ಮೊದಲ ಸ್ಥಾನದಲ್ಲಿ ಮೈಸೂರು 21ನೇ ಸ್ಥಾನದಲ್ಲಿ ದಾವಣಗೆರೆ
ದಾವಣಗೆರೆ, ಆ. 20 – ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ಸರ್ವೇಕ್ಷಣ್ – 2020 ಸ್ವಚ್ಛತಾ ಸಮೀಕ್ಷೆಯಲ್ಲಿ ಸ್ಮಾರ್ಟ್ ಸಿಟಿಯಾದ ದಾವಣಗೆರೆ ರಾಜ್ಯದಲ್ಲಿ ಕೊನೆಯ ಐದು ನಗರಗಳ ಸಾಲಿಗೆ ದೂಡಲ್ಪಟ್ಟಿದೆ.
ರಾಜ್ಯದ ಒಂದರಿಂದ ಹತ್ತು ಲಕ್ಷ ಜನಸಂಖ್ಯೆಯ 25 ನಗರಗಳಲ್ಲಿ ಸ್ವಚ್ಛತೆಯ ಸಮೀಕ್ಷೆ ನಡೆಸಲಾಗಿತ್ತು. ಕೇಂದ್ರ ವಸತಿ ಹಾಗೂ ನಗರ ವ್ಯವ ಹಾರಗಳ ಸಚಿವಾಲಯ ಬೃಹತ್ ಸಮೀಕ್ಷೆ ನಡೆಸಿ ವರದಿ ರೂಪಿಸಿತ್ತು.
ಅದರ ಪ್ರಕಾರ ದಾವಣಗೆರೆ 21ನೇ ಸ್ಥಾನದಲ್ಲಿದೆ. ಒಟ್ಟು ನಿಗದಿಯಾದ 6,000 ಅಂಕಗಳಿಗೆ ನಡೆದ ಸಮೀಕ್ಷೆಯಲ್ಲಿ ದಾವಣಗೆರೆಯು 1,673.41 ಅಂಕ ಪಡೆದಿದೆ.
ದಾವಣಗೆರೆ ಹೊರತು ಪಡಿಸಿದರೆ ಗಂಗಾವತಿ, ಬಿಜಾಪುರ, ರಾಯಚೂರು ಹಾಗೂ ರಾಬರ್ಟ್ಸನ್ ಪೇಟೆಗಳು ಕೊನೆಯ ಐದು ಸ್ಥಾನಗಳಲ್ಲಿವೆ. ಮೈಸೂರು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ತುಮಕೂರು, ಹುಬ್ಬಳ್ಳಿ – ಧಾರವಾಡ, ಮಂಗಳೂರು ಹಾಗೂ ಚಿತ್ರದುರ್ಗಗಳಿವೆ. ಸ್ವಚ್ಛತೆಗಾಗಿ ಗಳಿಸುವ ಅಂಕದಲ್ಲಿ ಮೈಸೂರು 5,298.61 ಅಂಕ ಗಳಿಸಿದ್ದು ರಾಜ್ಯದ ಇತರೆಲ್ಲ ನಗರಗ ಳಿಗಿಂತ ಮುಂಚೂಣಿಯಲ್ಲಿದೆ. ಆ ನಗರ ದಾವಣಗೆರೆಗಿಂತ ಮೂರು ಪಟ್ಟು ಹೆಚ್ಚು ಅಂಕ ಗಳಿಸಿದೆ.
ರಾಜ್ಯಕ್ಕೆ ಕೊನೆಯಿಂದ 2ನೇ ಸ್ಥಾನ
ನವದೆಹಲಿ, ಆ. 21 – ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛತಾ ಸಮೀಕ್ಷೆಯಲ್ಲಿ ಕರ್ನಾಟಕವು ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.
100ಕ್ಕೂ ಹೆಚ್ಚು ನಗರ ಸ್ಥಳಿಯ ಸಂಸ್ಥೆಗಳಿರುವ ರಾಜ್ಯ ಹಾಗೂ 100ಕ್ಕೂ ಕಡಿಮೆ ನಗರ ಸ್ಥಳಿಯ ಸಂಸ್ಥೆಗಳಿರುವ ರಾಜ್ಯಗಳೆಂಬ ಎರಡು ವಿಭಾಗಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಕರ್ನಾಟಕವು 100ಕ್ಕೂ ಹೆಚ್ಚು ನಗರ ಸ್ಥಳಿಯ ಸಂಸ್ಥೆಗಳಿರುವ ರಾಜ್ಯಗಳ ಪಟ್ಟಿಯಲ್ಲಿತ್ತು.
ಈ ಪಟ್ಟಿಯಲ್ಲಿನ 12 ರಾಜ್ಯಗಳಲ್ಲಿ ಕರ್ನಾಟಕ 11 ಸ್ಥಾನದಲ್ಲಿದೆ. ಬಿಹಾರ ಮಾತ್ರ ಕರ್ನಾಟಕಕ್ಕಿಂತ ಕೆಳಗಿದ್ದು ಕೊನೆಯ ಸ್ಥಾನದಲ್ಲಿದೆ. ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನಡೆಸಿದ ಸಮೀಕ್ಷೆಯಲ್ಲಿ ಛತ್ತೀಸ್ಘಡ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ ಹಾಗೂ ಮಧ್ಯ ಪ್ರದೇಶಗಳಿವೆ. ಸಮೀಕ್ಷೆಯಲ್ಲಿ ಛತ್ತೀಸ್ಘಡ 3,293.56 ಅಂಕ ಗಳಿಸಿದೆ. ಕರ್ನಾಟಕ ಕೇವಲ 940.65 ಅಂಕ ಪಡೆದಿದೆ. ಕೊನೆಯ ಸ್ಥಾನದಲ್ಲಿರುವ ಬಿಹಾರ 760.40 ಅಂಕ ಪಡೆದಿದೆ. 100ಕ್ಕೂ ಕಡಿಮೆ ನಗರ ಸ್ಥಳೀಯ ಸಂಸ್ಥೆಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಜಾರ್ಖಂಡ್ ಮೊದಲ ಸ್ಥಾನದಲ್ಲಿದೆ. ನಂತರ ಸ್ಥಾನಗಳಲ್ಲಿ ಹರಿಯಾಣ ಹಾಗೂ ಉತ್ತರಾಖಂಡಗಳಿವೆ.
ಎರಡನೇ ಸ್ಥಾನದಲ್ಲಿರುವ ತುಮಕೂರು 3,863.66 ಅಂಕ ಗಳಿಸಿದ್ದು, ದಾವಣಗೆರೆಗಿಂತ ಎರಡು ಪಟ್ಟು ಹೆಚ್ಚಾಗಿದೆ. 2019ರಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ದಾವಣಗೆರೆ ನಗರ ರಾಷ್ಟ್ರ ಮಟ್ಟದಲ್ಲಿ 375ನೇ ಸ್ಥಾನ ಪಡೆದಿತ್ತು. 2018ರಲ್ಲಿ ನಗರವು 213ನೇ ಸ್ಥಾನದಲ್ಲಿತ್ತು. ಜನರಿಂದ ಅಭಿಪ್ರಾಯ ಸಂಗ್ರಹ, ನೇರ ಪರಿಶೀಲನೆ, ಸೇವೆಗಳಲ್ಲಿ ಆಗಿರುವ ಪ್ರಗತಿ ಹಾಗೂ ಪ್ರಮಾಣೀಕರಣ ಎಂಬ ನಾಲ್ಕು ಭಾಗಗಳ ಆಧರಿಸಿ ಸಮೀಕ್ಷೆ ನಡೆಸಲಾಗಿತ್ತು. ಪ್ರತಿ ಭಾಗಕ್ಕೆ ತಲಾ 1,500 ಅಂಕಗಳಂತೆ ಒಟ್ಟು 6,000 ಅಂಕಗಳನ್ನು ನಿಗದಿ ಪಡಿಸಲಾಗಿತ್ತು.
ಒಂದರಿಂದ ಹತ್ತು ಲಕ್ಷದೊಳಗಿನ ಜನಸಂಖ್ಯೆಗಳ ನಗರಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ದಾವಣಗೆರೆ 318ನೇ ಸ್ಥಾನದಲ್ಲಿದೆ. ಮೈಸೂರು ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರ ಮಟ್ಟದ ಸಮೀಕ್ಷೆಯಲ್ಲಿ ರಾಜ್ಯದ ಮೈಸೂರು ಹಾಗೂ ತುಮಕೂರುಗಳು ಮಾತ್ರ ಮೊದಲ 100 ನಗರಗಳ ಸಾಲಿನಲ್ಲಿ ಸ್ಥಾನ ಪಡೆದಿವೆ. ತುಮಕೂರು 48ನೇ ಸ್ಥಾನದಲ್ಲಿದೆ.