ಶಿಕ್ಷಕರಷ್ಟೇ ಅಲ್ಲದೇ ಪೋಷಕರು, ಸಮುದಾಯದವರಿಗೂ ಇದೆ ಹೊಣೆ
ದಾವಣಗೆರೆ, ಡಿ. 21 – ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಶಾಲೆಗಳನ್ನು ಜನವರಿ 1ರಿಂದ ಪುನರಾರಂಭಿಸಲು ಹಾಗೂ ವಿದ್ಯಾಗಮಕ್ಕೆ ಮರು ಚಾಲನೆ ನೀಡಲು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ರಷ್ಟೇ ಅಲ್ಲದೇ ಮಕ್ಕಳು, ಪೋಷಕರು ಹಾಗೂ ಸಮುದಾಯದ ಜನರಿಗೂ ಕೊರೊನಾ ಮುನ್ನೆ ಚ್ಚರಿಕಾ ಹೊಣೆಗಾರಿಕೆಯನ್ನು ವಹಿಸಲಾಗಿದೆ.
ಶಾಲಾ ಪ್ರಾರಂಭಕ್ಕೆ ಮುಂಚೆ ಕೊಠಡಿ, ಉಪಕರಣ, ಆವರಣ, ಲ್ಯಾಬ್, ಗ್ರಂಥಾಲಯ, ಅಕ್ಷರ ದಾಸೋಹ ಅಡುಗೆ ಮನೆ ಇತ್ಯಾದಿಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಜ್ ಮಾಡಲು ತಿಳಿಸಲಾಗಿದೆ. ನೀರಿನ ಟ್ಯಾಂಕ್‌ಗಳಿಂದ ಹಿಡಿದು ಶೌಚಾಲಯದವರೆಗೆ ಸ್ವಚ್ಛತಾ ಕಾರ್ಯಗಳನ್ನು ನಡೆಸಬೇಕು. ಶಾಲೆಗಳಲ್ಲಿ ಸೋಪು, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಹಾಗೂ ಉಷ್ಣಾಂಶ ಪರೀಕ್ಷೆಗೆ ಡಿಜಿಟಲ್ ಥರ್ಮಾ ಮೀಟರ್ ಬಳಸಬೇಕು. ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.
ಕೊರೊನಾ ಲಕ್ಷಣ ಕಂಡು ಬಂದ ವಿದ್ಯಾರ್ಥಿ, ಶಿಕ್ಷಕ ಹಾಗೂ ಸಿಬ್ಬಂದಿಯ ನಿರ್ವಹಣೆಗಾಗಿ ಪ್ರತ್ಯೇಕ ಕೊಠಡಿ ಸಿದ್ಧಪಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ.
ಪೋಷಕರ ಕ್ರಮ : ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಮಗುವನ್ನು ಶಾಲೆಗೆ ಕಳಿಸಬಾರದು. ಮಕ್ಕಳಿಗೆ ಮಾಸ್ಕ್ ಹಾಕಿಯೇ ಶಾಲೆಗೆ ಕಳಿಸಬೇಕು. ಪ್ರತಿದಿನ ಮಾಸ್ಕ್ ಸ್ವಚ್ಛಗೊಳಿಸಬೇಕು. ಅಗತ್ಯವಿರುವಷ್ಟೇ ಪುಸ್ತಕಗಳನ್ನು ಕಳಿಸಬೇಕು. ಪುಸ್ತಕಗಳ ಬ್ಯಾಗಿನ ಜೊತೆಗೆ ಮತ್ತೊಂದು ಬ್ಯಾಗಿನಲ್ಲಿ ಒಂದು ತಟ್ಟೆ, ಟವೆಲ್ ಮತ್ತು ಕಾಯಿಸಿ ಆರಿಸಿದ ನೀರು ಮತ್ತು ಸಾಧ್ಯವಿದ್ದಲ್ಲಿ ಸ್ಯಾನಿಟೈಜರ್ ಬಾಟಲ್ ಕಳಿಸಬೇಕು.
ಶಿಕ್ಷಕರ ಕ್ರಮ : ಗೇಟಿನ ಬಳಿ 3 ಅಡಿ ಅಂತರದ ವೃತ್ತ ಮಾಡಿ ವಿದ್ಯಾರ್ಥಿಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ದಟ್ಟಣೆ ತಪ್ಪಿಸುವ ರೀತಿಯಲ್ಲಿ ವಿದ್ಯಾರ್ಥಿಗಳ ಆಗಮನದ ವೇಳಾಪಟ್ಟಿ. ಆಗಮನ – ನಿರ್ಗಮನಕ್ಕೆ ಪ್ರತ್ಯೇಕ ದಾರಿ. ಸಾಮಾಜಿಕ ಅಂತರಕ್ಕಾಗಿ ವಿದ್ಯಾರ್ಥಿ – ಪಾಲಕರಿಗೆ ಸೂಚನೆ, ಧ್ವನಿವರ್ಧಕಗಳ ಬಳಕೆಗೆ ಅವಕಾಶ. ಅಂತರ ಕಾಯ್ದುಕೊಳ್ಳುವಂತೆ ಬೆಂಚ್ ಹಾಕಿಸಬೇಕು.
ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಒಳಾಂಗಣ ಕ್ರೀಡಾಂಗಣ ಮುಂತಾದ ಕಡೆಗಳಲ್ಲೂ ದೈಹಿಕ ಅಂತರ ಕಾಯ್ದುಕೊಳ್ಳಬೇಕು.
ಶಾಲಾ ವಾಹನ : ಶಾಲಾ ಬಸ್‌ನಲ್ಲಿ ಶೇ.50ರಷ್ಟು ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಬೇಕು. ಬಸ್ಸನ್ನು ಪ್ರತಿದಿನ ಸ್ಯಾನಿಟೈಜ್ ಮಾಡಬೇಕು. ಚಾಲಕರು ಹಾಗೂ ಸಹಾಯಕರು ಮಾಸ್ಕ್ ಧರಿಸಬೇಕು. ಶಾಲಾ ವಾಹನಗಳ ಕಿಟಕಿ ತೆರೆದಿಟ್ಟು ಮುಕ್ತ ಗಾಳಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.
ಸಮುದಾಯದ ಹೊಣೆ : ಶಾಲಾ ಪ್ರಾರಂಭಕ್ಕೆ ವಾರ ಮುಂಚೆ ಎಸ್‌ಡಿಎಂಸಿ, ಆಡಳಿತ ಮಂಡಳಿ, ಪೋಷಕರ ಸಭೆ ಕರೆದು ಕೊರೊನಾ ಕ್ರಮಗಳ ಕುರಿತು ತಿಳಿಸಬೇಕು. ಎಸ್‌ಡಿಎಂಸಿ ಸದಸ್ಯರ ಮೂಲಕ ವಿದ್ಯಾರ್ಥಿಗಳ ಪಾಲಕರಿಂದ ಅಗತ್ಯ ಸಹಕಾರಕ್ಕೆ ಮನವರಿಕೆ ಮಾಡಲು ಕೋರಬೇಕು. ಶುಚಿತ್ವ -ಸೌಲಭ್ಯಗಳ ನಿರ್ವಹಣೆಗೆ ಸಹಕಾರ ಕೇಳಬೇಕು. ಮಾಸ್ಕ್, ಸ್ಯಾನಿಟೈಜರ್, ಸೋಪ್ ಇತ್ಯಾದಿಗಳಿಗೆ ಅಗತ್ಯವಾದಲ್ಲಿ ಸಮುದಾಯ, ಪಾಲಕರು ಮತ್ತು ದಾನಿಗಳಿಂದ ನೆರವು ಪಡೆದುಕೊಳ್ಳಬೇಕು.
ಇದಲ್ಲದೇ ಪ್ರತಿ ಶಾಲೆಯೂ ಕಾರ್ಯ ನಿರ್ವಹಣೆಗೆ ಅಗತ್ಯವಾಗುವ ರೀತಿಯಲ್ಲಿ ಪ್ರತ್ಯೇಕ ಎಸ್‌ಒಪಿ ರೂಪಿಸಿಕೊಳ್ಳಲೂ ಅವಕಾಶ ನೀಡಲಾಗಿದೆ.