ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಹಕ್ಕೊತ್ತಾಯ
ದಾವಣಗೆರೆ, ಡಿ.23- ಖಾಸಗಿ ಶಾಲಾ ಶಿಕ್ಷಕರಿಗೆ 10 ಸಾವಿರ ರೂ. ಸಹಾಯ ಧನ, ಶಾಲಾ ಸಿಬ್ಬಂದಿ ಹಾಗೂ ಕುಟುಂಬಕ್ಕೆ ಉಚಿತವಾಗಿ ಕೊರೊನಾ ಲಸಿಕೆ, ಚಿಕಿತ್ಸೆ, ಆರ್‌ಟಿಐ ಹಣ ಶೀಘ್ರ ಬಿಡುಗಡೆ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಹಕ್ಕೊತ್ತಾಯ ಮಂಡಿಸಿದೆ.
ನಗರದ ಶಾಮನೂರು ರಸ್ತೆಯಲ್ಲಿರುವ ಯೂರೋ ಕಿಡ್ಸ್ ಶಾಲಾ ಆವರಣದಲ್ಲಿ ಹಮ್ಮಿಕೊಂ ಡಿದ್ದ ಸಭೆಯಲ್ಲಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸು ವಂತೆ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರನ್ನು ಒತ್ತಾಯಿಸಲು ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (RUPSA) ದ ರಾಜ್ಯ ಕಾರ್ಯಾಧ್ಯಕ್ಷ ಹಾಲನೂರು ಎಸ್.ಲೇಪಾಕ್ಷ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ಆದೇಶದನ್ವಯ ಸರ್ಕಾರವು ಇತ್ತೀಚೆಗೆ ಖಾಸಗಿ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಬಿಗಿ ನಿಯಮಗಳ ಸುತ್ತೋಲೆ ಹೊರಡಿಸಿದೆ. ಆದರೆ ಆ ನಿಯಮಗಳ ಸರ್ಕಾರಿ ಶಾಲೆಗಳಿಗೆ ಏಕೆ ಅನ್ವಯಿಸುವುದಿಲ್ಲ? ಎಂದು ಪ್ರಶ್ನಿಸಿದ ಅವರು, ಈ ನಿಯಮಗಳು ಸರ್ಕಾರಿ ಶಾಲೆಗಳಿಗೂ ಅನ್ವಯಿಸಿದ್ದೇ ಆದರೆ ಶೇ.90ರಷ್ಟು ಶಾಲೆಗಳು ಮುಚ್ಚಲ್ಪಡುತ್ತವೆ.
ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ನೀಡಲು ಸಾಧ್ಯವಾಗದೆಂಬ ಕಾರಣಕ್ಕೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದೆ. ಸರ್ಕಾರ ಮಾಡಬೇಕಾದ ಕಾರ್ಯವನ್ನು ಖಾಸಗಿ ಶಾಲೆಗಳು ಮಾಡುತ್ತಿವೆ. ಆದಾಗ್ಯೂ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಗಧಾಪ್ರಹಾರ ಮಾಡುತ್ತಲೇ ಬಂದಿದೆ ಎಂದರು.
ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಹಕ್ಕೊತ್ತಾಯಗಳು
ಇತರೆ ಕೆಲಸಗಾರರಿಗೆ ನೀಡಿದಂತೆ ಶಿಕ್ಷಕರಿಗೂ 10 ಸಾವಿರ ರೂ. ಸಹಾಯ ಧನ ನೀಡಬೇಕು. ಖಾಸಗಿ ಶಾಲೆಗಳಿಂದ ಶಿಕ್ಷಕರ ಕಲ್ಯಾಣ ನಿಧಿ ಹೆಸರಿನಲ್ಲಿ ತಿಂಗಳಿಗೆ 10 ಸಾವಿರ ರೂ. ಸಹಾಯ ಧನ ನೀಡಬೇಕು. ಶಾಲೆ ಆರಂಭವಾದ ನಂತರ ಪೋಷಕರಿಂದ ಸಂಗ್ರಹಿಸಬಹುದಾದ ಶುಲ್ಕದ ಬಗ್ಗೆ ನಿರ್ದಿಷ್ಟ ನಿರ್ಣಯ ಪ್ರಕಟಿಸಬೇಕು.
ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ಕುಟುಂಬಕ್ಕೆ ಕೊರೊನಾ ಲಸಿಕೆ ಉಚಿತವಾಗಿ ನೀಡಬೇಕು. ಈ ಸಾಲಿನ ಆರ್ಟಿಇ ಕಂತಿನ ಹಣ ಶೀಘ್ರ ಪಾವತಿಸಬೇಕು. ಖಾಸಗಿ ಶಾಲೆಗಳ ಮನ್ನಣೆ ನವೀಕರಣ 5 ವರ್ಷಕ್ಕೆ ವಿಸ್ತರಿಸಬೇಕು. ಶಾಲಾ ಕಟ್ಟಡ ತೆರಿಗೆ, ಇನ್ನಿತರೆ ವೆಚ್ಚಕ್ಕೆ ವಿನಾಯಿತಿ ನೀಡಬೇಕು.
ವಾಹನಗಳ ವಿಮಾ ತೆರಿಗೆ, ಇನ್ನಿತರೆ ಖರ್ಚುಗಳಿಗೆ ಪೂರ್ಣ ವಿನಾಯಿತಿ ನೀಡಬೇಕು. 30 ಲಕ್ಷ ರೂ. ಕೋವಿಡ್ ವಾರಿಯರ್ಸ್ ಪ್ಯಾಕೇಜ್ ಶಿಕ್ಷಕರಿಗೂ ನೀಡಬೇಕು. ಆರ್ಟಿಇ ಹಣ ಮಂಜೂರಾತಿಗೆ ಶಾಲೆಗಳ ಆಡಿಟ್ ವರದಿ ಪರಿಗಣಿಸುವುದನ್ನು ರದ್ದುಪಡಿಸಬೇಕು ಇತ್ಯಾದಿ.
ಕಾರ್ಪೊರೇಟ್ ಶಾಲೆಗಳು ಲಕ್ಷಕ್ಕೂ ಅಧಿಕ ಡೊನೇಷನ್ ಪಡೆದು ಲೂಟಿ ಮಾಡುತ್ತಿವೆ. ಆದರೆ ಬಜೆಟ್ ಶಾಲೆಗಳು ಕೇವಲ 30 ರಿಂದ 60 ಸಾವಿರ ರೂ.ಗಳ ವರೆಗೆ ಹಣ ಪಡೆಯುತ್ತವೆ. ಈ ಹಣದಲ್ಲಿಯೇ ಶಿಕ್ಷಕರು, ನೌಕರರ ಭತ್ಯೆ, ಮೂಲ ಸೌಕರ್ಯ ಕಲ್ಪಿಸಬೇಕಿರುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಬಲಗೊಳ್ಳಬೇಕಿದೆ ಎಂದರು.
ಇದೇ ವೇಳೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಯಾವುದೇ ಕೆಲಸಗಳಿಗೆ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡದೆ, ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಒಕ್ಕೂಟದ ಸಂಚಾಲಕ ಎಂ.ಎನ್. ಲೋಕೇಶ್, ಶಿಕ್ಷಕರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆಗೆ ಮುಂದಾಗಿರುವುದು ದುರಂತ. ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಇದು ನಿದರ್ಶನ ಎಂದರು.
ಒಕ್ಕೂಟದ ಅಧ್ಯಕ್ಷ ಟಿ.ಎಂ.ಉಮಾಪತಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀರಾಮ ಮೂರ್ತಿ ಸಿ., ಕೆ.ಸಿ. ಲಿಂಗರಾಜು, ಆರ್.ಎಲ್. ಪ್ರಭಾಕರ್, ಎಂ.ಎಸ್. ಸಂತೋಷ್ ಕುಮಾರ್, ಕೆ.ಎಸ್. ಮಂಜುನಾಥ ಅಗಡಿ, ಪ್ರಸನ್ನ ಕುಮಾರ್ ಎ.ಎನ್., ಮೈನುದ್ದೀನ್ ಹೆಚ್.ಜೆ., ಕೆ.ಸಿ. ಮಂಜು, ಸಹನಾ ರವಿ, ಹೆಚ್.ಜಯಣ್ಣ, ವಿಜಯಕುಮಾರ್, ಪೃಥ್ವಿರಾಜ್ ಬಾದಾಮಿ, ನಾಗರಾಜ ಶೆಟ್ಟಿ, ಶಶಿಧರ್, ಅನಸೂಯ, ಸುರೇಶ್ ಕೆ., ರವಿ ಟಿ.ಆರ್., ಅರವಿಂದ ಪಿ.ಎಸ್. ಸೈಯದ್ ಮನಪುಶ್, ಪ್ರಭುಕುಮಾರ್ ಕೆ.ಎಸ್. ಇತರರು ಪಾಲ್ಗೊಂಡಿದ್ದರು.
ಇದೇ ವೇಳೆ ಒಕ್ಕೂಟದ ಸಹ ಕಾರ್ಯದರ್ಶಿ ಕೆ.ಎಸ್. ಮಂಜುನಾಥ ಅಗಡಿ ಅವರನ್ನು ರೂಪ್ಸಾದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಾಗಿ ಹಾಲನೂರು ಎಸ್.ಲೇಪಾಕ್ಷ ತಿಳಿಸಿದರು.