ದಾವಣಗೆರೆ, ಡಿ.29- ಕನ್ನಡ ಸಾಹಿತ್ಯವನ್ನು ಅರಮನೆ, ಗುರುಮನೆಯಿದ ಜನರ ಮನೆಗೆ ಕೊಂಡೊಯ್ಯುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ನ ಜೊತೆಗೂಡಿ ನಾವೆಲ್ಲರೂ ಮಾಡಬೇಕಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವರದಿಗಾರರ ಕೂಟ ಹಾಗೂ ಡಾ.ಎಂ.ಜಿ. ಈಶ್ವರಪ್ಪ ಸ್ನೇಹ ಬಳಗದ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಸಂಜೆ ಹಮ್ಮಿಕೊಳ್ಳಲಾಗಿದ್ದ `ವಿಶ್ವ ಮಾನವ ದಿನಾಚರಣೆ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನಪದ ಕಲಾವಿದರು ದಡ್ಡರಲ್ಲ. ಕಥೆ, ಕಾವ್ಯ, ಒಗಟುಗಳ ಮೂಲಕ ಮಾತನಾಡುವ ಜಾಣ್ಮೆ ಇರುವಂತಹ ಕಲಾವಿದರನ್ನು ಉಳಿಸಿಕೊಳ್ಳಲು ವಿಭಿನ್ನ ರೀತಿಯ ಪ್ರಯತ್ನಗಳ ಅಗತ್ಯವಿದೆ. ಈ ಕೆಲಸವು ಅಕಾಡೆಮಿಗಳು, ಸಂಘ-ಸಂಸ್ಥೆಗಳಿಂದಾಗಬೇಕಿದೆ ಎಂದು ಹೇಳಿದರು.
ಜನಪದ ಹಾಗೂ ರಂಗಭೂಮಿ ನನ್ನ ಆಸಕ್ತಿಯ ಕ್ಷೇತ್ರಗಳಾಗಿದ್ದವು. ಇದರ ಹೊರತಾಗಿಯೂ ಓರ್ವ ಶಿಕ್ಷಕನಾಗಿ ತನ್ನ ಶಿಷ್ಯ ಬಳಗದ ಸಹಕಾರದಿಂದ ಇತರೆ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದು ಹೇಳಿದರು.
ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ಶಿಕ್ಷಕರದ್ದು. ಬೇರೆ ಕ್ಷೇತ್ರಗಳ ನೌಕರರಿಗೆ ಮಿತಿ ಇರುತ್ತದೆ. ಆದರೆ ಶಿಕ್ಷಕನಿಗೆ ಯಾವ ಮಿತಿಯೂ ಇರದು. ಆತ ಶಿಕ್ಷಕ ವೃತ್ತಿಯೊಂದಿಗೆ ಬೇರೆ ಯಾವ ಕಾರ್ಯವನ್ನಾದರೂ ಮಾಡಲು ಸಾಧ್ಯವಿದೆ. ಆ ಸಾಧ್ಯತೆಯನ್ನು ನಾನು ಬಳಸಿಕೊಂಡಿದ್ದೇನೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಜಾನಪದ ವಿದ್ವಾಂಸರೂ ಆದ ಡಾ.ಬಸವರಾಜ ನೆಲ್ಲಿಸರ ಮಾತನಾಡಿ, ಯೋಗ್ಯತೆ ಹುಟ್ಟಿನೊಂದಿಗೆ ಬರುವುದಿಲ್ಲ. ಬಾಳುವ ಕ್ರಮದಿಂದ ರೂಪುಗೊಳ್ಳು ವಂತದ್ದು. ತಮ್ಮ ವೃತ್ತಿಯನ್ನು ಸಮಾಜದ ಒಳಿತಿಗೆ ಹೇಗೆ ಬಳಸಿಕೊಳ್ಳಬೇಕೆಂಬುದಕ್ಕೆ ಈಶ್ವರಪ್ಪ ಉತ್ತಮ ಉದಾಹರಣೆ ಎಂದರು.
ಈಶ್ವರಪ್ಪನವರ ನಡೆ-ನುಡಿಯಲ್ಲಿ ಜನಪದ ಸಾಹಿತ್ಯದ ಮಹಾ ದಿಬ್ಬಣವೇ ನಡೆದಂತೆ. ಸಭ್ಯತೆ, ಸರಳತೆ ಮೈಗೂಡಿಸಿಕೊಂಡು, ಮುತ್ತಿನ ಹಾರದಂತಹ ನುಡಿಗಳನ್ನಾಡುವ ಈಶ್ವರಪ್ಪ ಅವರು ಚಿಂತನ ಶೀಲ, ಚಲನ ಶೀಲ ವ್ಯಕ್ತಿ ಎಂದು ಬಣ್ಣಿಸಿದರು.
ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರೂ, ಸಾಹಿತಿಯೂ ಆದ ಬಾ.ಮ. ಬಸವರಾಜಯ್ಯ ಅಭಿನಂದನಾ ನುಡಿಗಳನ್ನಾಡುತ್ತಾ, ಯಾವುದೇ ವಿಷಯವನ್ನು ವಿಷಯಾಂತರಗೊಳಿಸದೆ ಕೊಟ್ಟ ಸಮಯದಲ್ಲಿಯೇ ಮಾತನಾಡಿ ಮುಗಿಸುವ ಜ್ಞಾನ ಭಂಡಾರ ಈಶ್ವರಪ್ಪ ಅವರಲ್ಲಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆಯಾದರೂ, ಈಶ್ವರಪ್ಪ ಅವರು ಕೇವಲ ಶಿಕ್ಷಣ ಕ್ಷೇತ್ರಕ್ಕೇ ಸೀಮಿತವಲ್ಲ, ಅವರ ಲೋಕ ವಿಸ್ತಾರವಾದದ್ದು. ರಾಜ್ಯೋತ್ಸವ ಪ್ರಶಸ್ತಿಗೆ ಗೌರವ ತಂದುಕೊಟ್ಟವರು ಈಶ್ವರಪ್ಪ ಎಂದರು.
ಇದೇ ವೇಳೆ ಶಿವು ಆಲೂರು ವಿರಚಿತ `ಒಡಲ ಉಸಿರು’ ಚೊಚ್ಚಲ ಕೃತಿ ಬಿಡುಗಡೆ ಮಾಡಲಾಯಿತು. ಕೃತಿಯ ಬಗ್ಗೆ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ನಿಕಟ ಪೂರ್ವ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಕವಿ ಶಿವು ಆಲೂರು ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯೆಪ್ಪ ಸ್ವಾಗತಿಸಿದರು. ಎನ್.ಎಸ್. ರಾಜು ನಿರೂಪಿಸಿದರು. ಜಿ.ಆರ್. ಷಣ್ಮುಖಪ್ಪ ವಂದಿಸಿದರು. ಶ್ರೀಮತಿ ಸಂಗೀತ ರಾಘವೇಂದ್ರ ಕುವೆಂಪು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.