ದಾವಣಗೆರೆ, ಡಿ.29- ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳ ಮತ್ತು ವಸತಿ ಸಮುಚ್ಛಯಗಳಲ್ಲಿ ಈ ಬಾರಿಯ ಹೊಸ ವರ್ಷದ ಸಂಭ್ರಮಾಚರಣೆಯನ್ನು ನಿಷೇಧ ಮಾಡಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಕೋವಿಡ್ ನಿಗಾವಣೆ ನಿಯಂತ್ರಣ ಮತ್ತು ಜಾಗ್ರತೆಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ನಾಳೆ ದಿನಾಂಕ 30ರ ಬುಧವಾರದಿಂದ ಜನವರಿ 2ರವರೆಗೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರವಿಲ್ಲದೆ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ಡಿಜೆ, ಡ್ಯಾನ್ಸ್ ಕಾರ್ಯಕ್ರಮಗಳು, ವಿಶೇಷ ಪಾರ್ಟಿಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪತ್ರಕರ್ತರಿಗೆ ತಿಳಿಸಿದರು.
ಹೊಸ ವರ್ಷಾಚರಣೆ ಸಂಬಂಧ ಸರ್ಕಾರ ಕಳೆದ ಡಿ. 17 ರಂದು ಮಾರ್ಗಸೂಚಿ ಹೊರಡಿಸಿದ್ದು, ಅದರನ್ವಯ ಕೋವಿಡ್-19 ಸೋಂಕು ತಡೆಗಟ್ಟಲು ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನ ನಿಷೇಧಿಸಿದೆ.
ಕ್ಲಬ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಪ್ರತಿನಿತ್ಯದ ಚಟುವಟಿಕೆಗಳಂತೆ ತೆರೆದು, ನಡೆಸಲು ನಿರ್ಬಂಧ ವಿಧಿಸಿಲ್ಲ. ಹೊಸ ವರ್ಷಾಚರಣೆ ಸಂಬಂಧ ಸಾರ್ವಜನಿಕ ರಸ್ತೆ, ಮುಖ್ಯ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವಿಕೆ ಹಾಗೂ ಸಂಭ್ರಮಾ ಚರಣೆ ನಿಷೇಧಿಸಿದೆ. ಆದರೆ ಈ ಸ್ಥಳಗಳಲ್ಲಿ ಪ್ರತಿ ನಿತ್ಯದ ಸಾಮಾನ್ಯ ಕಾರ್ಯಚಟುವಟಿಕೆ ಕೈಗೊಳ್ಳಲು ನಿರ್ಬಂಧವಿಲ್ಲ. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯರು ಮನೆಯಲ್ಲಿಯೇ ಇರಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಜಿಲ್ಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರುವ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಸಾಮಾಜಿಕ ಅಂತರ ಇಲ್ಲದೇ ಹೆಚ್ಚಿನ ಜನರು ಸಾಮೂಹಿಕ ಕೂಟಗಳನ್ನು ಆಯೋಜನೆ ಮಾಡುವುದನ್ನು ನಿಷೇಧಿಸಿದೆ. ಸಾರ್ವಜನಿಕರು ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್ ಇವುಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಜರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡತಕ್ಕದ್ದು. ಆದರೆ, ಹೆಚ್ಚುವರಿ ಸಮಯದ ಅವಕಾಶ ಇರುವುದಿಲ್ಲ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಹಸಿರು ಪಟಾಕಿ ಮಾತ್ರ ಬಳಸಬೇಕು. ರಾತ್ರಿ 12.45ರ ಬಳಿಕ ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ ಎಂದರು.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ತೀವ್ರ ತಪಾಸಣೆ ನಡೆಸಲು ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುನ್ನೆಚ್ಚರಿಸಿದರು.