ಜಗಳೂರು ತಾ|| ನಲ್ಲಿ 4,200 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ
ಮುಖ್ಯಮಂತ್ರಿ ನೇತೃತ್ವದ ಉನ್ನತ ಸಮಿತಿ ಸಭೆಯಲ್ಲಿ ಹೈಬ್ರಿಡ್ ಪವನ, ಸೌರ ವಿದ್ಯುತ್ ಘಟಕಗಳ ಬೃಹತ್ ಯೋಜನೆಗಳಿಗೆ ಒಪ್ಪಿಗೆ
ಬೆಂಗಳೂರು, ಡಿ. 21 – ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ 4,200 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಬೃಹತ್ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಉನ್ನತ ಸಮಿತಿ ಒಪ್ಪಿಗೆ ನೀಡಿದೆ.
26,659 ಕೋಟಿ ರೂ. ಮೌಲ್ಯದ ಐದು ಹೂಡಿಕೆ ಪ್ರಸ್ತಾವನೆಗಳಿಗೆ ಮುಖ್ಯ ಮಂತ್ರಿಗಳ ನೇತೃತ್ವದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 55ನೇ ಸಭೆಯಲ್ಲಿ ಯೋಜನೆಗಳಿಗೆ ಒಪ್ಪಿಗೆ ನೀಡ ಲಾಗಿದೆ. ಇದರಲ್ಲಿ ಜಗಳೂರು ತಾಲ್ಲೂಕಿನ ಎರಡು ಯೋಜನೆಗಳು ಸೇರಿವೆ.
ಮಿರಾಕ್ಯುಲಮ್ ಗ್ರೀನ್ ಪವರ್ ಕಂಪನಿಯು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ 110 ಮೆಗಾವ್ಯಾಟ್ ಹೈಬ್ರಿಡ್ ಪವನ, ಸೌರ ವಿದ್ಯುತ್ ಘಟಕ ಉತ್ಪಾದಿಸಲು ಅನುಮತಿ ನೀಡಲಾಗಿದೆ. ಇದರಿಂದ 2,820 ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ.
ಜಗಳೂರು ತಾಲ್ಲೂಕಿನಲ್ಲೇ 1,710 ಎಕರೆ ಪ್ರದೇಶದಲ್ಲಿ 2,950 ಕೋಟಿ ರೂ. ಹೂಡಿಕೆ ಮಾಡುವ ಸನಾಲಿ ಪವರ್ ಪ್ರೈವೇಟ್ ಲಿಮಿಟೆಡ್‌ನ ಹೈಬ್ರಿಡ್ ಪವನ, ಸೌರ ವಿದ್ಯುತ್ ಘಟಕಕ್ಕೂ ಒಪ್ಪಿಗೆ ನೀಡಲಾಗಿದೆ. ಇದು 5,640 ಜನರಿಗೆ ಉದ್ಯೋಗ ನೀಡುವ ನಿರೀಕ್ಷೆ ಇದೆ. ಈ ಎರಡೂ ಕಂಪನಿಗಳು ಸ್ಥಾಪನೆಯಾದರೆ 8 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.
ಹುಬ್ಬಳ್ಳಿ – ಧಾರವಾಡದಲ್ಲಿ ಎಲೆಸ್ಟ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ 2 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಮೊದಲ ಯೋಜನೆಯಿಂದ 85 ಎಕರೆ ಜಮೀನಿನಲ್ಲಿ 14,255 ಕೋಟಿ ರೂ.ಗಳ ಘಟಕಗಳು ಸ್ಥಾಪನೆಯಾಗಲಿದ್ದು, 867 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ.
6,339 ಕೋಟಿ ರೂ. ವೆಚ್ಚದಲ್ಲಿ ಲಿಥಿಯಮ್ ಅಯಾನ್ ಸೆಲ್ ಹಾಗೂ ಬ್ಯಾಟರಿ ಉತ್ಪಾದಿಸುವ ಎಲೆಸ್ಟ್ ಕಂಪನಿಯ ಇನ್ನೊಂದು ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. ಇದರಿಂದ 1,804 ಜನರಿಗೆ ಉದ್ಯೋಗ ಸಿಗಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಕೈಗಾರಿಕಾ ವಲಯದಲ್ಲಿ 300 ಎಕರೆ ಪ್ರದೇಶದಲ್ಲಿ ಬ್ಯೂನೆಟ್ ಪ್ರೈವೇಟ್ ಕಂಪನಿಯು ಲಿಥಿಯಮ್ ಬ್ಯಾಟರಿ ಹಾಗೂ ಎಲೆಕ್ಟ್ರಾನಿಕ್ ವಾಹನಗಳನ್ನು ಉತ್ಪಾದಿಸಲು 1,825 ಕೋಟಿ ರೂ. ಹೂಡಿಕೆ ಮಾಡಲು ಅನುಮತಿ ನೀಡಲಾಗಿದೆ. ಇದರಿಂದ 2,210 ಉದ್ಯೋಗಗಳು ದೊರೆಯಲಿವೆ.
ಎಲ್.ಹೆಚ್.ಎಲ್.ಸಿ.ಸಿ. ಸಭೆಯಲ್ಲಿ ಉನ್ನತ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮತ್ತಿತರರು ಉಪಸ್ಥಿತರಿದ್ದರು.
15ರಿಂದ 100 ಕೋಟಿ ರೂ.ಗಳವರೆಗಿನ ಯೋಜನೆಗಳಿಗೆ ಕೈಗಾರಿಕಾ ಸಚಿವರ ನೇತೃತ್ವದ ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮತಿ ಸಮಿತಿ ಒಪ್ಪಿಗೆ ನೀಡುತ್ತದೆ.
100 ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯ ಯೋಜನೆಗಳಿಗೆ ಮುಖ್ಯಮಂತ್ರಿ ನೇತೃತ್ವದ ಸಮಿತಿ ಒಪ್ಪಿಗೆ ನೀಡಬೇಕಾಗುತ್ತದೆ.