ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧ

ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧ - Janathavaniಜಿಲ್ಲಾಡಳಿತ ಆದೇಶ

ದಾವಣಗೆರೆ, ಏ. 11 – ಮುಂಬರುವ ಗಣೇಶ ಚತುರ್ಥಿ ವೇಳೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾನೆ ಹಾಗೂ ಮೊಹರಂ ಸಂದರ್ಭ ದಲ್ಲಿ ತಾಬೂತುಗಳ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗಳನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕೊರೊನಾ ವೈರಸ್ ತಡೆಯುವ ಸಲುವಾಗಿ ಧಾರ್ಮಿಕ ಕಾರ್ಯಗಳು ಹಾಗೂ ಬೃಹತ್ ಸಭೆಗಳ ಮೇಲೆ ನಿರ್ಬಂಧ ಹೇರಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 3,830 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, 50ಕ್ಕೂ ಹೆಚ್ಚು ಪೊಲೀಸರು ಹಾಗೂ ಸಿಬ್ಬಂದಿಗೆ ಸೋಂಕು ತಗುಲಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಸಾವಿರಾರು ಜನರು  ಸೇರುವ ಹಾಗೂ ಅಂತರ ಕಾಯ್ದುಕೊಳ್ಳದೇ ಕುಣಿಯುವ ಸಾಧ್ಯತೆ ಇರುತ್ತದೆ. ಇದರಿಂದ ವೈರಸ್ ಇನ್ನೂ ಹೆಚ್ಚಾಗಿ ಹರಡುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನೆ ಹಾಗೂ ಮೊಹರಂ ತಾಬೂತುಗಳ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳು ಗಣೇಶ ಮೂರ್ತಿ ಹಾಗೂ ತಾಬೂತುಗಳನ್ನು ಇಡುವುದಕ್ಕೆ ಅನುಮತಿ ನೀಡುವಂತಿಲ್ಲ.

ಈ ಸಂದರ್ಭದಲ್ಲಿ ಯಾವುದೇ ಮೆರವಣಿಗೆ ಹಾಗೂ ಡಿ.ಜೆ. ಸೌಂಡ್ ಸಿಸ್ಟಮ್ ಬಳಸಲೂ ಅನುಮತಿ ಇರುವುದಿಲ್ಲ. ಇದನ್ನು ಉಲ್ಲಂಘಿಸಿದವರ ವಿರುದ್ಧ ಐಪಿಸಿ ಸೆಕ್ಷನ್ 188 ಹಾಗೂ 270 ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!