ಕತ್ತಲಗೆರೆ : ಬೆಳೆ ಸಮೀಕ್ಷೆ ಮೊಬೈಲ್ ಆಪ್ ಪ್ರಾತ್ಯಕ್ಷಿಕೆಯಲ್ಲಿ ಸಚಿವ ಬಿ.ಸಿ. ಪಾಟೀಲ್
ಚನ್ನಗಿರಿ, ಆ.18- ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ನಡೆಸುವ ಆಪ್ ಬಿಡುಗಡೆ ಮಾಡಲಾಗಿದೆ. ಈ ಬೆಳೆ ಸಮೀಕ್ಷೆ ಉತ್ಸವವನ್ನು ಒಂದು ರೀತಿ ಹಬ್ಬದ ರೀತಿಯಲ್ಲಿ ಆಚರಿಸೋಣ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ನಾರಪ್ಪನವರ ಜಮೀನಿನಲ್ಲಿ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರರೊಂದಿಗೆ ಅವರು ಮಾತನಾಡಿದರು.
ಈ ಹಿಂದೆ ರೈತರಿಗೆ ತಮ್ಮ ಬೆಳೆ ಕುರಿತು ಸಮೀಕ್ಷೆ ನಡೆಸುವ ಸ್ವಾತಂತ್ರ್ಯವನ್ನು ಯಾವತ್ತೂ ಕೊಟ್ಟಿರಲಿಲ್ಲ. ಬೆಳೆ ಸಮೀಕ್ಷೆ ಮೂಲಕ ರೈತರಿಗೆ ವಿಶೇಷ ಸ್ವಾತಂತ್ರ್ಯ ಲಭಿಸಿದೆ. ಒಮ್ಮೊಮ್ಮೆ ಪಿಆರ್ಒಗಳಿಗೆ ರೈತರೊಂದಿಗೆ ವೈಮನಸ್ಸಿದ್ದರೆ ಅವರ ಬೆಳೆ ಫೋಟೊ ಹಾಕುತ್ತಿರಲಿಲ್ಲ. ಇಂತಹ ಸನ್ನಿವೇಶಗಳಿಂದ ರೈತರಿಗೆ ತೊಂದರೆ ಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರೈತರಿಗೆ ಆಪ್ ಅನುಕೂಲವಾಗಿದೆ ಎಂದರು.
ರೈತರು ತಾವು ಬೆಳೆದ ಬೆಳೆಯಲ್ಲಿ ಎಷ್ಟು ಇಳುವರಿ ಬಂದಿದೆ. ಯಾವ ಬೆಳೆ ಬೆಳೆದಿದ್ದಾರೆ ಎಂಬುದರ ನಿಖರ ಮಾಹಿತಿ ತಿಳಿಯಲು ಆಪ್ ತುಂಬಾ ಸಹಕಾರಿ. ಈ ಹಿಂದಿನ ಬೆಳೆ ಸಮೀಕ್ಷೆಯಲ್ಲಿನ ನ್ಯೂನತೆಯನ್ನು ಬಗೆಹರಿಸಲು ರಾಜ್ಯವು ಮೊದಲ ಬಾರಿಗೆ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಬಳಕೆ ಜಾರಿಗೆ ತಂದಿದ್ದು, ಇದರಿಂದ ಪಾರದರ್ಶಕತೆ ಕಾಪಾಡಿಕೊಳ್ಳಬಹುದು ಎಂದರು.
ತಮಗೆ ತಾವೇ ಸರ್ಟಿಫಿಕೇಟ್ : ನನ್ನ ಬೆಳೆ ನನ್ನ ಹಕ್ಕು, ನನ್ನ ಬೆಳೆ ನನ್ನ ಸ್ವಾತಂತ್ರ್ಯ, ನನ್ನ ಬೆಳೆ ನನ್ನ ಸಮೀಕ್ಷೆ ಎಂದು ರೈತರು ತಾವು ಬೆಳೆದ ಬೆಳೆಗಳ ಫೋಟೋವನ್ನು ಅವರೇ ನಮೂದಿಸಿ ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಳ್ಳಬಹುದು. ತಮ್ಮ ಜಮೀನಿನಲ್ಲಿ ತಾವೇ ನಿಂತುಕೊಂಡು ಮೊಬೈಲ್ನಲ್ಲಿ ಆಪ್ ಡೌನ್ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ ಫೋಟೋ ಅಪ್ ಲೋಡ್ ಮಾಡುವುದರಿಂದ ರಾಜ್ಯದಲ್ಲಿ ರಾಗಿ, ಜೋಳ, ಭತ್ತ ಸೇರಿದಂತೆ ಬೆಳೆಗಳು ಎಷ್ಟು ಬೆಳೆದಿದ್ದಾರೆ ಎಂದು ಮಾಹಿತಿ ಲಭಿಸುತ್ತದೆ. ಇದರಿಂದ ಬೆಳೆಗಳ ಬೇಡಿಕೆ ಎಷ್ಟಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದು ತಿಳಿಸಿದರು.
ಸಮಾಜ ದ್ರೋಹಿ ಸಂಘಟನೆಗಳನ್ನು ನಿಷೇಧಿಸಲಿ : ಸಚಿವ
ದಾವಣಗೆರೆ, ಆ.18- ಯಾವ ಸಂಘಟನೆಗಳ ಸಮಾಜ ದ್ರೋಹಿ ಕೆಲಸ ಮಾಡುತ್ತವೋ ಅಂತಹ ಸಂಘಟನೆಗಳನ್ನು ಮುಲಾಜಿಲ್ಲದೆ ನಿಷೇಧ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಡಿ.ಜಿ. ಹಳ್ಳಿ ಘಟನೆ ರಾಜಕೀಯ ಪಿತೂರಿ ಎಂದು ಹೇಳಿದ ಅವರು, ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್ ಪಕ್ಷದ ದಲಿತ ಶಾಸಕ, ಅವರ ಮನೆ ಮೇಲೆ ದಾಳಿ ಮಾಡಿದವರನ್ನು ಅಮಾಯಕರು, ಪೊಲೀಸ್ ಠಾಣೆಗೆ ಬಂಕಿ ಹಚ್ಚಿ, ಸಾರ್ವಜನಿಕ ಆಸ್ತಿಗೆ ನಷ್ಟವನ್ನುಂಟು ಮಾಡಿದರವನ್ನು ಅಮಾಯಕರು ಎಂದು ಹೇಳುತ್ತಿದ್ದಾರೆ.
ಮುಂದಿನ ಓಟ್ ಬ್ಯಾಂಕ್ಗಾಗಿ ತಮ್ಮದೇ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗಿಲ್ಲ. ಗಲಭೆಯ ಆರೋಪಿಗಳನ್ನು ಬಂಧಿಸಿ ಎಂದು ಹೇಳಬಹುದಾಗಿತ್ತು. ಆದರೆ ಇಲ್ಲಿವರೆಗೆ ಒಬ್ಬರೂ ಈ ಬಗ್ಗೆ ಮಾತನಾಡಿಲ್ಲವೆಂದರೆ ಇದು ರಾಜಕೀಯ ಪಿತೂರಿ ಎಂಬುದು ಸ್ಪಷ್ಟ ಎಂದು ಹೇಳಿದರು.
ಪ್ರಸ್ತುತ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಉತ್ತಮ ಆಡಳಿತ ನಡೆಸುವ ಶಕ್ತಿ ಮುಖ್ಯಮಂತ್ರಿಗಿದೆ. ಕೊರೊನಾ, ಅತಿವೃಷ್ಠಿ, ಅನಾವೃಷ್ಠಿ ಎದುರಿಸಿ ಸಮರ್ಥ ಆಡಳಿತ ನಡೆಸುತ್ತಿದ್ದಾರೆ ಎಂದು ಪಾಟೀಲ್ ಸಮರ್ಥಿಸಿಕೊಂಡರು.
ಸಿಎಂ ಯಡಿಯೂರಪ್ಪನವರು ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬೆಳೆದ ಸುಮಾರು 10 ಲಕ್ಷ ರೈತರಿಗೆ ರೂ. 500 ಕೋಟಿ ಪರಿಹಾರ ಘೋಷಿಸಿದ್ದು ಕಳೆದ ವರ್ಷದ ಬೆಳೆ ಸಮೀಕ್ಷೆ ಆಧಾರದ ಮೇಲೆಯೇ. ಈಗಾಗಲೇ 8 ಲಕ್ಷ ರೈತರಿಗೆ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಯೂರಿಯ ಬಳಕೆ ಕಡಿಮೆ ಮಾಡಿ: ಯೂರಿಯ ಗೊಬ್ಬರ ಕೊರತೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಬೇಡಿಕೆಗನುಗುಣವಾಗಿ ಯೂರಿಯಾ ಸರಬರಾಜಾಗುತ್ತಿದ್ದು ಸದ್ಯ ರಾಜ್ಯಕ್ಕೆ 27 ಸಾವಿರ ಟನ್ ಬಂದಿದೆ. ಬೇಡಿಕೆಯ ಗೊಬ್ಬರವನ್ನು ಮಲೆನಾಡು ಪ್ರದೇಶಗಳಲ್ಲಿ ಮೊದಲನೇ ಹಂತದಲ್ಲಿ ಬಿಡುಗಡೆ ಮಾಡಲಾಗುವುದು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈಗಾಗಲೇ ನಾವು 67 ಸಾವಿರ ಮೆಟ್ರಿಕ್ ಟನ್ ಹೆಚ್ಚು ಗೊಬ್ಬರ ನೀಡಿದ್ದೇವೆ. ರೈತರು ಎಷ್ಟು ಗೊಬ್ಬರ ಬೇಕೋ ಅಷ್ಟೇ ಬಳಕೆ ಮಾಡಬೇಕು. ಬೆಳೆಗಾಗಿ ಹೆಚ್ಚು ಗೊಬ್ಬರ ಬಳಕೆ ಮಾಡುವುದುನ್ನು ನಿಲ್ಲಿಸಬೇಕು. ಹೆಚ್ಚು ಬಳಕೆ ಮಾಡಿದಷ್ಟು ಭೂತಾಯಿಗೆ ವಿಷ ಉಣಿಸಿದಂತಾಗುತ್ತದೆ ಎಂದರು.
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ, ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ತರುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳುವುದರ ಜೊತೆಗೆ ಕೃಷಿ ಪದ್ಧತಿಯಲ್ಲಿ ವೈಜ್ಞಾನಿಕತೆಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬೆಳೆ ಸಮೀಕ್ಷೆಯ ಪ್ರಕಟಣಾ ಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು. ಈ ವೇಳೆ ಶಾಸಕ ಪ್ರೊ.ಲಿಂಗಣ್ಣ ನೇತೃತ್ವದಲ್ಲಿ ಈ ಭಾಗದಲ್ಲಿ ಕೃಷಿ ಕಾಲೇಜು ನಿರ್ಮಿಸಬೇಕೆಂದು ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ, ಜಿಲ್ಲಾ ಪಂಚಾಯತ್ ಸದಸ್ಯರಾದ ತೇಜಸ್ವಿ ಪಟೇಲ್ ಸೇರಿದಂತೆ ಕೃಷಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.