ಸಿಂಗಪುರ, ಆ. 18 – ಯುರೋಪ್, ಉತ್ತರ ಅಮೆರಿಕ ಹಾಗೂ ಏಷಿಯಾದ ಕೆಲ ಭಾಗಗಳಲ್ಲಿ ಕಂಡು ಬರುತ್ತಿರುವ ಮ್ಯುಟೇಷನ್ ಆಗಿರುವ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಕಡಿಮೆ ಮಾರಣಾಂತಿಕವಾಗಿದೆ ಎಂದು ಪ್ರಮುಖ ಸೋಂಕು ರೋಗಗಳ ವೈದ್ಯರೊಬ್ಬರು ತಿಳಿಸಿದ್ದಾರೆ.
ಸಿಂಗಪುರದ ನ್ಯಾಷನಲ್ ಯೂನಿವರ್ಸಿಟಿಯ ಹಿರಿಯ ಸಲಹೆಗಾರರಾಗಿರುವ ಪೌಲ್ ತಂಬ್ಯಾ ಅವರು ಹೇಳಿಕೆ ನೀಡಿದ್ದು, ಕೊರೊನಾದ ಡಿ614ಜಿ ಮ್ಯುಟೇಷನ್ ವಿಶ್ವದ ಕೆಲ ಭಾಗಗಳಲ್ಲಿ ಕಂಡು ಬರುತ್ತಿದೆ. ಇದು ಕಡಿಮೆ ಮಾರಣಾಂತಿಕ. ಸಾವಿನ ಪ್ರಮಾಣ ಕಡಿಮೆಯಾಗಲು ಇದು ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಈ ಮ್ಯುಟೇಷನ್ ವೈರಸ್ ಹೆಚ್ಚು ವೇಗವಾಗಿ ಹರಡುತ್ತದೆಯಾದರೂ, ಕಡಿಮೆ ಮಾರಣಾಂತಿಕವಾಗಿರುವುದರಿಂದ ಒಳ್ಳೆಯದೇ ಎಂದು ತಂಬ್ಯಾ ಹೇಳಿದ್ದಾರೆ.
ಬಹುತೇಕ ವೈರಸ್‌ಗಳು ಮ್ಯುಟೇಟ್ ಆಗುತ್ತಾ ಸಾಗಿದಂತೆ ಅವುಗಳ ತೀವ್ರತೆ ಕಡಿಮೆಯಾಗುತ್ತದೆ. ವೈರಸ್ ತನ್ನ ಆಹಾರ ಹಾಗೂ ಆಶ್ರಯಕ್ಕಾಗಿ ಬೇರೆಯವರನ್ನು ಅವಲಂಬಿಸಿರುತ್ತದೆ. ಹೀಗಾಗಿ ಹೆಚ್ಚು ಜನರನ್ನು ವೈರಸ್ ಆಶ್ರಯಿಸುತ್ತಾ, ಅವರನ್ನು ಕೊಲ್ಲದೇ ಇರುವುದು ಅದರ ಹಿತದಲ್ಲಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ವೈರಸ್ ಮ್ಯುಟೇಷನ್ ಆಗುತ್ತಾ ಸಾಗಿದಂತೆ ಅದು ತೀವ್ರವಾಗುತ್ತಿರುವ ಯಾವುದೇ ಸೂಚನೆಗಳು ಕಂಡು ಬರುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆ ಸಹ ತಿಳಿಸಿದೆ.
ಕೊರೊನಾ ವೈರಸ್‌ನ ಮ್ಯುಟೇಷನ್ ಆದ ಜಿ614ಜಿ ಮಲೇಷಿಯಾದ ಎರಡು ಕಡೆಗಳಲ್ಲಿ ಪತ್ತೆಯಾಗಿದೆ. ಇದು ಹೆಚ್ಚು ತೀವ್ರವಾಗಿ ಹರಡುತ್ತದೆ ಎಂದು ಮಲೇಷಿಯಾದ ಆರೋಗ್ಯ ವಿಭಾಗದ ಪ್ರಧಾನ ನಿರ್ದೇಶಕ ನೂರ್ ಹಿಶಾಮ್ ಅಬ್ದುಲ್ಲಾ ಹೇಳಿದ್ದರು.
ಸಿಂಗಪುರದಲ್ಲೂ ಸಹ ಈ ಮ್ಯುಟೇಷನ್ ವೈರಸ್ ಪತ್ತೆಯಾಗಿದೆ. ಆದರೆ, ಇದು ವ್ಯಾಪಕವಾಗಿ ಹರಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸೆಬಾಷ್ಚಿಯನ್ ಮೌರರ್ ಸ್ಟ್ರೋ ತಿಳಿಸಿದ್ದಾರೆ.
ಜಿ614ಜಿ ವೈರಸ್ ಹತ್ತು ಪಟ್ಟು ಹೆಚ್ಚು ಸೋಂಕುಕಾರಕವಾಗಿದೆ. ಪ್ರಸಕ್ತ ವಿಶ್ವದಾದ್ಯಂತ ಅಭಿವೃದ್ಧಿ ಪಡಿಸಲಾಗುತ್ತಿರುವ ಲಸಿಕೆಗಳು ಇದಕ್ಕೆ ಪರಿಣಾಮಕಾರಿಯಾಗದೇ ಹೋಗಬಹುದು ಎಂದು ಮಲೇಷಿಯಾದ ನೂರ್ ಹಿಶಾಮ್ ತಿಳಿಸಿದ್ದರು.
ಆದರೆ, ತಬ್ಯಾ ಮತ್ತು ಮೌರರ್ – ಸ್ಟೋರ್ ಅವರು ಈ ವಾದವನ್ನು ತಳ್ಳಿ ಹಾಕಿದ್ದು, ಲಸಿಕೆ ನಿಷ್ಕ್ರಿಯವಾಗುವ ರೀತಿಯಲ್ಲಿ ವೈರಸ್ ಬದಲಾಗಿಲ್ಲ ಎಂದಿದ್ದಾರೆ.