ಎಸ್ಟಿ ಮೀಸಲಾತಿಯನ್ನು ಹೆಚ್ಚಿಸುವಂತೆ ಸಿಂಹ ಘರ್ಜನೆ

ದಾವಣಗೆರೆ, ಡಿ. 25 – ಎಸ್‌ಟಿ ಮೀಸಲಾತಿ ಯನ್ನು ಶೇ.7.5ಕ್ಕೆ ಹೆಚ್ಚಿಸುವ ಸಲುವಾಗಿ ಆನೆಯಂ ತಿರುವ ಸರ್ಕಾರವನ್ನು ಮಣಿಸಲು ನಾಯಕ ಸಮುದಾಯ ಮುಂಬರುವ ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಸಿಂಹದಂತೆ ಘರ್ಜಿಸಬೇಕಿದೆ ಎಂದು ವಾಲ್ಮೀಕಿ ಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದ್ದಾರೆ.

ನಗರದ ನಾಯಕ ಸಮಾಜದ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ವಾಲ್ಮೀಕಿ ಸಮಾಜದ ವತಿಯಿಂದ ಇಂದು ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಪೂರ್ವ ಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ನಾಯಕ ಸಮುದಾಯದ ಸಿಂಹ ಗರ್ಜನೆ ಕಾರಣದಿಂದಾಗಿಯೇ ರಾಜ್ಯ ಸರ್ಕಾರ ನಾಗಮೋಹನ ದಾಸ್ ಆಯೋಗ ರಚಿಸಿತ್ತು. ಆಯೋಗದ ವರದಿ ಬಂದ ತಕ್ಷಣವೇ ಕ್ರಮ ತೆಗೆದುಕೊಳ್ಳುವುದಾಗಿ ಕಳೆದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಆಯೋಗ ವರದಿ ಸಲ್ಲಿಸಿ ಆರು ತಿಂಗಳಾದರೂ ಮೀಸಲಾತಿ ಹೆಚ್ಚಿಸಿಲ್ಲ ಎಂದು ಸ್ವಾಮೀಜಿ ಆಕ್ಷೇಪಿಸಿದರು.

ಕುಸ್ತಿ ಪಟುಗಳ ರೀತಿಯಲ್ಲೇ ಸರ್ಕಾರವೂ ಮೈಗೆ ಎಣ್ಣೆ ಹಚ್ಚಿಕೊಂಡು ನುಣುಚಿಕೊಳ್ಳುವ ಪ್ರಯತ್ನ ನಡೆಸಿದೆ. ಸರ್ಕಾರದ ವಿರುದ್ಧ ಕುಸ್ತಿ ಆಡಲು ನಾಯಕ ಸಮಾಜದವರು ಹೋರಾಟದ ಸಾಮು ತೆಗೆಯಬೇಕಿದೆ. ಇದಕ್ಕಾಗಿ 175 ತಾಲ್ಲೂಕಿನ ಪೈಕಿ 105 ತಾಲ್ಲೂಕುಗಳಲ್ಲಿ ಈಗಾಗಲೇ ಸಂಚರಿಸಿ ತಾವು ಜಾಗೃತಿ ಮೂಡಿಸಿದ್ದೇವೆ. ಉಳಿದ ತಾಲ್ಲೂಕುಗಳಲ್ಲೂ ಮುಂದಿನ ಹಂತದಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಶ್ರೀಗಳು ಹೇಳಿದರು.

ಕುಡಿಯಲು ಹೆಂಡ, ತಿನ್ನಲು ಖಂಡ ಹಾಗೂ ದುಡ್ಡು ಕೊಟ್ಟರೆ ಚುನಾವಣೆಯಲ್ಲಿ ಎಸ್‌ಟಿ ಸಮುದಾಯದ ಮತ ಗಳಿಸಬಹುದು ಎಂಬ ಭಾವನೆ ರಾಜಕಾರಣಿಗಳಲ್ಲಿರುವಂತಿದೆ. ಆದರೆ, ಈ ಬಾರಿ ಸಮಾಜದವರು ಕಿವಿ ಮೇಲೆ ಹೂವು ಇಡಲು ಬಂದವರ ಕಿವಿಯ ಮೇಲೆಯೇ ಹೂವು ಇಡುತ್ತೇವೆ ಎಂದವರು ತಿಳಿಸಿದರು.

2001ರ ಜನಗಣತಿಯ ಪ್ರಕಾರ ಎಸ್‌ಟಿ ಜನಸಂಖ್ಯೆ ಶೇ.7.5ರಷ್ಟಿದೆ. ಅದನ್ನು ಪರಿಗಣಿಸಿ ರಾಜಕೀಯದಲ್ಲಿ ಮೀಸಲಾತಿ ಹೆಚ್ಚಿಸಲಾಗಿದೆ. ಪಂಚಾಯ್ತಿಯಿಂದ ಸಂಸತ್ತಿನವರೆಗೂ ಶೇ.7.5ರ ಮೀಸಲಾತಿ ಸಿಗುತ್ತಿದೆ. ಸರ್ಕಾರದ ಅನುದಾನದಲ್ಲೂ ಶೇ.7.5 ಪರಿಶಿಷ್ಟ ಪಂಗಡಕ್ಕೆ ನಿಗದಿ ಪಡಿಸಲಾಗಿದೆ. ಆದರೆ, ಪರಿಶಿಷ್ಟರ ಮಕ್ಕಳಿಗೆ ಮಾತ್ರ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುತ್ತಿಲ್ಲ ಎಂದು ಶ್ರೀಗಳು ಆಕ್ಷೇಪಿಸಿದರು.

2020ರ ಜನಸಂಖ್ಯೆಯನ್ನು ಪರಿಗಣಿಸಿದರೆ ಎಸ್‌ಟಿ ಸಮುದಾಯದವರ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ.8.5 – 9ರವರೆಗೂ ತಲುಪಬಹುದು. ನಾವು 2001ರ ಜನಗಣತಿಯಂತೆ ಶೇ.7.5ರ ಮೀಸಲಾತಿ ಕೇಳುತ್ತಿದ್ದೇವೆ. 11 ವರ್ಷಗಳಿಂದ ಮೀಸಲಾತಿ ಹೆಚ್ಚಿಸುವಂತೆ ಕೇಳಿದರೂ ಸರ್ಕಾರ ನೀಡುತ್ತಿಲ್ಲ. ಮತ್ತೊಂದೆಡೆ ಯಾವುದೇ ಬೇಡಿಕೆ ಬರದೇ ಇದ್ದರೂ ಮುಂದುವರೆದ ಸಮಾಜದವರಿಗೆ ಶೇ.10ರ ಮೀಸಲಾತಿ ಕೊಟ್ಟಿದೆ ಎಂದವರು ಹೇಳಿದರು.

2021ರ ಫೆಬ್ರವರಿ 9ರ ವಾಲ್ಮೀಕಿ ಜಯಂತಿ ಒಳಗೆ ಸರ್ಕಾರ ಮೀಸಲಾತಿ ಕಲ್ಪಿಸಬೇಕು. ಇಲ್ಲದಿದ್ದರೆ ಸಮಾಜದವರು ಒಂದು ನಿರ್ಧಾರ ತೆಗೆದುಕೊಂಡು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.

ಸಮಾರಂಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ  ವೀರಣ್ಣ, ತಾಲ್ಲೂಕು ಅಧ್ಯಕ್ಷ ಹದಡಿ ಹಾಲಪ್ಪ, ವಾಲ್ಮೀಕಿ ನೌಕರರ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಶಾಗಲೆ ಮಂಜುನಾಥ್, ಶಾಮನೂರು ಪ್ರವೀಣ್, ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!