ವಿಜ್ಞಾನ, ತಂತ್ರಜ್ಞಾನದ ಪರಿಣಾಮ ಕೃಷಿಯ ಒಲವು ಕಡಿಮೆ

ವಿಜ್ಞಾನ, ತಂತ್ರಜ್ಞಾನದ ಪರಿಣಾಮ ಕೃಷಿಯ ಒಲವು ಕಡಿಮೆ - Janathavani‘ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ

ಇಂದಿನ ತಳಮಳದ ಸ್ಥಿತಿಗೆ ‘ಮತ್ತೆ ಕಲ್ಯಾಣ’ ಧ್ಯಾನಶೀಲ, ಚಲನಶೀಲ ಕಾರ್ಯಕ್ರಮವಾಗಿ ಜನತೆಗೆ ನೆಮ್ಮದಿ ನೀಡುತ್ತಿದೆ. : ಡಾ.ಎಂ.ಜಿ. ಈಶ್ವರಪ್ಪ 

ಸಾಣೇಹಳ್ಳಿ, ಅ. 16-  ಭಾರತ ಕೃಷಿ ಪ್ರಧಾನ ದೇಶ. ನಮ್ಮ ಹಿರಿಯರಿಗೆ ಕೃಷಿ ಪವಿತ್ರ ಕಾಯಕ. ಅದರಲ್ಲೇ ಶಿವನನ್ನು ಕಾಣುವ ಧರ್ಮಶ್ರದ್ಧೆ ಇತ್ತು. ನಾಗರೀಕತೆ, ವಿಜ್ಞಾನ, ತಂತ್ರಜ್ಞಾನದ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ಕೃಷಿಯ ಒಲವು ಮತ್ತು ಅದಕ್ಕಿದ್ದ ಪಾವಿತ್ರ್ಯ ಕಡಿಮೆ ಆಗಿದೆ ಎಂದು ಸಾಣೇಹಳ್ಳಿ ಶ್ರೀ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಶ್ರೀಮಠದಿಂದ ಆಯೋಜನೆಗೊಂಡಿರುವ ‘ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯ  ಭಾನುವಾರ ನಡೆದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಮಾತನಾಡಿದರು.

ಹಿಂದೆ ಕೃಷಿ ಮಾಡುತ್ತಿದ್ದವರು ಬಹುತೇಕ ಅವಿದ್ಯಾವಂತರು. ಆದರೆ ಇವತ್ತಿನ ಯಾವ ಕೃಷಿ ವಿಜ್ಞಾನಿಗಳಿಗೂ ಗೊತ್ತಿಲ್ಲದ ಕೃಷಿಜ್ಞಾನ ಅವರಲ್ಲಿತ್ತು. ಹೆಚ್ಚು ಹೆಚ್ಚು ಓದಿ, ವಿಭಿನ್ನ ಪದವಿ ಪಡೆದವರೆಲ್ಲ ಕೃಷಿಗೆ ಕೈಕೊಟ್ಟು ಬೇರೆ ಬೇರೆ ಉದ್ಯೊಗ ಅರಸಿಕೊಂಡು ನಗರಗಳತ್ತ ಮುಖ ಮಾಡಿದರು, ಈಗಲೂ ಮಾಡುತ್ತಿದ್ದಾರೆ. ಹಲವರು ಊರಲ್ಲಿದ್ದ ಭೂಮಿ, ಮನೆಯನ್ನು ಸಹ ಮಾರಿ ಪಟ್ಟಣವಾಸಿಗಳಾಗಿದ್ದಾರೆ. ಈಗಲೂ ವಲಸೆ ಹೋಗುವುದು ನಿಂತಿಲ್ಲ. ಇದೇನು ಪ್ರಗತಿಯ ಸಂಕೇತವೋ? ಅವನತಿಯ ದ್ಯೋತಕವೋ? ಕಾಲವೇ ಉತ್ತರಿಸಬೇಕಾಗಿದೆ ಎಂದು ಹೇಳಿದರು.

12ನೆಯ ಶತಮಾನದ ಶರಣರಿಗೆ ಕೃಷಿಯ ವ್ಯಾಪಕ ಅರಿವಿದ್ದುದು ಅನೇಕ ವಚನಗಳಿಂದ ತಿಳಿದುಬರುತ್ತದೆ. ಕಾರಣ ಅವರೆಲ್ಲರೂ ಮೂಲತಃ ಕಾಯಕ ಜೀವಿಗಳು. ಅತ್ಯಂತ ತಳವರ್ಗದಿಂದ ಬಂದವರು. ಓದು, ಬರಹಗಳಿಂದ ವಂಚಿತರಾದವರು. ಅನುಭವಮಂಟಪ ಅವರಿಗೆ ಒಂದು ವ್ಯಕ್ತಿತ್ವ ತಂದುಕೊಟ್ಟಿತು. ನೀವು ಯಾರಿಗೇನು ಕಡಿಮೆ ಇಲ್ಲ. ನಿಮ್ಮದೇ ನಿಜವಾದ ಕಾಯಕ ಎಂದು ಅವರವರ ಕಾಯಕದ ಬಗ್ಗೆ ಮತ್ತಷ್ಟು ಗೌರವ ಮೂಡುವ ಹಾಗೆ ಮಾಡಿತು. ಇದರ ಫಲವಾಗಿ ಅವರು ಬಾಹ್ಯ ಕೃಷಿಯ ಜೊತೆಗೆ ಆಧ್ಯಾತ್ಮಿಕ ಮತ್ತು ಸಾಹಿತ್ಯ ಕೃಷಿಯನ್ನೂ ಮಾಡಲಾರಂಭಿಸಿದರು. ಈ ಮೂರೂ ಕೃಷಿಗಳು ಸೇರಿದಾಗಲೇ ಮನುಷ್ಯನಿಗೆ ನೆಲೆ, ಬೆಲೆ ಎಂದು ತೋರಿಸಿಕೊಟ್ಟರು ಎಂದರು.

ಶರಣರ ದೃಷ್ಟಿಯಲ್ಲಿ ಕೃಷಿ ಕುರಿತಂತೆ ಚಿಂತಕ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ,  ಇಂದಿನ ತಳಮಳದ ಸ್ಥಿತಿಗೆ ‘ಮತ್ತೆ ಕಲ್ಯಾಣ’ ಧ್ಯಾನಶೀಲ, ಚಲನಶೀಲ ಕಾರ್ಯಕ್ರಮವಾಗಿ ಜನತೆಗೆ ನೆಮ್ಮದಿ ನೀಡುತ್ತಿದೆ ಎಂದು ಹೇಳಿದರು.

ಕಲ್ಯಾಣದ ಕಲ್ಪನೆ ಅನನ್ಯವಾದುದು. ವಿಶ್ವಕ್ಕೇ ಮಾದರಿಯಾದುದು. ಶರಣರು ಸಾಹಿತ್ಯಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಕ್ರಾಂತಿಕಾರಕ ಬದಲಾವಣೆ ಮಾಡಿದರು. ವಿದ್ವಾಂಸರಿಗೆ ಸೀಮಿತವಾಗಿದ್ದ ಹಳಗನ್ನಡ, ಸಂಸ್ಕೃತದಂಥ ಅರಮನೆಯ ಭಾಷೆಗಳನ್ನು ಬಿಟ್ಟು ಕನ್ನಡದಲ್ಲಿ, ಸಾಮಾನ್ಯರ ಭಾಷೆಯಲ್ಲಿ ಸೃಜನಶೀಲ ವಚನ ಸಾಹಿತ್ಯ ಬರೆದಿದ್ದಾಗಿ ಹೇಳಿದರು.

 ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಕೆ ಜ್ಯೋತಿ, ಕೆ ದಾಕ್ಷಾಯಣಿ ಮತ್ತು ಹೆಚ್ ಎಸ್ ನಾಗರಾಜ್ ತಬಲ ಸಾಥಿ ಶರಣ್ ಕುಮಾರ್ ವಚನಗೀತೆಗಳನ್ನು ಹಾಡಿದರು. ಕಲ್ಯಾಣಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ದಾವಣಗೆರೆಯ ಕಕ್ಕರಗೊಳ್ಳದ ಕೆ.ಬಿ. ಪರಮೇಶ್ವರಪ್ಪ ಸ್ವಾಗತಿಸಿದರು. ದಾವಣಗೆರೆಯ ಶ್ರೀಮತಿ ಲತಾ ಮತ್ತು ಲೋಕಿಕೆರೆ ನಾಗರಾಜ್ ದಂಪತಿ ಗಳು ಇಂದಿನ ಕಾರ್ಯಕ್ರಮದ ದಾಸೋಹಿಗಳಾಗಿದ್ದರು. 

error: Content is protected !!