ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಕರೆ
ದಾವಣಗೆರೆ, ಡಿ. 23 – ಜಾಣರನ್ನೆಲ್ಲ ಬೇರೆ ಉದ್ಯಮಗಳಿಗೆ ಕಳಿಸಬೇಕು, ಉಪಯೋಗ ಇಲ್ಲದವರು ಕೃಷಿಯಲ್ಲಿರಬೇಕು ಎಂಬ ಭಾವನೆ ಬೇಡ. ಜಾಣತನದಿಂದ ಕೃಷಿ ಮಾಡಿದರೆ ಲಾಭದಾಯಕತೆ ಸಾಧ್ಯ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ತಿಳಿಸಿದ್ದಾರೆ.
ಐ.ಸಿ.ಎಂ.ಆರ್. – ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆಯ ಆತ್ಮ ಯೋಜನೆ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಯೋಜಿಸಲಾಗಿದ್ದ ರೈತರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭತ್ತಕ್ಕೆ ಒಂದು ಸುತ್ತಿನ ಕೀಟನಾಶಕ ಸಿಂಪಡಣೆ ನಿಲ್ಲಿಸಿದರೆ, ಜಿಲ್ಲೆಯಲ್ಲಿ 14 ಕೋಟಿ ರೂ. ಉಳಿತಾಯವಾಗುತ್ತದೆ ಎಂದ ಅವರು, ಕೃಷಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಕೀಟನಾಶಕ, ಗೊಬ್ಬರ ಮುಂತಾದವುಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.
ಯೂರಿಯಾವನ್ನು ಗೊಬ್ಬರವಾಗಿ ಬಳಕೆ ಮಾಡದೇ ಕಳೆನಾಶಕವಾಗಿ ಬಳಸಲಾಗುತ್ತಿದೆ. ಇದು ರಸಗೊಬ್ಬರದ ಕೊರತೆಗೂ ಕಾರಣವಾಗಬಹುದು. ಜಿಲ್ಲೆಯಲ್ಲಿ 4,800 ಟನ್ ಯೂರಿಯಾ ಕಳೆನಾಶಕವಾಗಿ ಬಳಕೆಯಾಗಿದ್ದು, ಈ ಬಗ್ಗೆ ರೈತರು ಜಾಗೃತರಾಗಬೇಕು ಎಂದರು.
ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ರೈತರು ಎಲೆಮರಚೆ ಕೀಟಕ್ಕೆ ಕೀಟನಾಶಕ ಸಿಂಪಡಿಸಲು ರೈತರಿಗೆ ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ನಂತರ ಕಂದು ಜಿಗಿ ಹುಳು ಕಾಟ ಕಂಡು ಬರಲಿಲ್ಲ. ಪರಿಸರದಲ್ಲಿ ಮಧ್ಯ ಪ್ರವೇಶ ಮಾಡಿದಾಗ ಆಗುವ ಸಮಸ್ಯೆಗಳ ಬಗ್ಗೆ ರೈತರು ತಿಳಿದರೆ ಅತಿಯಾದ ಕೀಟನಾಶಕದ ಬಳಕೆ ತಪ್ಪುತ್ತದೆ ಎಂದು ಚಿಂತಾಲ್ ಹೇಳಿದರು.
ವೈಜ್ಞಾನಿಕ ಕೃಷಿ ಹಾಗೂ ಇಳುವರಿಗಳ ಮೌಲ್ಯವರ್ಧನೆ ಮಾಡುವುದರಿಂದ ಹೆಚ್ಚು ಲಾಭ ಸಿಗುತ್ತದೆ. ಹೀಗಾಗಿ ಕೃಷಿ ಜಾಣತನವನ್ನು ಬಯಸುತ್ತದೆ. ಉಪಯೋಗ ಇಲ್ಲದವರು ಕೃಷಿಗೆ ಬರಬೇಕು ಎಂಬ ಭಾವನೆ ಬೇಡ ಎಂದವರು ಕಿವಿಮಾತು ಹೇಳಿದರು.
ಕೃಷಿ ಇಲಾಖೆ ಉಪ ನಿರ್ದೇಶಕಿ ಹಂಸ ವೇಣಿ ಮಾತನಾಡಿ, ಕೃಷಿಯಲ್ಲಿ ಮಹಿಳೆಯ ಪಾತ್ರ ಹೆಚ್ಚಾಗಿದೆ. ಆದರೆ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆ ಭಾಗಿಯಾಗುವುದು ಕಡಿಮೆ. ಮಹಿಳೆಯರನ್ನೂ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗ ಮಾಡಿದಾಗ ಕೃಷಿ ಪರಿಣಾಮಕಾರಿಯಾಗಿ ಹೆಚ್ಚು ಲಾಭ ಸಿಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಎಂ.ಜಿ. ಬಸವನಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೊನಾ ಕಾರಣದಿಂದಾಗಿ ಬೇರೆಲ್ಲ ವಲಯಗಳಿಗೆ ಹೊಡೆತ ಬಿದ್ದರೂ ಕೃಷಿ ವಲಯ ಬೆಳವಣಿಗೆ ಕಂಡಿದೆ. ಈ ಹಿನ್ನೆಲೆಯಲ್ಲಿ ಕೃಷಿ ಮಹತ್ವ ಪಡೆದಿದೆ. ತುಂಡು ಭೂಮಿಯಲ್ಲಿ ಹಿಂಡು ಬೆಳೆಯುವ ತಂತ್ರಜ್ಞಾನ ಈ ಕ್ಷೇತ್ರದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕಿದೆ ಎಂದರು.
ವೇದಿಕೆಯ ಮೇಲೆ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆ ನಿರ್ದೇಶಕ ಬಿ. ಉಮೇಶ್, ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಸ್.ವಿ. ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಚಂದ್ರಶೇಖರಪ್ಪ ಸ್ವಾಗತಿಸಿದರೆ, ಜೆ. ರಘುರಾಜ ನಿರೂಪಿಸಿದರು. ಡಾ. ಜಿ.ಕೆ. ಜಯದೇವಪ್ಪ ವಂದಿಸಿದರು.