ನಗರದಲ್ಲಿ ಸಹಕಾರ ಭವನ ನಿರ್ಮಾಣ

ದಾವಣಗೆರೆ, ಡಿ. 22 – ಸಹಕಾರ ಚಳವಳಿಯು ಸತ್ಯ ಮತ್ತು ಪ್ರಾಮಾಣಿಕತೆ ಯಿಂದ ಬಲಿಷ್ಟವಾಗ ಬೇಕಾಗಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರೂ, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷರೂ ಆದ ಎನ್.ಎ.ಮುರುಗೇಶ್   ಪ್ರತಿಪಾದಿಸಿದರು.

ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ನಿನ್ನೆ ನಡೆದ ಜಿಲ್ಲಾ ಸಹಕಾರ ಯೂನಿಯನ್ ನ 17ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸುಮಾರು 1176 ವಿವಿಧ ರೀತಿಯ ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಸಹಕಾರ ಚಳುವಳಿಗೆ ಅಗತ್ಯವಿರುವ ಶಿಕ್ಷಣ, ತರಬೇತಿ ಮತ್ತು ಪ್ರಚಾರ ನೀಡುವ ನೆಲೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಪರಿಣಾಮಕಾರಿ ಯಾಗಿ ತನ್ನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಸಹಕಾರ ಯೂನಿಯನ್ ಅನೇಕ ಸೇವಾ ಕಾರ್ಯಗಳನ್ನು ಕೈಗೊಂಡಿದೆ. ಕೊರೊನಾ ವಾರಿಯರ್ಸ್ ಅಂಗನವಾಡಿ ಕಾರ್ಯಕರ್ತೆಯರಿಗೆ ಯೂನಿಯನ್ ನಿಂದ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಮುರುಗೇಶ್ ವಿವರಿಸಿದರು.

ನಗರದಲ್ಲಿ ಸಹಕಾರ ಭವನಕ್ಕೆ ನಿವೇಶನ ಒದಗಿಸಲು ಸಹಕಾರ ಸಚಿವ ಸೋಮಶೇಖರ್ ಅವರು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಮಾತನಾಡಿ, ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಜನೌಷಧಿ ಯೋಜನೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗಿದ್ದು, ಸಹಕಾರ ಮಹಾ ಮಂಡಲ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿದೆ ಎಂದು ಹೇಳಿದರು.

ಸಂಗೀತ ರಾಘವೇಂದ್ರ ಅವರ ಪ್ರಾರ್ಥನೆಯ ನಂತರ ಸಹಕಾರ ಯೂನಿಯನ್ ನಿರ್ದೇಶಕ ಸಿರಿಗೆರೆ ರಾಜಣ್ಣ ಸ್ವಾಗತಿಸಿದರು.  ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಹೆಚ್.ಸಂತೋಷ್‌ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸಹಕಾರ ಯೂನಿಯನ್ ಉಪಾಧ್ಯಕ್ಷ ಹೆಚ್.ಬಸವರಾಜಪ್ಪ, ನಿರ್ದೇಶಕರಾದ ಗಿಡ್ಡಳ್ಳಿ ನಾಗರಾಜ್, ಟಿ.ರಾಜಣ್ಣ, ಬಿ.ಶೇಖರಪ್ಪ, ಆರ್.ಎಂ.ಮಾಲತೇಶ್, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಶಿವಗಂಗಮ್ಮ ಮತ್ತಿತರರಿದ್ಧರು.

ಮಹಿಳಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಸುಭಾಷ್, ಸಹಕಾರಿ ಧುರೀಣರಾದ ಜಯರುದ್ರೇಶ್, ವೀರಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯೂನಿಯನ್ ವ್ಯವಸ್ಥಾಪಕ ಜಗದೀಶ್‌, ಸಿಬ್ಬಂದಿ ವರ್ಗದ ವಿ.ರಂಗನಾಥ್, ಆರ್.ಸ್ವಾಮಿ ಮತ್ತಿತರರಿದ್ದರು.

error: Content is protected !!