ದಾವಣಗೆರೆ, ಡಿ.28- `ಎನಗಿಂತ ಕಿರಿಯರಿಲ್ಲ’ ಎಂಬ ಭಾವನೆಯನ್ನು ಹೊಂದಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಪಾದಿಸಿದರು.
ಇಲ್ಲಿನ ಗಾಂಧಿ ನಗರದಲ್ಲಿ ಶ್ರೀ ಗುರು ರಾಮದಾಸ ಸ್ವಾಮಿ ಅಧ್ಯಾತ್ಮ ಮಂದಿರದ ವತಿಯಿಂದ ಇಂದು ಏರ್ಪಡಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಾನು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಸಮಾಜಮುಖಿಯಾಗಿ, ಜನಪರವಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು. ಕಛೇರಿಯಲ್ಲಿ ಕೇವಲ ಫೈಲ್‌ಗಳನ್ನು ನೋಡುತ್ತಾ ಕುಳಿತುಕೊಳ್ಳುವ ಜಿಲ್ಲಾಧಿಕಾರಿ ನಾನಲ್ಲ, ಜಿಲ್ಲೆಯಾದ್ಯಂತ ಸಂಚರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜಿಲ್ಲಾಧಿಕಾರಿ ನಾನು ಎಂದು ಸ್ಪಷ್ಟಪಡಿಸಿದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ದಂಪ ತಿಗಳು ತಮ್ಮ ಜೀವನದಲ್ಲಿ ಕಷ್ಟ-ಸುಖವನ್ನು ಸಮಾನವಾಗಿ ಹಂಚಿಕೊಳ್ಳಬೇಕೆಂದು ಆಶಿಸಿದರು.
ಕಮ್ಯೂನಿಸ್ಟ್ ಪಕ್ಷದ ಹಿರಿಯ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಒಳ್ಳೆಯ ಕೆಲಸವನ್ನು ಮಾಡಲು ಹೊರಟವರಿಗೆ ವಿಘ್ನಗಳು ಎದುರಾಗುತ್ತವೆ. ಡಾ ಅಂಬೇಡ್ಕರ್ ತಮಗೆ ಎದುರಾದ ಅನೇಕ ಅಡ್ಡಿ-ಆತಂಕಗಳನ್ನು ಮೆಟ್ಟಿ ನಿಂತು ದೇಶಕ್ಕೆ ಪವಿತ್ರವಾದ ಸಂವಿಧಾನವನ್ನು ನೀಡಿದರು ಎಂದು ವಿಶ್ಲೇಷಿಸಿದರು .
ನಗರದ ಹಳೆಯ ಭಾಗದಲ್ಲಿರುವ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರವನ್ನು ನಗರಪಾಲಿಕೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಶ್ರೀಮಂತರೂ ಸಾಮೂಹಿಕ ವಿವಾಹದಲ್ಲಿ…
ಹಿಂದೆ ಬಡವರು ಮಾತ್ರ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುತ್ತಿದ್ದರು. ಆದರೆ, ಇಂದು ಶ್ರೀಮಂತರೂ ಸಹಾ ತಮ್ಮ ಮಕ್ಕಳಿಗೆ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆ ಮಾಡಿಸುತ್ತಿದ್ದಾರೆ. ನನ್ನ ಹೆಣ್ಣು ಮಕ್ಕಳನ್ನು ಸಾಮೂಹಿಕ ವಿವಾಹ ದಲ್ಲಿಯೇ ಮದುವೆ ಮಾಡಿಸಿದ್ದೇನೆ. ದುಂದು ವೆಚ್ಚವಿ ಲ್ಲದ ಸರಳ ರೀತಿಯ ಸಾಮೂಹಿಕ ವಿವಾಹ ಮಹೋತ್ಸವಗಳಿಗೆ ಹೆಚ್ಚು ಒತ್ತು ನೀಡಬೇಕು.
-ಹೆಚ್.ಆಂಜನೇಯ, ಮಾಜಿ ಸಚಿವರು
ಇಂದು ವೈದಿಕತೆಗಿಂತ ವೈಚಾರಿಕತೆ ಶ್ರೇಷ್ಠವಾಗಿದೆ, ಬುದ್ದ, ಬಸವಣ್ಣ, ಅಂಬೇಡ್ಕರ್ ಮುಂತಾದ ದಾರ್ಶನಿಕರು ವೈಚಾರಿಕತೆಯನ್ನೇ ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.
ವೈಚಾರಿಕತೆಗಿಂತ ವಿದಾಯಕತೆಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಸಮಾಜಮುಖಿಯಾಗಿ ರಚ ನಾತ್ಮಕ ಕಾರ್ಯವನ್ನು ಮಾಡಬೇಕು ಎಂದರು.
ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಹಾವೇರಿಯ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹೆಚ್. ಆಂಜನೇಯ, ಶಾಸಕ ಲಿಂಗಣ್ಣ, ಮಹಾನಗರಪಾಲಿಕೆ ಮಹಾಪೌರ ಬಿ.ಜಿ. ಅಜಯಕುಮಾರ್, ನಗರಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಎಸ್.ಟಿ. ವೀರೇಶ್, ಮಾಜಿ ಸದಸ್ಯ ಎಂ. ಹಾಲೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಅಧ್ಯಾತ್ಮಿಕ ಮಂದಿರದ ಬಿ.ಎಂ. ರಾಮಸ್ವಾಮಿ, ಬಿ.ಎಂ. ಈಶ್ವರ್ ಮತ್ತಿತರರು ಆಗಮಿಸಿದ್ದರು.
ಅಧ್ಯಾತ್ಮ ಮಂದಿರದ ಅಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ ಸ್ವಾಗತಿಸಿದರು. ಕಾರ್ಯಕ್ರಮವನ್ನು ಅಗಡಿ ಅವರು ನಿರೂಪಿಸಿದರು. ಬಿ. ಎಂ. ಈಶ್ವರ್ ವಂದಿಸಿದರು.