ಜ.1 ರಿಂದ ಶಾಲಾರಂಭ

ಬೆಂಗಳೂರು, ಡಿ.19 – ಜನವರಿ 1 ರಿಂದ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ. ಜೊತೆಗೆ 6 ರಿಂದ 9ನೇ ತರಗತಿವರೆಗೆ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಿಸಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ಶಾಲೆ-ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಈ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಕಾರಣದಿಂದ ಕಳೆದ ಎಂಟು ತಿಂಗಳಿನಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ತಜ್ಞರ ವರದಿಯ ಅನುಸಾರ ಮತ್ತೆ ಶಾಲಾ ತರಗತಿಗಳನ್ನು ಪ್ರಾರಂಭಿಸಲು ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಶಾಲೆಗಳನ್ನು ಮರು ಪ್ರಾರಂಭಿಸುವ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು ಎಂದು ಹೇಳಿದ್ದಾರೆ.

ರಾಜ್ಯ ಕೊರೊನಾ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ಮಕ್ಕಳು ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ಕಡ್ಡಾಯ. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೊರೊನಾ ಸೋಂಕಿನ ಲಕ್ಷಣಗಳಿಲ್ಲವೆಂದು ದೃಢೀಕರಿಸ ಬೇಕು ಎಂದು ಸಚಿವರು ತಿಳಿಸಿದ್ದಾರೆ.

ವಸತಿ ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ರುವ ವಿದ್ಯಾರ್ಥಿಗಳು, ಪ್ರವೇಶ ಪಡೆಯುವ 72  ಗಂಟೆಗಳ ಅಂತರದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿ, ನೆಗೆಟಿವ್ ವರದಿಯನ್ನು ಸಲ್ಲಿಸಬೇಕು.

ಶಾಲೆ-ಕಾಲೇಜಿಗೆ ಹಾಜರಾತಿ ಕಡ್ಡಾಯವಲ್ಲ. ವಿದ್ಯಾರ್ಥಿ ಗಳು ಮನೆಯಲ್ಲಿಯೇ ಇದ್ದು ಆನ್ ಲೈನ್, ಯುಟ್ಯೂಬ್ ಚಾನೆಲ್ ಮತ್ತು ಇತರ ಮೂಲಗಳಿಂದಲೂ ಅಭ್ಯಾಸ ಮಾಡಬಹುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಲೆ-ಕಾಲೇಜುಗಳಲ್ಲಿ ತರಗತಿ ಕೊಠಡಿಗಳನ್ನು ಡಿಸ್-ಇನ್ಫೆಕ್ಷನ್ ಮಾಡಿಸುವ ಕುರಿತು ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳಿಗೆ ಅರ್ಧ ದಿನ ಮಾತ್ರ ತರಗತಿ ನಡೆಯಲಿದೆ. ಒಂದು ಕೊಠಡಿಯಲ್ಲಿ ಗರಿಷ್ಠ 15 ವಿದ್ಯಾರ್ಥಿಗಳಿಗೆ ತರಗತಿ ನಡೆಸಬೇಕು. ಬಿಸಿಯೂಟ ವಿತರಣೆ ಇರುವುದಿಲ್ಲ. ಬದಲಿಗೆ ಪ್ರಸ್ತುತ ಜಾರಿಯಲ್ಲಿರುವಂತೆ ಆಹಾರ ಸಾಮಗ್ರಿಯನ್ನು ಒದಗಿಸಲಾಗುವುದು.

ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಯಿತು.

ವಿದ್ಯಾಗಮ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ವಾರಕ್ಕೆ ಎರಡು ಬಾರಿ ಶಾಲೆಗೆ ಹಾಜರಾಗಬೇಕಾಗುವುದು. ಆಸಕ್ತಿ ಇರುವವರಿಗೆ ಮಾತ್ರ ಶಾಲೆಗಳಿಗೆ ಬಂದು ಮಕ್ಕಳು ಪಾಠ ಪ್ರವಚನ ಕೇಳಬಹುದು. ಪರೀಕ್ಷೆಗಳನ್ನು ಎಂದು ನಡೆಸಬೇಕು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.

ಪಠ್ಯಕ್ರಮವನ್ನು ಕಡಿತಗೊಳಿಸುವ ಸಂಬಂಧ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮೊದಲು ಶಾಲೆಗಳು ಆರಂಭವಾಗಿ ಪಾಠ ಪ್ರವಚನಗಳು ನಡೆಯಲಿ. ತಜ್ಞರ ಶಿಫಾರಸ್ಸಿನಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

error: Content is protected !!