ದಾವಣಗೆರೆ ಆ.19- ಜಿಲ್ಲೆಯಾದ್ಯಂತ ಗಣೇಶ ಹಾಗೂ ಮೊಹರಂ ಹಬ್ಬಗ ಳನ್ನು ಮುಂಜಾಗ್ರತಾ ಕ್ರಮಗಳ ಸಹಿತ ಆಡಂಬ ರವಿಲ್ಲದೇ ಭಕ್ತಿ ಪೂರಕ ವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಾರ್ವಜನಿಕರಿಗೆ ಸಲಹೆ ನೀಡಿದರು.
ಅವರು, ಇಂದು ಸಂಜೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಗಳ ಕಚೇರಿ ಸಭಾಂಗಣದಲ್ಲಿ ಗಣೇಶ ಮತ್ತು ಮೊಹರಂ ಹಬ್ಬಗಳ ಆಚರಣೆ ಪ್ರಯುಕ್ತ ನಡೆದ ನಾಗರಿಕರ ಸೌಹಾರ್ಧ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿ, ಕಾನೂನುಗಳ ಉಲ್ಲಂಘಿಸದೇ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಂಡು ಈ ಎರಡು ಹಬ್ಬಗಳ ಆಚರಿಸುವಂತೆ ಮನವಿ ಮಾಡಿದರು.
ನಗರ ಪಾಲಿಕೆ ಮೇಯರ್ ಅಜಯ್ ಕುಮಾರ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಹಬ್ಬಗಳ ಆಚರಣೆಯಲ್ಲಿ ಯಾವುದೇ ವಿಜೃಂಭಣೆ ಬೇಡ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಬಹಳ ಸರಳವಾಗಿ ಆಚರಣೆ ಮಾಡಬೇಕು. ಹಬ್ಬದ ಆಚರಣೆ ಸಂದರ್ಭದಲ್ಲಿ ನೀರು, ಸ್ವಚ್ಛತೆ, ಬೆಳಕು ಬಹಳ ಮುಖ್ಯವಾಗಿದೆ. ಇದಕ್ಕೆ ಪಾಲಿಕೆ ವತಿಯಿಂದ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಎಂಜಲು ಮಾತ್ರವಲ್ಲದೆ ಗಾಳಿ ಯಿಂದಲೂ ಕೊರೊನಾ ಬರುತ್ತದೆ ಎಂದು ತಿಳಿದುಬಂದಿದೆ. ಪ್ರತಿಯೊ ಬ್ಬರು ಮಾಸ್ಕ್ ಅನ್ನು ಕಡ್ಡಾಯವಾಗಿ ಬಳಸಬೇಕು. ಸರ್ಕಾರದ ಆದೇಶ ಪಾಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಜನರು ಸಹಕರಿಸಬೇಕೆಂದರು.
ದೂಡಾ ಅಧ್ಯಕ್ಷ ರಾಜನಳ್ಳಿ ಶಿವಕುಮಾರ ಮಾತನಾಡಿ, ಕೊರೊನಾ ಮಹಾ ಸಂಕಷ್ಟದ ಸಂದರ್ಭದಲ್ಲಿ ಹಬ್ಬದ ಆಚರಣೆ ನಮ್ಮ ಆತ್ಮಸಾಕ್ಷಿಗೆ ಬಿಟ್ಟಿದ್ದು. ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣವೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಶಾಂತಿ-ಸೌಹಾರ್ಧದ ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ನಮಗಿರುವ ಕಾನೂನಿನ ಪರಿಮಿತಿಯಲ್ಲಿ ಹಬ್ಬಗಳನ್ನು ಆಚರಣೆ ಮಾಡಬೇಕು. ಬೇರೆಯವರ ಭಾವನೆಗಳಿಗೆ ಧಕ್ಕೆಯಾಗಬಾರದು ಎಂದು ಕಿವಿಮಾತು ಹೇಳಿದರು.
ಮುಂಜಾಗ್ರತೆ ವಹಿಸದಿದ್ದರೆ ಕೊರೊನಾ ನಿಯಂತ್ರಣ ಅಸಾಧ್ಯ
ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ಜನರು ಜಾಗೃತರಾಗುತ್ತಿಲ್ಲ ಹಾಗೂ ಮುಂಜಾಗ್ರತೆ ವಹಿಸುತ್ತಿಲ್ಲ. ಕಡ್ದಾಯವಾಗಿ ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರವಿಲ್ಲ. ಹೀಗಿದಾರೆ ಕೊರೊನಾ ನಿಯಂತ್ರಣ ಅಸಾಧ್ಯ. ಇದರ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯ. ಸೋಂಕಿನ ಲಕ್ಷಣ ಕಂಡುಬಂದಲ್ಲಿ ಯಾವುದೇ ಕೀಳು ಭಾವನೆಗೆ ಒಳಗಾಗದೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಲ್ಲದೇ ಪರೀಕ್ಷೆಗೆ ಪ್ರತಿಯೊಬ್ಬರು ಸಹಕರಿಸಬೇಕೆಂದ ಅವರು, ದಿನಕ್ಕೆ 2 ರಿಂದ 3 ಸಾವಿರ ಜನರ ಪರೀಕ್ಷೆ ಮಾಡಿಸಲಾಗುತ್ತಿದೆ. ಇದರಿಂದಾಗಿ ಸಾಕಷ್ಟು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ.
– ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ.
ಸಾಮಾಜಿಕ ಮಾಧ್ಯಮಗಳ ಬಗ್ಗೆ ಜಾಗೃತರಾಗಿ
ಸಾಮಾಜಿಕ ಮಾಧ್ಯಮಗಳ ಬಗ್ಗೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು. ಇದಕ್ಕೆ ಹೊಸ ಕಾನೂನು ಮಾಡಬೇಕೆಂದು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚೆ ನಡೆದಿದೆ. ಅನಾವಶ್ಯಕವಾಗಿ ಜನರ ನೆಮ್ಮದಿ, ಸಾಮಾಜಿಕ ಸ್ವಾಸ್ತ್ಯ ಕೆಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮೊಬೈಲ್ ದುರ್ಬಳಕೆ ಕಡಿಮೆ ಆಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಚಾಚು ತಪ್ಪದೆ ಪಾಲಿಸಬೇಕಿದೆ.
– ಹನುಮಂತರಾಯ, ಎಸ್ಪಿ
ಜಿಲ್ಲೆಯಲ್ಲಿ 1442 ರೌಡಿ ಶೀಟರ್ಸ್ ಇದ್ದಾರೆ. ಎಲ್ಲವೂ ಪರ್ಮನೆಂಟ್ ರೆಕಾರ್ಡ್ಸ್ ಅಲ್ಲ. ಜಿಲ್ಲೆಗೆ ಸಂಬಂಧಪಟ್ಟ ಕೆಟ್ಟ ಘಟನೆಗಳ ಹಿನ್ನೆಲೆಯಲ್ಲಿ ಜನರಿಗೆ ಶಾಂತಿ ಒದಗಿಸುವ ದಿಸೆಯಲ್ಲೆ ನಿಗಾ ಇಡಲು ಮಾಡಲಾಗಿದೆ. ವಯಸ್ಸಾದವರು, ಕೇಸ್ ಖುಲಾಸೆಯಾದವರು, ಊರು ಬಿಟ್ಟು ಹೋಗಿ ಬೇರೆ ಕಡೆ ನೆಲೆಸಿದವರು ಹಾಗೂ ಜೀವನದಲ್ಲಿ ಬದಲಾಗಿ ಬದುಕು ನಡೆಸುತ್ತಿರುವವರನ್ನು ಸದ್ಯದಲ್ಲಿಯೇ ರೌಡಿ ಶೀಟರ್ಸ್‍ನಿಂದ ತೆಗೆದು ಹಾಕುತ್ತೇವೆಂದರು.
ಹಿಂದೂ ಸಮಾಜದ ಮುಂಖಡ ಕೆ.ಬಿ. ಶಂಕರನಾರಾಯಣ ಮಾತನಾಡಿ, ಕೊರೊನಾದಂತಹ ಸಂಕಷ್ಟ ಸಮಯದಲ್ಲಿ ಗಣೇಶ ಮತ್ತು ಮೊಹರಂ ಹಬ್ಬವನ್ನು ನಗರದ ಜನತೆ ಅದ್ಧೂರಿಯಾಗಿ ಆಚರಿಸದೆ ಶಾಸ್ತ್ರೋಕ್ತವಾಗಿ ಸರಳವಾಗಿ ಆಚರಿಸುವ ಮೂಲಕ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಎಂದರು.
ಮುಸ್ಲಿಂ ಸಮಾಜದ ಮುಖಂಡ ಸಾದಿಕ್ ಪೈಲ್ವಾನ್ ಮಾತನಾಡಿ, ಜಿಲ್ಲೆಯ ಶಾಂತಿ ತೋಟದಲ್ಲಿ ಮುಳ್ಳು ಅರಳಬಾರದು, ಹೂ ಅರಳಬೇಕು. ಜೊತೆ ಜೊತೆಗೆ ಎರಡು ಹಬ್ಬಗಳು ಬಂದಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಹಕರಿಸಿಕೊಂಡು ಹಬ್ಬ ಆಚರಿಸಬೇಕು ಎಂದರು.
ಕ್ರೈಸ್ತ ಧರ್ಮದ ಫಾದರ್ ಹೊನ್ನ ನಾಯರ ಮಾತನಾಡಿ, ಹಬ್ಬಗಳ ಆಚರಣೆಗಿಂತಲೂ ಅನುಕರಣೆ ಬಹಳ ಮುಖ್ಯ. ಇತ್ತೀಚೆಗೆ ಧರ್ಮ ಹಾಗೂ ದೇವರಗಳ ಹೆಸರಲ್ಲಿ ಶೋಷಣೆ, ದಂಗೆ ಹಾಗೂ ಅಸಮಾಧಾನಗಳು ಉಂಟಾಗುತ್ತಿವೆ. ಅದು ಆಗಬಾರದು. ಸರ್ಕಾರದ ನಿಯಮಗಳನ್ನು ಕರ್ತವ್ಯವಾಗಿ ಪಾಲಿಸುತ್ತಾ ಎಲ್ಲರೂ ಒಟ್ಟಾಗಿ ಹಬ್ಬಗಳನ್ನು ಆಚರಿಸಬೇಕೆಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿ ಎಂ.ರಾಜು ಪ್ರಾಸ್ತವಿಕವಾಗಿ ಮಾತನಾಡಿದರು. ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ದಿಎಚ್‍ಓ ಡಾ. ರಾಘವೇಂದ್ರಸ್ವಾಮಿ, ವಿವಿಧ ಸಮಾಜದ ಮುಖಂಡರುಗಳಾದ ಗೌಡ್ರು ಚನ್ನಬಸಪ್ಪ, ಸರ್ದಾರ್ ಚನ್ನಗಿರಿ, ಅಮಾನುಲ್ಲಾಖಾನ್, ಸತೀಶ್ ಪೂಜಾರ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ವಿವಿಧ ಇಲಾಖಾ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.