ದಾವಣಗೆರೆ ಶೇ.85.54, ಜಗಳೂರು ಶೇ.83.96, ಹೊನ್ನಾಳಿ ಶೇ.86.32 ಮತದಾನ
ದಾವಣಗೆರೆ, ಡಿ.22- ಗ್ರಾಮಗಳ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಮೊದಲ ಹಂತದಲ್ಲಿ ಮೂರು ತಾಲ್ಲೂಕುಗಳಲ್ಲಿ ನಡೆದ ಪಂಚಾಯ್ತಿ ಚುನಾವಣೆ ಯಲ್ಲಿ ಶೇ.85.27ರಷ್ಟು ಮತದಾನವಾಗಿದೆ.
ದಾವಣಗೆರೆಯ 38, ಹೊನ್ನಾಳಿಯ 28 ಹಾಗೂ ಜಗಳೂರಿನ 22 ಗ್ರಾ.ಪಂ.ಗಳಿಗೆ ಮಂಗಳ ವಾರ ಚುನಾವಣೆ ಶಾಂತಿಯುತ ವಾಗಿ ನಡೆಯಿತು.
ದಾವಣಗೆರೆ ತಾಲ್ಲೂಕಿನಲ್ಲಿ ಶೇ85.54, ಜಗಳೂರು ಶೇ.83.96 ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ ಶೇ.86.32 ರಷ್ಟು ಮತದಾನವಾಗಿದೆ.
ಹಳ್ಳಿಗಳಲ್ಲಿ ಬೆಳಿಗ್ಗೆಯಿಂದಲೇ ಚುನಾವಣಾ ಕಣ ರಂಗೇರಿತ್ತು. ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮಹಿಳೆಯರು ಚಿಕ್ಕ ಮಕ್ಕಳೊಂದಿಗೆ ಬಂದು ಹಕ್ಕು ಚಲಾಯಿಸಲು ಸರದಿಗೆ ನಿಂತರೆ, ವಯಸ್ಸಾದವರೂ ತಾವೇನು ಕಡಿಮೆ ಎಂಬಂತೆ ಹುಮ್ಮಸ್ಸಿನಿಂದಲೇ ಆಗಮಿಸಿದ್ದರು.
ಯುವಕರು ಮತದಾರರನ್ನು ಕರೆತರುವಲ್ಲಿ ತಲ್ಲೀನ ರಾಗಿದ್ದರು. ಅಲ್ಲಲ್ಲಿ ಗುಂಪುಗಳು, ಆಟೋ, ಬೈಕುಗಳಲ್ಲಿ ಮತದಾರರನ್ನು ಕರೆ ತರುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು. ಬೆಳಿಗ್ಗೆಯೇ ಮತ ಚಲಾಯಿಸಿ ಕೆಲಸ ಕಾರ್ಯಗಳಿಗೆ ಹೊರಡುವ ಹಳ್ಳಿಗರ ನಿರ್ಧಾರವೂ ಸರದಿ ಸಾಲು ಉದ್ದವಾಗಲು ಕಾರಣವಾಗಿತ್ತು. ಮತ ಕೇಂದ್ರಗಳ ಸಮೀಪ ಅಭ್ಯರ್ಥಿಗಳು ಹಾಗೂ ಬೆಂಬಲಿಗರ ಗುಂಪು ಮತದಾರರ ಓಲೈಕೆಗೆ ಕೊನೆ ಕ್ಷಣದ ಕಸರತ್ತು ನಡೆಸುತ್ತಲೇ ಇತ್ತು.
ಇಳಿ ವಯಸ್ಸಿನಲ್ಲೂ ಕುಂದದ ಉತ್ಸಾಹ
ಮಂಗಳವಾರ ನಡೆದ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ವಯಸ್ಸಾದ ವೃದ್ಧ, ವೃದ್ದೆಯರು ಮತದಾನಕ್ಕೆ ಅತಿ ಹುಮ್ಮಸ್ಸಿನಿಂದಲೇ ಆಗಮಿಸಿ, ಮತ ಚಲಾಯಿಸಿದರು. ಕೆಲವರಿಗೆ ಸಂಬಂಧಿಗಳು ಆಸರೆಯಾದರೆ, ಮತ್ತೆ ಕೆಲವರಿಗೆ ಊರು ಗೋಲೇ ಆಸರೆ. ಕೆಲ ಮಹಿಳೆಯರು ಕಂಕುಳಲ್ಲಿ ಮಕ್ಕಳನ್ನಿಟ್ಟುಕೊಂಡೇ ಸರದಿಯಲ್ಲಿ ನಿಂತಿ ದ್ದುದು ಹಳ್ಳಿಗರ ಉತ್ಸಾಹಕ್ಕೆ ಸಾಕ್ಷಿಯಾಗಿತ್ತು.
ಸೀರೆಯ ಸೆರಗೇ ಮಾಸ್ಕ್, ಅಂತರವಿಲ್ಲ
ಮತದಾನಕ್ಕೆ ಬಂದ ಬಹುತೇಕ ಮತದಾರರು ಮಾಸ್ಕ್ ರಹಿತವಾಗಿಯೇ ಆಗಮಿಸಿದ್ದರು. ಮತ ಕೇಂದ್ರಕ್ಕೆ ಬಂದಾಗ ಸಿಬ್ಬಂದಿಗಳ ಒತ್ತಾಯಕ್ಕೆ ಹೆಗಲ ಮೇಲಿದ್ದ ಟವಲ್ ಮುಖಕ್ಕೆ ಕಟ್ಟಿಕೊಂಡರೆ, ಹೆಂಗಸರು ಸೀರೆಯ ಸೆರಗನ್ನೇ ಮುಖಕ್ಕೆ ಸುತ್ತಿಕೊಳ್ಳುತ್ತಿದ್ದಾರೆ. ಪ್ರವೇಶ ದ್ವಾರದಲ್ಲಿ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಮಾತ್ರ ಕಡ್ಡಾಯವಾಗಿತ್ತು. ಕಳೆದ ಚುನಾವಣೆ ಗಳಲ್ಲಿ ಅಂಗವಿಕಲರಿಗಾಗಿ ವ್ಹೀಲ್ ಚೇರ್ ವ್ಯವಸ್ಥೆ ಕಲ್ಪಿಸಿದ್ದ ಜಿಲ್ಲಾಡಳಿತ ಈ ಬಾರಿ ಮರೆತಂತಿತ್ತು. ಪರಿಣಾಮ ಅಂಗವಿಕಲರು ಮೆಟ್ಟಿಲು ಹತ್ತಲು ಪ್ರಾಯಾಸ ಪಡುತ್ತಿದ್ದುದು ಕಂಡು ಬಂತು.
ಇಬ್ಬರು ಕೊರೊನಾ ಸೋಂಕಿತರ ಮತದಾನ
ದಾವಣಗೆರೆ ತಾಲ್ಲೂಕಿನಲ್ಲಿ ಕೋವಿಡ್ ಪಾಸಿಟಿವ್ ಇರುವ 16 ಮತದಾರರ ಪೈಕಿ ಲೋಕಿಕೆರೆಯಲ್ಲಿ ಒಬ್ಬರು ಮಾತ್ರ ಮತ ಚಲಾಯಿಸಿದ್ದಾರೆ. ಜಗಳೂರು ತಾಲ್ಲೂಕಿನಲ್ಲಿ ಕೋವಿಡ್ ಪಾಸಿಟಿವ್ ಇರುವ 13 ಜನರ ಪೈಕಿ ಉದ್ದಗಟ್ಟದಲ್ಲಿ ಒಬ್ಬರು ಮಾತ್ರ ಮತ ಚಲಾಯಿಸಿದ್ದಾರೆ. ಹೊನ್ನಾಳಿ ತಾಲ್ಲೂಕಿನಲ್ಲಿ ಪಾಸಿಟಿವ್ ಇರುವ 6 ಮತದಾರರು ಮತ ಚಲಾಯಿಸಲು ನಿರಾಕರಿಸಿದ್ದಾರೆ.
- ಬೆಳಿಗ್ಗೆ 9 ಗಂಟೆಗೆ ದಾವಣಗೆರೆ ತಾಲ್ಲೂಕಿನಲ್ಲಿ ಶೇ.8.62, ಜಗಳೂರು ಶೇ.4 ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ ಶೇ.4.95 ಸೇರಿ ಒಟ್ಟು 5.85ರಷ್ಟು ಮತದಾನವಾಗಿತ್ತು.
- ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ಶೇ.39.65, ಜಗಳೂರು ಶೇ.42 ಹಾಗೂ ಹೊನ್ನಾಳಿ ಶೇ.42.75 ಸೇರಿ ಒಟ್ಟಾರೆ 41.75ರಷ್ಟು ಮತದಾನವಾಗಿತ್ತು.
- 3 ಗಂಟೆಗೆ ದಾವಣಗೆರೆ ಶೇ. 61.31, ಜಗಳೂರು ಶೇ.63.41 ಹಾಗೂ ಹೊನ್ನಾಳಿ ಶೇ.62.76ರಷ್ಟು ಮತದಾನವಾಗಿತ್ತು.
ಹೆಬ್ಬಾಳು ಗ್ರಾಮದಲ್ಲಿ ಮತದಾನ ಮುಂದೂಡಿಕೆ
ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮ ಪಂಚಾಯ್ತಿ ಮತಗಟ್ಟೆ ಸಂಖ್ಯೆ 108 ಹಾಗೂ 109ರ ಮತ ದಾರರ ಪಟ್ಟಿ ಅದಲು ಬದಲಾದ ಕಾರಣ ಮತದಾನ ಮುಂದೂಡಲಾಗಿದೆ.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಗಿರೀಶ್, ಸಹಾಯಕ ಕೃಷಿ ನಿರ್ದೇಶಕ ರೇವಣ ಸಿದ್ದನಗೌಡ ಸೇರಿದಂತೆ ಅಧಿಕಾರಿಗಳು ಹೆಬ್ಬಾಳು ಗ್ರಾಮ ಪಂಚಾಯ್ತಿಗೆ ಆಗಮಿಸಿ ಪರಿಶೀಲಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಎರಡು ಮತಗಟ್ಟೆಗಳ ಮತದಾರರ ಪಟ್ಟಿ ಅದಲು ಬದಲಾಗಿದ್ದು, ಚುನಾವಣೆಗೆ ಸ್ಪರ್ಧಿಸಿದ್ದ 12 ಜನರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾಖಲೆ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತೇವೆ ಎಂದರು.
ಚುನಾವಣೆಯನ್ನು ಮುಂದೂಡಲಾಗು ತ್ತಿದ್ದು, ಚುನಾವಣಾ ದಿನಾಂಕವನ್ನು ಜಿಲ್ಲಾಧಿಕಾರಿ ಗಳು ತಿಳಿಸಲಿದ್ದಾರೆ ಎಂದು ಹೇಳಿದರು. ಹೆಬ್ಬಾಳು ವಾರ್ಡ್ 1ರಲ್ಲಿ ( ಮತಗಟ್ಟೆ 108) 807 ಮತದಾರರಿದ್ದಾರೆ. ವಾರ್ಡ್ 2ರಲ್ಲಿ (ಮತಗಟ್ಟೆ 109) 917 ಮತದಾರರಿದ್ದಾರೆ.
ಹೆಬ್ಬಾಳು ಗ್ರಾಮ ಪಂಚಾಯ್ತಿಯ ಉಳಿದ ಐದು ಕ್ಷೇತ್ರಗಳಾದ ಕಾಟೀಹಳ್ಳಿ, ಹುಣಸೇಕಟ್ಟೆ, ನೀರ್ಥಡಿ, ಮಂಡ್ಲೂರು ಹಾಗೂ ಹಾಲುವರ್ತಿಯಲ್ಲಿ ಶಾಂತಿಯುತ ಮತದಾನ ನಡೆದಿದೆ.
ಅಣಜಿ ಗ್ರಾಮ ಪಂಚಾಯ್ತಿಯ ಮೆಳ್ಳೇಕಟ್ಟೆ ಗ್ರಾಮದ ಮತ ಕೇಂದ್ರ ಸಂಖ್ಯೆ 35ರಲ್ಲಿ ಬೆಳಿಗ್ಗೆ 9 ಗಂಟೆಗೆ 917 ಜನರ ಪೈಕಿ 90 ಜನ ಮತ ಚಲಾಯಿಸಿದ್ದರು.
ಪ್ರಥಮಬಾರಿ ಹಕ್ಕು ಚಲಾಯಿಸಿದ ಸಂಭ್ರಮ: ಮೆಳ್ಳೆಕಟ್ಟೆ ಗ್ರಾಮದ ಎಸ್. ನಾಗಮ್ಮ ಪ್ರಥಮ ಬಾರಿಗೆ ಮತದಾನ ಮಾಡಿದರು. ಈ ವೇಳೆ ಪತ್ರಕರ್ತರೊಂದಿಗೆ ತಮ್ಮ ಸಂತಸ ಹಂಚಿಕೊಳ್ಳುತ್ತಾ, ಊರಿನ ಅಭಿವೃದ್ಧಿಗೆ ಮತ ಚಲಾಯಿಸಿದ್ದೇನೆ. ಪ್ರಥಮ ಮತದಾನ ಸಂತಸ ತಂದಿದೆ ಎಂದರು.
ಬೆಳಿಗ್ಗೆ 10 ಗಂಟೆ ವೇಳೆಗೆ ಅಣಜಿ 1ನೇ ವಾರ್ಡ್ ಮತಗಟ್ಟೆ ಸಂಖ್ಯೆ 31ರ 565 ಮತದಾರರ ಪೈಕಿ 148 ಜನ ಹಕ್ಕು ಚಲಾಯಿಸಿದ್ದರು. 9 ಗಂಟೆಗೆ ಕೇವಲ 52 ಜನ ಮತ ಚಲಾಯಿಸಿದ್ದರು.
ಬಿಳಿಚೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತ ಕೇಂದ್ರ ಸಂಖ್ಯೆ 128ರಲ್ಲಿ ಬೆಳಿಗ್ಗೆ 11.30ರ ವೇಳೆಗೆ 630 ಮತದಾರರ ಪೈಕಿ 225 ಜನ ಮತ ಚಲಾಯಿಸಿದ್ದರು.
ಬಾಗಿಲು ಮುಚ್ಚಿದ ಸೆಕ್ಚರ್ ಅಧಿಕಾರಿ: ಮುಚ್ಚನೂರು ಗ್ರಾಮದ ಮತ ಕೇಂದ್ರದಲ್ಲಿ ಮಾಹಿತಿ ಪಡೆಯಲೆಂದು ತೆರಳಿದ್ದ ಪತ್ರಕರ್ತರೊಂದಿಗೆ ಮಾತಿನ ಚಕಮಕಿಗೆ ಇಳಿದ ಸೆಕ್ಟರ್ ಅಧಿಕಾರಿ ಮತ ಕೇಂದ್ರದ ಬಾಗಿಲು ಮುಚ್ಚಿದ ಘಟನೆ ನಡೆಯಿತು. ವಾಗ್ವಾದ ನಡೆಯುವಾಗ ಜನರು ಗುಂಪಾಗಿದ್ದನ್ನು ನೋಡಿ ಪೊಲೀಸರು ಜನರನ್ನು ಹೊರ ಕಳುಹಿಸಲು ಮುಂದಾದಾಗ ಅವಸರ ಪಟ್ಟ ವೃದ್ದೆಯೊಬ್ಬರು ಬೈಕ್ ನಿಂದ ಬಿದ್ದ ಘಟನೆಯೂ ನಡೆಯಿತು.