2005ರ ಕಾಯ್ದೆ ಪೂರ್ವಾನ್ವಯಗೊಳಿಸಿ ಸುಪ್ರೀಂ ಕೋರ್ಟ್ ಆದೇಶ : ತಂದೆ ಮೃತ ಪಟ್ಟಿದ್ದರೂ ಮಗಳಿಗೆ ಆಸ್ತಿ ಹಕ್ಕು ಅಬಾಧಿತ
ನವದೆಹಲಿ, ಆ. 11 – ಜಂಟಿ ಅವಿಭಕ್ತ ಹಿಂದೂ ಕುಟುಂಬದ ಪೋಷಕರ ಆಸ್ತಿಯಲ್ಲಿ ಮಗಳಿಗೆ ಸಮ ಪಾಲಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, 2005ರಲ್ಲಿ ಹಿಂದೂ ಉತ್ತರಾಧಿತ್ವ ಕಾಯ್ದೆ ತಿದ್ದುಪಡಿಗೆ ಮುಂಚೆಯೇ ತಂದೆ ಮೃತಪಟ್ಟಿದ್ದರೂ ಸಹ ಮಹಿಳೆಗೆ ಆಸ್ತಿ ಹಕ್ಕಿರುತ್ತದೆ ಎಂದು ತಿಳಿಸಿದೆ.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಎಸ್. ನಜೀರ್ ಹಾಗೂ ಎಂ.ಆರ್. ಷಾ ಅವರ ಪೀಠ ಈ ತೀರ್ಪು ನೀಡಿದ್ದು, ಹಿಂದೂ ಉತ್ತರಾಧಿತ್ವ ಕಾಯ್ದೆಯ ಅನ್ವಯ ಆಸ್ತಿಯಲ್ಲಿ ಮಗಳಿಗೆ ಮಗನಷ್ಟೇ ಅಧಿಕಾರ ಹಾಗೂ ಹೊಣೆಗಾರಿಕೆ ಇದೆ ಎಂದು ನ್ಯಾಯಾಲಯ ತಿಳಿಸಿದೆ.
1956ರ ಉತ್ತರಾಧಿತ್ವ ಕಾಯ್ದೆಗೆ ತಂದಿರುವ ತಿದ್ದುಪಡಿ ಮೂಲಕ ಪೂರ್ವಿಕರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಅಧಿಕಾರ ನೀಡುವುದು ಪೂರ್ವಾ ನ್ವಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
2005ರ ತಿದ್ದುಪಡಿ ಕಾಯ್ದೆಯು ತಂದೆ ಹಾಗೂ ಮಗಳು ಬದುಕಿದ್ದರೆ ಮಾತ್ರ ಅನ್ವಯವಾಗುತ್ತದೆ ಎಂದು 2015ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಮಗಳು ಯಾವಾಗ ಬದುಕಿದ್ದರೂ ಹಕ್ಕು ಸಿಗುತ್ತದೆ. ಮಗಳು ಯಾವಾಗಲೂ ಪ್ರೀತಿಯ ಮಗಳೇ ಆಗಿರುತ್ತಾಳೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
§ಹೆಂಡತಿ ಬರುವವರೆಗೆ ಮಾತ್ರ ಮಗ ಮಗನಾಗಿರುತ್ತಾನೆ. ಮಗಳು ಜೀವನವಿಡೀ ಮಗಳಾಗಿರುತ್ತಾರೆ’ ಎಂದು ಈ ಹಿಂದಿನ ತೀರ್ಪಿನಲ್ಲಿ ಹೇಳಿದ್ದನ್ನು ಸುಪ್ರೀಂ ಕೋರ್ಟ್ ಪುನರುಚ್ಛರಿಸಿದೆ.
ಹೆಂಡತಿ ಬರುವವರೆಗೆ ಮಾತ್ರ ಮಗ ಮಗನಾಗಿರುತ್ತಾನೆ. ಮಗಳು ಜೀವನವಿಡೀ ಮಗಳಾಗಿರುತ್ತಾಳೆ : ಸುಪ್ರೀಂ
ಪೂರ್ವಾರ್ಜಿತ ಆಸ್ತಿಯ ಮೇಲಿನ ಹಕ್ಕು ಹುಟ್ಟಿನಿಂದ ಬರುತ್ತದೆ. ಹೀಗಾಗಿ ಸೆಪ್ಟೆಂಬರ್ 9, 2005ರ ತಿದ್ದುಪಡಿ ಜಾರಿಗೆ ಬರಲು ತಂದೆ ಹಾಗೂ ಮಗಳು ಇಬ್ಬರೂ ಜೀವಂತ ಇರಬೇಕು ಎಂಬುದು ಅನ್ವಯಿಸಲಾಗದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
121 ಪುಟಗಳ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಮೌಕಿಕವಾಗಿ ಆಸ್ತಿ ವಿಭಜನೆಗೆ ತಿಳಿಸಿದ್ದು ನೋಂದಣಿಯಾಗದೇ ಇದ್ದರೆ, ಈ ಬಗ್ಗೆ ಸಾರ್ವಜನಿಕ ದಾಖಲೆಗಳು ಇರದೇ ಹೋದರೆ ಅದನ್ನು ವಿಭಜನೆಗೆ ಆಧಾರ ಮಾಡುವಂತಿಲ್ಲ ಎಂದೂ ಸಹ ತಿಳಿಸಿದೆ.
ಮೌಖಿಕವಾಗಿ ಆಸ್ತಿ ವಿಭಜನೆಗೆ ಹೇಳಿರುವುದಕ್ಕೆ ಸಾರ್ವಜನಿಕ ದಾಖಲೆಗಳು ಇದ್ದರೆ ಹಾಗೂ ಇದಕ್ಕೆ ನ್ಯಾಯಾಲಯದ ಆದೇಶವಿದ್ದರೆ ಅದು ಸ್ವೀಕಾರಾರ್ಹ ವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಅಧೀನ ನ್ಯಾಯಾಲಯಗಳ ಹಲವು ಹಂತಗಳಲ್ಲಿ ಪ್ರಕರಣಗಳು ಬಾಕಿ ಇವೆ. ತದ್ವಿರುದ್ಧದ ನಿರ್ಧಾರಗಳಿಂದಾಗಿ ಪ್ರಕರಣಗಳು ಬಾಕಿ ಇವೆ ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಸುಪ್ರೀಂ ಕೋರ್ಟ್ ತೀರ್ಪಿನಂತೆ ಸಾಧ್ಯವಾದಲ್ಲಿ ಆರು ತಿಂಗಳ ಒಳಗೆ ಪ್ರಕರಣಗಳನ್ನು ಬಗೆಹರಿಸಬೇಕು ಎಂದು ತಿಳಿಸಲಾಗಿದೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತ, ಹೆಣ್ಣು ಮಕ್ಕಳನ್ನು ಆಸ್ತಿ ಪಾಲಿನಿಂದ ಹೊರಗಿಡುವುದು ಪಕ್ಷಪಾತಿಯಾಗುತ್ತದೆ. ಇದು ಮೂಲಭೂತ ಹಕ್ಕುಗಳ ನಿರಾಕರಣೆ ಹಾಗೂ ದಮನ ಎಂದು ಹೇಳಿದ್ದರು.