ರಾಣೇಬೆನ್ನೂರು, ಡಿ.24 – ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಹೇಳಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ತಾಲ್ಲೂಕು ಘಟಕ ಹಾಗೂ ನವಜೀವನ ಫೌಂಡೇಶನ್ ಆಶ್ರಯದಲ್ಲಿ ಬುಧವಾರ ನಗರದ ಹಲಗೇರಿ ರಸ್ತೆಯ ಬದಿಯ ಗುಡಿಸಲಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಸಕ್ರಿಯ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸೆ ಆಂದೋಲನ-2020ರ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಪರಿಸ್ಥಿತಿಯಲ್ಲಿ ಕ್ಷಯ ರೋಗ ವನ್ನು ಪತ್ತೆ ಹಚ್ಚುವ ಕಾರ್ಯಕ್ರಮವಾಗಿದ್ದು, ಇಂತಹ ಸಮೀಕ್ಷೆಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಗೆ ಬಂದಾಗ ಸಂಪೂರ್ಣವಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದರು.
ನೇತ್ರ ತಜ್ಞ ಡಾ. ಶಿವಯೋಗಿ ಗಡಾದ ಮಾತನಾಡಿ, ಕ್ಷಯರೋಗದ ಬಗ್ಗೆ ಭಯಪಡದೇ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕು ಎಂದರು.
ಪ್ರಾಸ್ತಾವಿಕವಾಗಿ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜಗದೀಶ ಪಾಟೀಲ ಮಾತನಾಡಿ, ತಾಲ್ಲೂಕಿನಲ್ಲಿ 2 ಹಂತಗಳಲ್ಲಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುರ್ಬಲ ವರ್ಗದವರ 15,088 ಮನೆಗಳನ್ನು ಗುರುತಿಸಿದ್ದು, ಅದರಲ್ಲಿ 71,320 ಜನರನ್ನು ಸಮೀಕ್ಷೆ ಮಾಡುವ ಗುರಿ ಹೊಂದಿದೆ. ಇದಕ್ಕಾಗಿ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗಿದ್ದು, 220 ಆಶಾ ಕಾರ್ಯಕರ್ತೆಯರು ಹಾಗೂ 101 ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆ ಎಂದರು.
ಈ ಸಮಯದಲ್ಲಿ ನಗರ ಕ್ಷಯ ರೋಗ ಆರೋಗ್ಯ ಸಂದರ್ಶಕ ಗಿರೀಶ್ ಮುರನಾಳ, ನಾಗರಾಜ, ಜೆ.ಒ. ಪಾಟೀಲ, ಶಿಲ್ಪಾ, ಸವಿತಾ, ರಾಜೇಶ್ವರಿ, ಶೋಭಾ, ಮಮತಾ, ಸುಧಾ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.