ಹೊಯ್ಸಳ ಸಾಮ್ರಾಜ್ಯ ಮತ್ತೆ ಉದಯಿಸಿದಂತಾಗಿದೆ. ನಮ್ಮ ಸಂಕಲ್ಪ ಈಡೇರಿದೆ: ತರಳಬಾಳು ಶ್ರೀಗಳ ಹರ್ಷ
ದಾವಣಗೆರೆ, ಡಿ.28- ಹಾಸನ ಜಿಲ್ಲೆಯ ಹಳೇಬೀಡು ಮತ್ತು ಆ ಭಾಗದ ಅನೇಕ ಕೆರೆಗಳಿಗೆ ಗುರುತ್ವ ಬಲದಿಂದ ಸುರಂಗ ಮಾರ್ಗದ ಮೂಲಕ ಹಳೆಬೀಡು ಮತ್ತಿತರೆ ಕೆರೆಗಳಿಗೆ ನೀರು ಹರಿಸುವ ಅಪರೂಪದ 124 ಕೋಟಿ ರೂ.ಗಳ ನೀರಾವರಿ ಯೋಜನೆಗೆ ಸಚಿವ ಸಂಪುಟದಲ್ಲಿ ಮಂಜೂರಾತಿ ದೊರೆತಿರುವುದಕ್ಕೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.
ಹೊಯ್ಸಳರ ಕಾಲದಲ್ಲಿ ಯಗಚಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸಲು ಕೆಲವು ಕಿಲೋಮೀಟರ್ ದೂರ ಒಂದು ಆಳವಾದ ಕಾಲುವೆ ತೆಗೆಯಲಾಗಿತ್ತು. ಆದರೆ ಅದು ಪೂರ್ಣಗೊಂಡಿರಲಿಲ್ಲ. ಅದರ ಅವಶೇಷಗಳು ಈಗಲೂ ಕಾಣಸಿಗುತ್ತವೆ. ಜೆಸಿಬಿ ಹಿಟಾಚಿ ಇಲ್ಲದ ಕಾಲದಲ್ಲಿ ಆಗಿನ ರಾಜರು ತೆಗೆಸಿದ ಈ ಕಾಲುವೆ ಮೈನವಿರೇಳಿಸುವಂತಹುದು ಎಂದು ಶ್ರೀಗಳು ಹೇಳಿದರು.
ಇದೀಗ ಮತ್ತೆ ಅಲ್ಲಿನ ಕೆರೆಗಳಿಗೆ ನೀರು ಹರಿಯಲಿದೆ. ಕಳೆದ ವರ್ಷ ಫೆಬ್ರವರಿ 9 ರಂದು ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಆಶ್ವಾಸನೆ ನೀಡಿದ್ದರು. ಆ ಪ್ರಕಾರ ಆ ಭಾಗದ ಜನತೆಯ ಅನೇಕ ದಶಕಗಳ ದಾಹವನ್ನು ತಣಿಸಿದ್ದಾರೆ. ಇದರಿಂದ ಹೊಯ್ಸಳ ಸಾಮ್ರಾಜ್ಯ ಮತ್ತೆ ಉದಯಿಸಿದಂತಾಗಿದೆ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದರು.
ಬರಗಾಲದ ಪ್ರಯುಕ್ತ ಒಂದು ವರ್ಷ ಕಾಲ ಮುಂದೂಡಲಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಹಳೇಬೀಡು ಕೆರೆ ತುಂಬಿಸಿದ ಮೇಲೆಯೇ ಆಚರಿಸಬೇಕೆಂಬ ನಮ್ಮ ಸತ್ಯ ಸಂಕಲ್ಪ ಈಡೇರಿದಂತಾಗಿದೆ.
ಹುಣ್ಣಿಮೆಯ ಮೊದಲೂ ಹಳೇಬೀಡು ಕೆರೆ ತುಂಬಿತು. ಹುಣ್ಣಿಮೆಯ ನಂತರವೂ ತುಂಬಿ ತುಳುಕಿದೆ. ಮುಂದೆ ಶಾಶ್ವತವಾಗಿ ತುಂಬಿ ರೈತರ ಮತ್ತು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ ಎಂದು ಆಶಯ ವ್ಯಕ್ತಪಡಿಸಿದ ಶ್ರೀಗಳು, ಹಳೆಬೀಡು ಭಾಗದ ಜನತೆಯ ಪರವಾಗಿ ಶ್ರೀಗಳು ಮುಖ್ಯಮಂತ್ರಿಗಳಿಗೆ ಅಭಿನಂದಿಸುವುದಾಗಿ ಹೇಳಿದರು.