ದಾವಣಗೆರೆ, ಡಿ. 23- ಸಮೀಪದ ಬಾತಿ ಕೆರೆ, ಆವರಗೆರೆ ಕೆರೆ ಹಾಗೂ ಟಿವಿ ಸ್ಟೇಷನ್ ಕೆರೆ ಅಭಿವೃದ್ಧಿಗೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 12 ಕೋಟಿ ರೂ. ಮೀಸಲು ಇಡಲಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಎದುರಿನ ಪಿಬಿ ರಸ್ತೆಯಿಂದ ಬಾಪೂಜಿ ಎಂಬಿಎ ಕಾಲೇಜು ಕಾಂಪೌಂಡ್‍ಗೆ ಹೋಗುವ ರಸ್ತೆಯ ಅಭಿವೃದ್ಧಿಗೆ 3.75 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆ, ಆರ್ಚ್(ಕಮಾನು), ಡ್ರೈನೇಜ್ ನಿರ್ಮಾಣವನ್ನು ಹೊಂದಿರುವ ಈ ಕಾಮಗಾರಿ ಇನ್ನೂ ನಾಲ್ಕು ತಿಂಗಳಲ್ಲಿ ಪೂರ್ಣಗೊಂಡು ಲೋಕಾರ್ಪಣೆ ಗೊಳ್ಳಲಿದೆ ಎಂದು ಹೇಳಿದರು.
ದೂಡಾದಿಂದ ವೇಗವಾಗಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪಿಬಿ ರಸ್ತೆಯ ಎರಡೂ ಬದಿಯಲ್ಲಿ ಎಲ್‍ಇಡಿ ದೀಪದ ವ್ಯವಸ್ಥೆ ಮತ್ತು ದುರ್ಗಾಂಬಿಕಾ ದೇವಸ್ಥಾನದ ಬಳಿ ಹೈಮಾಸ್ಟ್ ದೀಪ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ದೂಡಾ ಅಧ್ಯಕ್ಷರ ಮತ್ತು ಸದಸ್ಯರ ಒತ್ತಾಸೆಯ ಮೇರೆಗೆ ನಡೆಯಲಿವೆ ಎಂದರು.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಪ್ರಾಧಿಕಾರದಿಂದ ಈಗಾಗಲೇ ಐದು ಕೋಟಿ ವೆಚ್ಚದ ಕಾಮಗಾರಿ ನಡೆದಿದ್ದು, ಇದು ಬರೀ ದಾವಣಗೆರೆ ನಗರಕ್ಕೆ ಸೀಮಿತವಾಗಿಲ್ಲ. ಹರಿಹರದ ಪಾರ್ಕ್, ರಸ್ತೆ ಅಭಿವೃದ್ಧಿಗೂ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.
ಬಾತಿ ಕೆರೆಯನ್ನು ದೂಡಾಕ್ಕೆ ಹಸ್ತಾಂತರಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಹಸ್ತಾಂತರಗೊಂಡ ತಕ್ಷಣವೇ ಕೆರೆಯ ಪಕ್ಕದಲ್ಲಿರುವ 44 ಎಕರೆ ಜಾಗದಲ್ಲಿ ಫ್ಯಾಂಟಸಿ ಪಾರ್ಕ್ ಮಾದರಿಯಲ್ಲಿ ಎಲ್ಲಾ ಚಟುವಟಿಕೆ ಇರುವಂತೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ದೂಡಾದಿಂದ ಹೊಸ ಬಡವಾಣೆ ಅಭಿವೃದ್ಧಿ ಪಡಿಸಲು ಕುಂದುವಾಡದ ಸಮೀಪ ಜಮೀನು ನೋಡಲಾಗಿದ್ದು, ಸರ್ವೇ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿ ಹೊಸ ಲೇಔಟ್ ನಿರ್ಮಾಣವಾದರೆ ನಿರ್ಗತಿಕರಿಗೆ ನಿವೇಶನ ದೊರೆಯಲಿದೆ ಎಂದು ಹೇಳಿದರು.
ಶಾಸಕ ಎಸ್.ಎ.ರವೀಂದ್ರನಾಥ್, ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ಸದಸ್ಯರಾದ ನಾಗರಾಜ್ ಎಂ. ರೋಖಡೆ, ಜಯರುದ್ರಪ್ಪ, ಆರ್.ಎಲ್.ದೇವಿರಮ್ಮ, ಸೌಭಾಗ್ಯ ಮುಕುಂದ ಮತ್ತಿತರರು ಈ ವೇಳೆ ಹಾಜರಿದ್ದರು.