ಆದರೂ, ಕ್ರಿಸ್‌ಮಸ್ ಸಮಾರಂಭಕ್ಕೆ ಕರ್ಫ್ಯೂ ಅನ್ವಯವಾಗದು !
ರಾತ್ರಿ ಕರ್ಫ್ಯೂ ಬಗ್ಗೆ ಸರ್ಕಾರದ ದಿನಕ್ಕೊಂದು, ಗಂಟೆಗೊಂದು ನಿರ್ಧಾರ
ಬೆಂಗಳೂರು, ಡಿ. 23 – ರಾತ್ರಿ ಕರ್ಫ್ಯೂ ಹೇರುವುದಿಲ್ಲ ಎಂದು ಮಂಗಳವಾರವಷ್ಟೇ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬುಧವಾರದಂದು ನಿಲುವು ಬದಲಿಸಿ ಇದೇ ದಿನದಿಂದ ಜಾರಿಗೆ ಬರುವಂತೆ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ವಿಧಿಸುವುದಾಗಿ ತಿಳಿಸಿದ್ದರು.
ನಂತರ ಇನ್ನೊಮ್ಮೆ ನಿಲುವು ಬದಲಿಸಿ, ಗುರುವಾರ ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಮಾತ್ರ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಗುರುವಾರ ಮಧ್ಯರಾತ್ರಿಯ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೇ ಮಾಡಬಹುದು ಎಂದೂ ಹೇಳಿದ್ದಾರೆ.
ಈ ನಡುವೆ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ರಾತ್ರಿ ಕರ್ಫ್ಯೂ ಇದ್ದರೂ ಸಾರಿಗೆ ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರು ರಾತ್ರಿ ಕರ್ಫ್ಯೂ ಕುರಿತು ಆದೇಶ ಹೊರಡಿಸಿದ್ದು, ಡಿ.24ರಿಂದ ಜನವರಿ 2ರ ವರೆಗೆ ರಾತ್ರಿ 11ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಠಿಣ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಯುರೋಪ್ ರಾಷ್ಟ್ರಗಳಲ್ಲಿ ಹೊಸ ಬಗೆಯ ಕೊರೊನಾ ವೈರಸ್ ಹರಡುತ್ತಿರುವ ಕಾರಣ ನೀಡಿರುವ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಹೇರುವುದಾಗಿ ತಿಳಿಸಿದೆ.
ಇವಕ್ಕಿದೆ ಕರ್ಫ್ಯೂದಿಂದ ವಿನಾಯಿತಿ
ರಾತ್ರಿ ಕರ್ಫ್ಯೂ ಇದ್ದರೂ ಸಹ ಅಗತ್ಯ ಸೇವೆಗಳು ಹಾಗೂ ಖಾಲಿ ವಾಹನಗಳೂ ಸೇರಿದಂತೆ ಸರಕು ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ರಾತ್ರಿ ಕಾರ್ಯಾಚರಣೆಯ ಅಗತ್ಯವಿರುವ ಕೈಗಾರಿಕೆಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದಾಗಿದೆ. ಈ ಸಿಬ್ಬಂದಿ ಸಂಘಟನೆಯ ಸೂಕ್ತ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದಾಗಿದೆ.
ನಿರಂತರ ಕಾರ್ಯ ನಿರ್ವಹಿಸುವ ಅಗತ್ಯವಿರುವ ಕೈಗಾರಿಕೆಗಳು, ದೂರ ಸಂಚಾರದ ರೈಲು, ಬಸ್ ಹಾಗೂ ವೈಮಾನಿಕ ಸೇವೆಗಳಿಗೆ ಅನುಮತಿ ಇದೆ.
ವಿಮಾನ, ರೈಲ್ವೆ ಹಾಗೂ ಬಸ್ ನಿಲ್ದಾಣಗಳಿಗೆ ತೆರಳಲು ಟ್ಯಾಕ್ಸಿ ಹಾಗೂ ಆಟೋಗಳಿಗೆ ಅನುಮತಿ ಇದೆ. ಸಂಚಾರದ ವೇಳೆ ಸೂಕ್ತ ಟಿಕೆಟ್ ಹೊಂದಿರಬೇಕು. ಗುರುವಾರ ರಾತ್ರಿಯ ಸಾಮೂಹಿಕ ಕ್ರಿಸ್‌ಮಸ್ ಆಚರಣೆಗೆ ಅನುಮತಿ ನೀಡಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.
ರಾತ್ರಿ ಕರ್ಫ್ಯೂಗೆ ನೆಟ್ಟಿಗರ ಲೇವಡಿ
ಜನರೇ ತಿರುಗಾಡದ ಸಮಯದಲ್ಲಿ ದೆವ್ವಗಳಿಗೆ ಕರ್ಫ್ಯೂ ಹೇರಲಾಗಿದೆಯೇ ಎಂದು ತರಾಟೆ
ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ರಾತ್ರಿ ಕರ್ಪ್ಯೂಗೆ ಅಂತರ್ಜಾಲದಲ್ಲಿ ತೀವ್ರ ಲೇವಡಿ ವ್ಯಕ್ತವಾಗುತ್ತಿದೆ.
ಮೊದಲು ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಅಂದ್ರಿ. ಈಗ ರಾತ್ರಿ 11ರಿಂದ ಬೆಳಿಗ್ಗೆ 5 ಗಂಟೆವರೆಗೆ ಅಂತಿದ್ದೀರಿ. ಹೀಗೆ ನಡೆದರೆ 31ನೇ ತಾರೀಕು ರಾತ್ರಿ 1ರಿಂದ 3ರವರೆಗೆ ಕರ್ಫ್ಯೂ ಸಾಕೆಂಬ ಬೇಡಿಕೆ ಬಂದೀತು ಎಂದು ಒಬ್ಬರು ಟ್ವಿಟ್ಟರ್ನಲ್ಲಿ ಕಾಲೆಳೆದಿದ್ದಾರೆ.
ರಾತ್ರಿ10 ಗಂಟೆ ಅಲ್ಲಾ 11 ರ ನಂತ್ರ ಬಂದು ಬೆಳಿಗ್ಗೆ ಬೇಗ ಹೋಗತ್ತೇನೆ ಅಂತ ಕೊರೊನಾ ಹೇಳ್ತಾ? ಎಂದು ಇನ್ನೊಬ್ಬರು ಪ್ರಶ್ನಿಸಿದ್ದು, ಜನ ಸಂಖ್ಯೆ ಕಡಿಮೆ ಇರು ಹೊತ್ತಲ್ಲಿ ಕರ್ಫ್ಯೂ ಅಗತ್ಯವಾದರೂ ಏನು ಎಂದು ಕೇಳಿದ್ದಾರೆ.
ಕರ್ಫ್ಯೂ ಇದ್ಮೇಲೆ ಯಾರು ಓಡಾಡೋ ಹಾಗಿಲ್ಲ. ಆದರೆ, ರಾತ್ರಿ ಕ್ರಿಸ್ ಮಸ್ ಆಚರಣೆ ಮಾಡ್ಬೊದಂತೆ ಇದ್ ಯಾವ್ ತರ ಕಾನೂನು…? ನಿಮಗೆ ಹೇಗ್ ಬೇಕೊ ಹಾಗೆ ಮಾಡ್ಬೋದ…? ಎಂಬುದು ಮತ್ತೊಬ್ಬರ ಪ್ರಶ್ನೆ.
ಅಂದ್ರೆ ರಾತ್ರಿ 11 ಗಂಟೆಯಿಂದ 5 ಗಂಟೆವರೆಗೆ ಕೊರೊನಾ ಹರಡುತ್ತೆ – ಉಳಿದ ಸಮಯದಲ್ಲಿ ಕೊರೊನಾ ಮಲಗುತ್ತೆ. ವರ್ಷದ ಕೊನೆಯ ಹಾಸ್ಯ ಎಂದು ಇನ್ನೊಬ್ಬರು ಸರ್ಕಾರದ ಕ್ರಮವನ್ನು ಲೇವಡಿ ಮಾಡಿದ್ದಾರೆ. ಕಡು ಚಳಿಗೆ ಜನ ಮನೆಯಿಂದ ಹೊರ ಬರದೇ ಇರುವ ಅವೇಳೆಯಲ್ಲಿ ಕರ್ಫ್ಯೂ ಹೇರಿದರೆ ಏನು ಪ್ರಯೋಜನ? ಕೇವಲ ದೆವ್ವ – ಪಿಶಾಚಿಗಳಿಗೆ ಕರ್ಫ್ಯೂ ಹೇರಿರುವಂತಿದೆ. ಇದು ಸರ್ಕಾರದ ತೋರಿಕೆಯ ಕ್ರಮವೇ ಹೊರತು ಜನಹಿತದ್ದಲ್ಲ ಎಂದು ಇನ್ನೊಬ್ಬರು ಕಿಡಿ ಕಾರಿದ್ದಾರೆ.
ಬ್ರಿಟನ್‌ನಲ್ಲಿ ಕೊರೊನಾದ ಹೊಸ ರೀತಿಯ ವೈರಸ್ ಹರಡಿದೆ. ಆದರೆ, ದೇಶದಲ್ಲಿ ಇದು ಇನ್ನೂವರೆಗೂ ಕಂಡು ಬಂದಿಲ್ಲ. ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಹೇರುವುದಿಲ್ಲ ಎಂದು ರಾಜ್ಯ ಸರ್ಕಾರ ಮಂಗಳವಾರದ ವರೆಗೂ ಹೇಳುತ್ತಾ ಬಂದಿತ್ತು. ಆದರೆ, ದಿಢೀರನೆ ಗುರುವಾರದಿಂದ ಜಾರಿಗೆ ಬರುವಂತೆ ಕರ್ಫ್ಯೂ ಜಾರಿಗೆ ತರಲಾಗಿದೆ.
ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಆದರೆ, ಉಳಿದ ಸಮಯದಲ್ಲಿ ಯಾವುದೇ ನಿರ್ಬಂಧ ಇರುವುದಿಲ್ಲ. ಜನರು ಎಂದಿನಂತೆ ತಮ್ಮ ನಿತ್ಯ ವ್ಯವಹಾರಗಳನ್ನು ನಡೆಸಲು ಸರ್ಕಾರ ಇದುವರೆಗೂ ಯಾವುದೇ ಅಡ್ಡಿಗಳನ್ನು ಪ್ರಕಟಿಸಿಲ್ಲ.
ಬುಧವಾರ ಬೆಳಿಗ್ಗೆ ಕೋವಿಡ್ ನಿಯಂತ್ರಣ ಕಾರ್ಯಪಡೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ. ಕರ್ಫ್ಯೂ ಸಂದರ್ಭದಲ್ಲಿ ಹಾಲು, ವೈದ್ಯಕೀಯ ಸೇವೆ ಸೇರಿದಂತೆ ತುರ್ತು ಮತ್ತು ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದಿದ್ದರು.
ಆದರೆ, ಆನಂತರ ಟ್ವೀಟ್ ಮಾಡಿರುವ ಅವರು, ಕರ್ನಾಟಕ ರಾಜ್ಯದಲ್ಲಿ ಬುಧವಾರದಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಬದಲಾಗಿ ಗುರುವಾರದಿಂದ ಜಾರಿಗೆ ತರಲಾಗುವುದು. ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ, ಡಿ.24ರಂದು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು ಎಂದು ಹೇಳಿದ್ದಾರೆ.
ಈ ನಡುವೆ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಾರಿಗೆ ಬಸ್‌ಗಳ ಸಂಚಾರದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ರಾತ್ರಿ ಹೊರಡುವ ಬಸ್‌ಗಳಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದಿದ್ದಾರೆ.