ದಾವಣಗೆರೆ, ಆ.12- ಮಹಾನಗರ ಪಾಲಿಕೆಯಿಂದ ಕುಡಿಯುವ ನೀರು ಸರಬರಾಜನ್ನು 8-10 ದಿನಕ್ಕೆ ಪೂರೈಸುತ್ತಿದ್ದು, ಮಳೆಗಾಲದಲ್ಲೂ ಸಹ ನೀರಿನ ಸಮಸ್ಯೆ ಸೃಷ್ಠಿಗೆ ಪಾಲಿಕೆ ಆಡಳಿತದ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಆರೋಪಿಸಿದ್ದಾರೆ.
ನೀರು ಸರಬರಾಜಿನಲ್ಲಿ ನೀರನ್ನು ಶುದ್ಧೀಕರಿಸದೇ ನೀಡಲಾಗುತ್ತಿದೆ.ಇದರಿಂದ ಸಾಕಷ್ಟು ರೋಗ-ರುಜಿನೆಗಳು ಉಲ್ಭಣವಾಗಲಿವೆ ಎಂದು ತಿಳಿಸಿರುವ ಅವರು, ಈ ಹಿಂದೆ ಪಾಲಿಕೆ ನೀರನ್ನು ಕುದಿಸಿ, ಆರಿಸಿ, ಉಪಯೋಗಿಸಿ ಎಂಬ ಹೇಳಿಕೆಯನ್ನು ನೀಡ ಲಾಗುತ್ತಿತ್ತು. ಆದರೆ, ಈಗಿನ ಪಾಲಿಕೆ ಆಡಳಿತ ಸೌಜನ್ಯಕ್ಕಾದರೂ ಜನತೆಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದ್ದಾರೆ. ಕೋವಿಡ್ ನೆಪದಲ್ಲಿ ಮಹಾನಗರ ಪಾಲಿಕೆ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿ ಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸೀಲ್ ಡೌನ್ ನೆಪದಲ್ಲಿ ಮನೆಯೊಂದಕ್ಕೆ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಸ್ವಚ್ಛತೆ ಇಲ್ಲದೇ ರೋಗ-ರುಜಿನಗಳು ಹೆಚ್ಚಾಗುತ್ತಿದ್ದು, ಕೊರೊನಾ ಸಾಂಕ್ರಾಮಿಕ ರೋಗದ ಜೊತೆಗೆ ಡೆಂಗ್ಯೂ ಮತ್ತು ಹೆಚ್1ಎನ್1 ರೋಗಗಳೂ ಸಹ ಉಲ್ಬಣಿಸುತ್ತಿವೆ. ಇದಕ್ಕೆ ಸ್ವಚ್ಛತೆ ಇಲ್ಲದೇ ಇರುವುದೇ ಕಾರಣ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಈ ಕೂಡಲೇ ಪಾಲಿಕೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಸಮರ್ಪಕವಾಗಿ ನೀರು ಸರಬ ರಾಜು ಮಾಡಲು ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.