ಕೊರೊನಾ ಕಾರಣದಿಂದ ಕೇವಲ 230 ರೈಲುಗಳನ್ನು ಓಡಿಸಿದರೂ ಬಾರದ ಬೇಡಿಕೆ
ದಾವಣಗೆರೆ, ಆ. 19 – ಕೊರೊನಾ ಕಾರಣದಿಂದಾಗಿ ರೈಲ್ವೆ ಪ್ರಯಾಣದ ಬೇಡಿಕೆ ತೀವ್ರವಾಗಿ ತಗ್ಗಿದ್ದು, ಪ್ರಸಕ್ತ 230 ವಿಶೇಷ ರೈಲುಗಳನ್ನು ಮಾತ್ರ ಓಡಿಸಲಾಗುತ್ತಿದೆ. ಇವುಗಳಲ್ಲೂ ಸಹ ಶೇ.30ಕ್ಕೂ ಕಡಿಮೆ ಜನ ಪ್ರಯಾಣಿಸುತ್ತಿದ್ದಾರೆ ಎಂದು ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಡಿ.ಆರ್.ಎಂ. ಅಪರ್ಣ ಗಾರ್ಗ್ ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೊರೊನಾ ಕಾರಣದಿಂದಾಗಿ ರೈಲ್ವೆ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಇದೇ ಮೊದಲ ಬಾರಿಗೆ ಪ್ರಯಾಣಿಕರ ಸೇವೆ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಇಷ್ಟಾದರೂ ಸಹ, ಶ್ರಮಿಕ ರೈಲುಗಳ ಮೂಲಕ ಕೊರೊನಾ ಅವಧಿಯಲ್ಲಿ ಜನರಿಗೆ ನೆರವು ನೀಡಲಾಗಿದೆ. ಪ್ರಸಕ್ತ 230 ರೈಲುಗಳನ್ನು ಓಡಿಸಲಾಗುತ್ತಿದ್ದು, ಜನರಿಂದ ಬೇಡಿಕೆ ಬಂದರೆ ಇನ್ನಷ್ಟು ರೈಲುಗಳಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈಗ 230 ವಿಶೇಷ ರೈಲುಗಳನ್ನು ಮಾತ್ರ ನಿರ್ವಹಿಸುತ್ತಿದ್ದು, ಸಾಮಾನ್ಯ ರೈಲುಗಳ ಸೇವೆ ನಿಲ್ಲಿಸಲಾಗಿದೆ. ಮುಂಬರುವ ದಿನಗಳಲ್ಲಿ ರೈಲುಗಳ ಸೇವೆ ಪುನರಾರಂಭವಾದಾಗ ಸಮಗ್ರ ರೈಲ್ವೆ ವೇಳಾ ಪಟ್ಟಿಯನ್ನು ಬದಲಿಸಲಾಗುವುದು. ಜನರ ಬೇಡಿಕೆ ಹಾಗೂ ಅನುಕೂಲಕ್ಕೆ ತಕ್ಕ ರೀತಿ ಬದಲಾವಣೆ ಮಾಡಲಾಗುವುದು ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಹುಬ್ಬಳ್ಳಿ – ಚಿಕ್ಕಜಾಜೂರು ಮಾರ್ಗದಲ್ಲಿ 190 ಕಿ.ಮೀ. ಉದ್ದದಲ್ಲಿ ಡಬ್ಲಿಂಗ್ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ 50 ಕಿ.ಮೀ. ಮಾರ್ಗ ಪೂರ್ಣಗೊಂಡಿದ್ದು, 40 ಕಿ.ಮೀ. ಮುಗಿಯುವ ಹಂತದಲ್ಲಿದೆ. ಮುಂದಿನ 2021ರ ಸೆಪ್ಟೆಂಬರ್‌ನಿಂದ ನವೆಂಬರ್ ಒಳಗೆ ಡಬ್ಲಿಂಗ್ ಕಾಮಗಾರಿ ಸಂಪೂರ್ಣ ಮುಗಿಸಲಾಗುವುದು ಎಂದವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ತುಮಕೂರು – ಅರಸೀಕೆರೆ ಮಾರ್ಗ ದಲ್ಲಿನ 11 ಕಿ.ಮೀ. ಕಾಮಗಾರಿ ಪೂರ್ಣವಾಗ ಬೇಕಿದೆ. ಕೊರೊನಾ ಕಾರಣದಿಂದಾಗಿ ಕಾಮ ಗಾರಿ ಕೈಗೊಳ್ಳಲು ಅಡ್ಡಿಯಾಗಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ರೈಲ್ವೆಯಲ್ಲಿ ಇತ್ತೀಚೆಗೆ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಕುರಿತು ವಿವರ ನೀಡಿದ ಅವರು, ಎಂಟು ರೈಲ್ವೆ ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣ ಮಾದರಿಯ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಇನ್ನೂ 15ರಲ್ಲಿ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.
ರೈಲ್ವೆಯು ಸರಕು ಸಾಗಣೆಯ ಕಡೆ ಹೆಚ್ಚು ಒತ್ತು ನೀಡುತ್ತಿದೆ. ಗ್ರಾಹಕರ ಜೊತೆ ನಿಯಮಿತವಾಗಿ ವೆಬ್ – ಲಿಂಕ್ ಮೂಲಕ ಸಂಪರ್ಕಿಸಲಾಗುತ್ತಿದೆ. ಸಿಐಐ, ಎಪಿಎಂಸಿ ಮುಂತಾದ ಸಂಸ್ಥೆಗಳನ್ನು ಸಂಪರ್ಕಿಸಿ ಕೈಗಾರಿಕೆ ಹಾಗೂ ಕೃಷಿ ಸರಕುಗಳ ಸಾಗಣೆಗೆ ಕ್ರಮ ವಹಿಸಲಾಗುತ್ತಿದೆ. 2019-20ರಲ್ಲಿ 8.13 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಲಾಗಿದೆ. ಇದನ್ನು 2020-21ರಲ್ಲಿ 8.20 ಮೆಟ್ರಿಕ್ ಟನ್‌ಗೆ ಹೆಚ್ಚಿಸಲಾಗುವುದು ಎಂದವರು ತಿಳಿಸಿದ್ದಾರೆ.
ಮಿಷನ್ ರಫ್ತಾರ್ ಮೂಲಕ ಸರಕು ಸಾಗಣೆ ರೈಲಿನ ಸರಾಸರಿ ವೇಗವನ್ನು 50 ಕಿ.ಮೀ.ಗಳವರೆಗೆ ಹೆಚ್ಚಿಸಲಾಗಿದೆ. ಸರಕು ಸಾಗಣೆಗಾಗಿ ವಿನಾಯಿತಿಗಳು ಹಾಗೂ ಯೋಜನೆಗಳನ್ನೂ ಹೊಂದಲಾಗಿದೆ ಎಂದು ಗಾರ್ಗ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರೈಲ್ವೆ ಅಧಿಕಾರಿಗಳಾದ ನಾರಾಯಣ ರಾವ್, ಶ್ರೀರಾಮನ್, ವಿಜಯ, ಪಾರ್ಥಸಾರಥಿ ಮತ್ತಿತರರು ಉಪಸ್ಥಿತರಿದ್ದರು.