಾಮಾಸ್ ಜಾಂಯಿಂಟ್ ರಸ್ತೆಯಲ್ಲಿನ ಶಿವಶಕ್ತಿ ಗೆಳೆಯರ ಬಳಗದ ವತಿಯಿಂದ ಈ ಬಾರಿ ಸರಳವಾಗಿ ಗಣೇಶನ ಹಬ್ಬ ಆಚರಿಸಲಾಯಿತು. ಐದು ಅಡಿಗಳ ಸರ್ಪವುಳ್ಳ ಆಕರ್ಷಕ ವಿನಾಯಕ ಮೂರ್ತಿಯನ್ನು ಶನಿವಾರ ಪ್ರತಿಷ್ಠಾಪಿಸಿ, ಸರಳವಾಗಿ ಅಂದೇ ವಿಸರ್ಜಿಸಲಾಯಿತು.
ಪ್ರತಿ ಬಾರಿಯೂ ವಿಶೇಷವಾಗಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಹೆಸರುವಾಸಿಯಾಗಿದ್ದ ತೊಗಟವೀರ ಕಲ್ಯಾಣ ಮಂಟಪದಲ್ಲೂ ಗಣೇಶನ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು, ಹಿಂಭಾಗದಲ್ಲಿನ ಗಂಟೆಗಳ ಅಲಂಕಾರ ಗಮನ ಸೆಳೆಯುತ್ತದೆ. ರಾಂ ಅಂಡ್ ಕೋ ವೃತ್ತ ಹಾಗೂ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲೂ ಸಹ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ನೋಡಲು ಆಕರ್ಷಕವಾಗಿವೆ.
ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಶ್ರೀ ನವಭಾರತ ವಿಘ್ನೇಶ್ವರ ಯುವಕ ಸಂಘ, ಜಿಲ್ಲಾ ಕ್ರೀಡಾಪಟುಗಳ ಸಂಘ ಹಾಗೂ ಸ್ಟೇಡಿಯಂ ಫ್ರೆಂಡ್ಸ್ ವರಿತಿಯಂದ 31ನೇ ವರ್ಷದ ವಿನೋಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ರೂಪಕಗಳು ಇಲ್ಲದ ಕಾರಣ ಜನತೆ ಮೂರ್ತಿಗಳ ವೀಕ್ಷಣೆಗೆ ಅಷ್ಟಾಗಿ ಆಸಕ್ತಿ ವಹಿಸಿಲ್ಲ.