‘ಸಹಕಾರಿ’ ಸ್ವರೂಪ ರಕ್ಷಿಸಲು ಪ್ರಧಾನಿಗೆ ಪವಾರ್ ಪತ್ರ
ಮುಂಬೈ, ಆ. 19 – ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳಿಗಿಂತ ಸಹಕಾರಿ ಬ್ಯಾಂಕುಗಳೇ ಹೆಚ್ಚು ಸುರಕ್ಷಿತ ಎಂದು ಅಭಿಪ್ರಾಯ ಪಟ್ಟಿರುವ ಎನ್.ಸಿ.ಪಿ. ನಾಯಕ ಶರದ್ ಪವಾರ್, ಸಹಕಾರಿ ಬ್ಯಾಂಕುಗಳ ಅಸ್ತಿತ್ವ ಹಾಗೂ ಅವುಗಳ ಸಹಕಾರಿ ಸ್ವರೂಪವನ್ನು ರಕ್ಷಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಇತರೆ ಬ್ಯಾಂಕುಗಳಿಗಿಂತ ಸಹಕಾರಿ ಬ್ಯಾಂಕುಗಳು ಕಳಪೆಯಾಗಿವೆ ಇಲ್ಲವೇ ಅವುಗಳಲ್ಲಿನ ವಂಚನೆ ತಡೆಯಲು ಖಾಸಗಿ ಬ್ಯಾಂಕ್ ಮಾಡಬೇಕೆಂಬ ವಾದವನ್ನೂ ಪವಾರ್ ತಳ್ಳಿ ಹಾಕಿದ್ದಾರೆ.
ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿಗೆ ಬರೆದಿರುವ ಪತ್ರವನ್ನು ಪ್ರಕಟಿಸಿರುವ ಪವಾರ್, ಮಧ್ಯಮ ವರ್ಗದ ಹಿತ ರಕ್ಷಿಸಲು ಸಹಕಾರಿ ಬ್ಯಾಂಕುಗಳನ್ನು ರಿಸರ್ವ್ ಬ್ಯಾಂಕ್ ನಿಗಾಗೆ ಒಳಪಡಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆ ಉದ್ದೇಶವನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಸಹಕಾರಿ ಬ್ಯಾಂಕುಗಳ ಅಸ್ತಿತ್ವ ಹಾಗೂ ಅವುಗಳ ಸಹಕಾರಿ ಸ್ವರೂಪವನ್ನು ರಕ್ಷಿಸಬೇಕಿದೆ ಎಂದಿದ್ದಾರೆ.
ಬ್ಯಾಂಕುಗಳಲ್ಲಿ ಹಣಕಾಸು ಶಿಸ್ತು ಇರಬೇಕು. ಆದರೆ, ಸಹಕಾರಿಗಳನ್ನು ಖಾಸಗಿ ವಲಯವಾಗಿ ಮಾಡುವುದರಿಂದ ಈ ಉದ್ದೇಶ ಈಡೇರುವುದಿಲ್ಲ ಎಂದು ಪವಾರ್ ಅಭಿಪ್ರಾಯ ಪಟ್ಟಿದ್ದಾರೆ.
ರಿಸರ್ವ್ ಬ್ಯಾಂಕ್ ಪ್ರಕಾರ 2019-20ರಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ವಲಯದಲ್ಲಿ ಕ್ರಮವಾಗಿ 3,766 ಹಾಗೂ 2,010 ವಂಚನೆಗಳು ನಡೆದಿದ್ದವು. ಆದರೆ, ಸಹಕಾರಿ ಬ್ಯಾಂಕುಗಳಲ್ಲಿ ಕೇವಲ 181 ವಂಚನೆ ನಡೆದಿವೆ ಎಂದು ಪವಾರ್ ಹೇಳಿದ್ದಾರೆ.
ಸರ್ಕಾರಿ ಬ್ಯಾಂಕುಗಳಲ್ಲಿ 64,509.90 ಕೋಟಿ ರೂ. ವಂಚನೆ ನಡೆದಿದೆ. ಇದು ಒಟ್ಟು ವಂಚನೆಯ ಶೇ.90.20 ರಷ್ಟಾಗಿದೆ. ಖಾಸಗಿ ವಲಯದ ಬ್ಯಾಂಕುಗಳಲ್ಲಿ 5,515.10 ಕೋಟಿ ರೂ.ಗಳ ವಂಚನೆ ನಡೆದಿದೆ. ಇದರ ಒಟ್ಟು ಪ್ರಮಾಣ ಶೇ.7.69ರಷ್ಟಾಗಿದೆ ಎಂದವರು ಹೇಳಿದ್ದಾರೆ.
2019-20ರಲ್ಲಿ ಪಿಎಂಸಿ ಬ್ಯಾಂಕಿನಲ್ಲಿ 4,355 ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೆ, ಅದೇ ವರ್ಷದ ಪ್ರಥಮಾರ್ಧದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಡೆದ ವಂಚನೆಯ ಪ್ರಮಾಣ ಸುಮಾರು 95,700 ಕೋಟಿ ರೂ. ಆಗಿದೆ ಎಂದು ಪವಾರ್ ತಿಳಿಸಿದ್ದಾರೆ.
ಹೀಗಾಗಿ ಸಹಕಾರಿ ಬ್ಯಾಂಕುಗಳಲ್ಲಿ ಮಾತ್ರ ಹಣದ ದುರ್ಬಳಕೆ ಇಲ್ಲವೇ ಹಣಕಾಸು ಅವ್ಯವಹಾರ ನಡೆಯುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದವರು ಹೇಳಿದ್ದಾರೆ.
ಸಹಕಾರಿ ಬ್ಯಾಂಕುಗಳಲ್ಲಿ ವೃತ್ತಿಪರತೆಯ ಕೊರತೆ ಇದೆ ಎಂದು ರಿಸರ್ವ್ ಬ್ಯಾಂಕ್ ಹೇಳುತ್ತಿದೆ. ಆದರೆ, ಅದರದೇ ಅಂಕಿ ಅಂಶಗಳ ಪ್ರಕಾರ ವಾಣಿಜ್ಯ ಬ್ಯಾಂಕುಗಳಲ್ಲಿ ಒಟ್ಟು ಎನ್.ಪಿ.ಎ. ಹಾಗೂ ನಿವ್ವಳ ಎನ್.ಪಿ.ಎ. ಪ್ರಮಾಣ ಕ್ರಮವಾಗಿ ಶೇ.9.68 ಹಾಗೂ ಶೇ.5.31 ಆಗಿದೆ. ಇದೇ ವೇಳೆ ನಗರ ಸಹಕಾರಿ ಬ್ಯಾಂಕುಗಳಲ್ಲಿ ಈ ಪ್ರಮಾಣ ಕ್ರಮವಾಗಿ ಶೇ.7.51 ಹಾಗೂ ಶೇ.2.53 ಆಗಿದೆ ಎಂದು ಪವಾರ್ ತಿಳಿಸಿದ್ದಾರೆ.
ಒಟ್ಟು ನಗರ ಸಹಕಾರಿ ಬ್ಯಾಂಕುಗಳಲ್ಲಿ ಕೇವಲ 70 ಮಾತ್ರ ಡಿ ದರ್ಜೆಯಲ್ಲಿವೆ. ಹೀಗಿರುವಾಗ ಸಹಕಾರಿ ಬ್ಯಾಂಕುಗಳಲ್ಲಿ ವೃತ್ತಿಪರತೆ ಇಲ್ಲ ಎಂಬುದು ಅಸಂಗತ ವಾಗಿದೆ ಎಂದೂ ಪವಾರ್ ತಿಳಿಸಿದ್ದಾರೆ.
ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ)ಯಲ್ಲಿ ನಡೆದಿದ್ದು ವಂಚನೆಯೇ ವಿನಹ ಸಹಕಾರಿ ಬ್ಯಾಂಕುಗಳ ಉದ್ಯಮ ವೈಫಲ್ಯವಲ್ಲ. ಹೀಗಾಗಿ ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸಿ ಸಹಕಾರಿ ಬ್ಯಾಂಕಿಂಗ್ ವಲಯಕ್ಕೆ ನ್ಯಾಯ ಒದಗಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಸಹಕಾರಿ ಬ್ಯಾಂಕಿಂಗ್ ವಲಯ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದೆ. ಇವುಗಳ ವ್ಯಾಪಕ ಶಾಖಾ ಜಾಲದ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಎಲ್ಲಾ ನಗರ ಸಹಕಾರಿ ಬ್ಯಾಂಕುಗಳ ಪರಿಶೀಲನೆ ಪ್ರತಿ ವರ್ಷ ನಡೆಸುವುದು ಅಸಾಧ್ಯ ಎಂದು ಪವಾರ್ ತಿಳಿಸಿದ್ದಾರೆ.
ಹೀಗಾಗಿ ರಿಸರ್ವ್ ಬ್ಯಾಂಕ್ ಸಹಕಾರಿ ಬ್ಯಾಂಕುಗಳನ್ನು ಖಾಸಗಿ ಬ್ಯಾಂಕುಗಳಾಗಿ ಮಾಡಲು 1993ರಿಂದ ಪ್ರಯತ್ನ ನಡೆಸುತ್ತಿದೆಯಾದರೂ ಅದು ಸಾಧ್ಯವಾಗಿಲ್ಲ ಎಂದವರು ಹೇಳಿದ್ದಾರೆ.