ಹರಿಹರ, ನ್ಯಾಮತಿ, ಚನ್ನಗಿರಿ ತಾಲ್ಲೂಕಿನಲ್ಲಿ ನಡೆದ ಗ್ರಾ.ಪಂ.ಚುನಾವಣೆ
ದಾವಣಗೆರೆ, ಡಿ. 27 – ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ಎರಡನೇ ಹಂತದಲ್ಲಿ ನಡೆದ ಗ್ರಾಮ ಪಂಚಾಯ್ತಿ ಮತದಾನ ಸಣ್ಣ ಪುಟ್ಟ ಘಟನೆಗಳ ನಡುವೆ ಶಾಂತಿಯುತವಾಗಿ ಪೂರ್ಣಗೊಂಡಿದೆ. ಇದರೊಂದಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಲ್ಲರ ಗಮನ ಡಿ.30ರ ಫಲಿತಾಂಶದತ್ತ ನೆಟ್ಟಿದೆ.
ಎರಡನೇ ಹಂತದಲ್ಲಿ ಹರಿಹರ, ನ್ಯಾಮತಿ ಹಾಗೂ ಚನ್ನಗಿರಿ ತಾಲ್ಲೂಕುಗಳಲ್ಲಿ ಚುನಾವಣೆ ನಡೆದಿತ್ತು. ಈ ಮೂರೂ ತಾಲ್ಲೂಕುಗಳಲ್ಲಿ ಒಟ್ಟಾರೆ ಶೇ.85.36ರಷ್ಟು ಮತದಾನವಾಗಿದೆ.
ಮತದಾನ ಬೆಳಿಗ್ಗೆ ಮಂದಗತಿಯ ಆರಂಭ ಕಂಡಿತ್ತು. ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ.5.41ರಷ್ಟು ಮತದಾನವಾಗಿತ್ತು. ನಂತರ ಮಧ್ಯಾಹ್ನ 1 ಗಂಟೆಗೆ ಶೇ.42.62ರಷ್ಟು, ಸಂಜೆ 5 ಗಂಟೆಗೆ 85.36ರಷ್ಟು ಮತದಾನವಾಗಿತ್ತು. ಚನ್ನಗಿರಿಯಲ್ಲಿ ಶೇ.83, ಹರಿಹರದಲ್ಲಿ ಶೇ.87.08 ಹಾಗೂ ನ್ಯಾಮತಿಯಲ್ಲಿ ಶೇ.86.01ರಷ್ಟು ಮತದಾನವಾಗಿದೆ.
ಸ್ಥಳೀಯ ವಿಷಯಗಳ ಆಧಾರದ ಮೇಲೆ ನಡೆಯುವ ಗ್ರಾಮ ಪಂಚಾಯ್ತಿ ಚುನಾವಣೆ ಬಗ್ಗೆ ಗ್ರಾಮೀಣ ಮತದಾರರಲ್ಲಿ ಆಸಕ್ತಿ ಹೆಚ್ಚಾಗಿದ್ದು ಕಂಡು ಬಂದಿತ್ತು. ನವ ಮತದಾರರಿಂದ ಹಿಡಿದು ವೃದ್ದರವರೆಗೆ ಜನರು ಸಾಲುಗಟ್ಟಿ ಮತದಾನ ಮಾಡಿ ತಮ್ಮ ಜನಾದೇಶದ ಹಕ್ಕನ್ನು ಬಳಸಿಕೊಂಡರು.
ಕೊರೊನಾ ನಡುವೆ ಸ್ಯಾನಿಟೈಜರ್, ತಾಪಮಾನ ಪರೀಕ್ಷೆಯಂತಹ ಕ್ರಮಗಳನ್ನು ತೆಗೆದುಕೊಳ್ಳಲು ಚುನಾವಣಾ ಆಯೋಗ ಸೂಚಿಸಿತ್ತು. ಆದರೆ, ಸಾಮಾಜಿಕ ಅಂತರ ಬಹುತೇಕ ಮತಗಟ್ಟೆಗಳಲ್ಲಿ ಮರೆಯಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ಜನರು ಮಾಸ್ಕ್ ಸಹ ಮರೆತು ಮತದಾನಕ್ಕೆ ಬಂದಿದ್ದರು. ಹಲವಾರು ಮತಗಟ್ಟೆಗಳಲ್ಲಿ ಜನರ ಮಾಸ್ಕ್‌ಗೆ ಅಭ್ಯರ್ಥಿಗಳೇ §ಪ್ರಾಯೋಜಕ¬ರಾಗಿದ್ದೂ ಕಂಡು ಬಂತು.
ಮತಪಟ್ಟಿಯ ಗೊಂದಲ : ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಯಲ್ಲಿ ಗ್ರಾಮಸ್ಥರಲ್ಲಿ ಮತಪಟ್ಟಿಯ ಗೊಂದಲ ಉಂಟಾಗಿತ್ತು. ಗ್ರಾಮಸ್ಥರು ಕಳೆದ ವಿಧಾನಸಭಾ ಚುನಾವಣೆಯ ಮತಪಟ್ಟಿ ಹಿಡಿದುಕೊಂಡಿದ್ದರು. ಆದರೆ, ಗ್ರಾಮ ಪಂಚಾಯ್ತಿ ಚುನಾವಣೆಗೆ ಪ್ರತ್ಯೇಕ ಮತಪಟ್ಟಿ ರೂಪಿಸಲಾಗಿತ್ತು. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಕತ್ತಲ ರಾತ್ರಿ ಗುಂಗು : ಹರಿಹರ ತಾಲ್ಲೂಕಿನ ಬೂದಿಹಾಳ್‌ನಲ್ಲಿ ವ್ಯಕ್ತಿಯೊಬ್ಬರು ಕತ್ತಲರಾತ್ರಿಯ ಮದ್ಯದ ಗುಂಗಿನಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ಅದೇ ಗುಂಗಿನಲ್ಲೇ ಅವರು ಮತಗಟ್ಟೆಗೂ ಬಂದಿದ್ದರು. ಮತದಾನಕ್ಕೆ ಬಂದಿದ್ದ ಕೆಲವರು ಈ ಗುಂಗಿನ ಆಸಾಮಿಯನ್ನು ಹರ ಸಾಹಸದೊಂದಿಗೆ ಆಟೋದೊಳಗೆ ಕೂರಿಸಿ ಮನೆಗೆ ಕಳಿಸುವ ಪ್ರಯತ್ನ ನಡೆಸಿದ್ದರು. ಇನ್ನೊಂದೆಡೆ ಆಗ ತಾನೆ ಮತದಾನ ಮಾಡಿ ಬಂದ ಮಹಿಳೆಯೊಬ್ಬರು, ನಾನು ಮತ ಚೀಟಿಗೆ ಸೀಲ್ ಒತ್ತುವ ಬದಲು ಹೆಬ್ಬೆಟ್ಟು ಒತ್ತಿದೆ, ನಂತರ ಅದು ತಪ್ಪಾಯಿತು ಎಂದು ಎಂದು ಹೇಳಿ ಮತ ವ್ಯರ್ಥವಾದ ಬಗ್ಗೆ ಹೇಳಿಕೊಂಡಿದ್ದೂ ಕಂಡು ಬಂತು.
ನಮ್ಮಲ್ಲೇ ಕಡಿಮೆ ಎಂಬ ರಾಗ : ಮತಗಟ್ಟೆಗಳ ಬಳಿ ಜನರಿಗೆ ಮತದಾನದ ಆಮಿಷದ ಬಗ್ಗೆ ಕೇಳಿದಾಗ, ನಮ್ಮಲ್ಲೆಲ್ಲಾ ಅಂತಹ ಪ್ರಕರಣಗಳು ಕಡಿಮೆಯೇ. ಆದರೆ, ಅಕ್ಕ ಪಕ್ಕದ ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚಿನ ಆಮಿಷಗಳನ್ನು ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಪ್ರತಿ ಪಂಚಾಯ್ತಿ ಮತಗಟ್ಟೆಗಳಲ್ಲೂ ಇಂಥದೇ ಮಾತುಗಳು ಕೇಳಿ ಬಂದವು. ಒಟ್ಟಾರೆ ನಮಗೆ ಪಕ್ಕದ ಕ್ಷೇತ್ರದವರಿಗಿಂತ ಕಡಿಮೆ §ಪಾಲು¬ ಸಿಗುತ್ತಿದೆ ಎಂಬ ಭಾವನೆ ಸರ್ವೇ ಸಾಮಾನ್ಯವಾಗಿತ್ತು.
ಬಳಕೆಯಾಗದ ಗಾಲಿ ಕುರ್ಚಿ : ವಿಕಲಚೇತನರಿಗೆ ನೆರವಾಗಲಿ ಎಂದು ಚುನಾವಣಾ ಆಯೋಗದ ಸೂಚನೆಯಂತೆ ಗಾಲಿ ಕುರ್ಚಿಗಳನ್ನು ಪ್ರತಿ ಮತಗಟ್ಟೆಗೆ ನೀಡಲಾಗಿತ್ತು. ಆದರೆ, ಸಾಕಷ್ಟು ಮತಗಟ್ಟೆಗಳಲ್ಲಿ ಗಾಲಿ ಕುರ್ಚಿಗಳನ್ನು ಹೊರಗಡೆ ಇರಿಸಿರಲಿಲ್ಲ.
ವಿಕಲಚೇತನರು ಬಂದಾಗ ಗೇಟ್ ಬಳಿಯಿಂದ ಅವರನ್ನು ಕರೆದುಕೊಂಡು ಬರಬೇಕಿತ್ತು. ಭಾನುವಳ್ಳಿಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ ಭೇಟಿ ನೀಡಿದಾಗ ಗಾಲಿ ಕುರ್ಚಿ ಬಗ್ಗೆ ಕೇಳಿದಾಗ, ಅಧಿಕಾರಿಗಳು ಅದು ಕೋಣೆಯಲ್ಲಿದೆ ಎಂದು ಉತ್ತರಿಸಿದರು.
ಗಾಲಿ ಕುರ್ಚಿಗಳಿರುವುದು ಕೋಣೆಗೆ ಅಲ್ಲ. ತಕ್ಷಣ ಹೊರ ತೆಗೆದು ವೃದ್ಧರಿಗೆ ಹಾಗೂ ವಿಕಲಚೇತನರಿಗೆ ನೆರವಾಗಿ ಎಂದು ಸೂಚಿಸಿದ ಮೇಲೆಯೇ ಗಾಲಿ ಕುರ್ಚಿಯನ್ನು ಹೊರಗೆ ತರಲಾಯಿತು.
ಕಿಟ್‌ನಲ್ಲಿ ಮತದಾನ : ನಾಲ್ವರು ಕೊರೊನಾ ಸೋಂಕಿತರು ಪಿಪಿಇ ಕಿಟ್ ಹಾಕಿಕೊಂಡು ಆಂಬುಲೆನ್ಸ್‌ನಲ್ಲಿ ಬಂದು ಮತ ಚಲಾಯಿಸಿದ್ದಾರೆ.
ಹರಿಹರ ತಾಲ್ಲೂಕಿನ ಶಂಷೀಪುರ ಹಾಗೂ ಬನ್ನಿಕೋಡು, ನ್ಯಾಮತಿಯ ಕುಂಕುವ ಹಾಗೂ ಚನ್ನಗಿರಿಯ ಕೊರಟಿಕೆರೆಯಲ್ಲಿ ಸೋಂಕಿತರು ಮತದಾನ ಮಾಡಿದ್ದಾರೆ.