ದೂಡಾ ಮೂಲೆ ನಿವೇಶನ ಹರಾಜು ಮಾಡದೆ ಭ್ರಷ್ಟಾಚಾರ : ಜಾಧವ್

ದಾವಣಗೆರೆ, ಡಿ.24- ಡಿ.ಮಾಲತೇಶ್ ರಾವ್ ಜಾಧವ್ ದೂಡಾ ಅಧ್ಯಕ್ಷರಾಗಿದ್ದ ವೇಳೆ  ಮೂಲೆ ನಿವೇಶನಗಳನ್ನು ಹರಾಜು ಮಾಡುವ ಬದಲು ಅಳತೆ ಬದಲಾಯಿಸಿ ಅದರಲ್ಲಿ ಕೆಲವನ್ನು ಸ್ವಂತಕ್ಕೆ ಬರೆದು ಕೊಂಡಿದ್ದಾರೆ ಎಂದು  ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ದಾಖಲೆಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ನಿಜಲಿಂಗಪ್ಪ ಬಡಾವಣೆಯಲ್ಲಿ ಮೂಲೆ ನಿವೇಶನ ಹರಾಜು ಮಾಡುವ ಬದಲು ಅಳತೆ ಬದಲಿಸಿ ಪ್ರಾಧಿಕಾರದ ಮಟ್ಟದಲ್ಲಿಯೇ ಅನುಮೋದನೆ ಪಡೆದುಕೊಂಡು 21 ನಿವೇಶನಗಳನ್ನು ತಮಗೆ ಬೇಕಾದವರಿಗೆ ನೀಡಿದ್ದಾರೆ. ಅದರಲ್ಲೂ 5 ನಿವೇಶನಗಳನ್ನು ಅವರ ಸ್ವಂತಕ್ಕೆ ಬರೆದುಕೊಂಡಿದ್ದಾರೆ ಎಂದು ಹೇಳಿದರು. ದೇವರಾಜ ಅರಸು ಬಡಾವಣೆಯಲ್ಲೂ 5 ನಿವೇಶನಗಳನ್ನು ಮಾಲತೇಶ್ ರಾವ್ ಜಾಧವ್ ತನ್ನ ಪತ್ನಿ ಮಾಜಿ ಮೇಯರ್ ಅನಿತಾಬಾಯಿ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿದರು.

ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಕುಟುಂಬದ ಮೂವರ ಹೆಸರಿಗೆ ನಿವೇಶನ ಬರೆಸಿಕೊಂಡಿದ್ದಾರೆ. ಲಾಟರಿ ಮೂಲಕ ಆಯ್ಕೆಯಾಗಿದ್ದರೆ ಅಕ್ಕಪಕ್ಕದಲ್ಲಿಯೇ ಕುಟುಂಬದ ಮೂವರಿಗೆ ಹೇಗೆ ನಿವೇಶನ ಸಿಗಲು ಸಾಧ್ಯ ? ಎಂದು ಪ್ರಶ್ನಿಸಿದರು.

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸರ್ಕಾರದ ಆಸ್ತಿಯನ್ನು ಯಾರೇ ಕಬಳಿಸಿದ್ದರೂ ಮುಲಾಜಿಲ್ಲದೆ ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಎಲ್.ಡಿ. ಗೋಣೆಪ್ಪ, ಮುಖಂಡರಾದ ಗೋಪಾಲರಾವ್ ಮಾನೆ, ಟಿಂಕರ್ ಮಂಜಣ್ಣ, ರಾಕೇಶ್, ಪ್ರವೀಣ್, ಪಿ.ಸಿ. ಶ್ರೀನಿವಾಸ್ ಉಪಸ್ಥಿತರಿದ್ದರು.

error: Content is protected !!