ದಾವಣಗೆರೆ, ಡಿ. 20- ಮಹಾನಗರ ಪಾಲಿಕೆ ಯಿಂದ ನಡೆಯುತ್ತಿರುವ `ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ತಿಳಿಸಿದ್ದಾರೆ.
ನಗರದ 18ನೇ ವಾರ್ಡ್ ಕಾಯಿಪೇಟೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವಾರ್ಡ್ನಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ದರದಿಂದ 4,30,468 ರೂ. ಸಂಗ್ರಹವಾಗಿದ್ದು, 26 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದೆ. ಇದರಿಂದ 58,225 ರೂ.ಹಣ ಸಂಗ್ರಹವಾಗಿದೆ ಎಂದು ತಿಳಿಸಿದರು.
ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗಾಗಿ 28 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 6 ಜನನ ಪ್ರಮಾಣ ಪತ್ರ, 4 ಮರಣ ಪ್ರಮಾಣ ಪತ್ರ ಹಾಗೂ 8 ಪ್ರಮಾಣ ಪತ್ರಗಳ ತಿದ್ದುಪಡಿ ಮಾಡಿ ವಿತರಿಸಿದ್ದು, ಇನ್ನುಳಿದ ಪ್ರಮಾಣ ಪತ್ರಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದರು.
ಕಟ್ಟಡ ಪರವಾನಿಗೆ, ಬೀದಿ ದೀಪ, ಇಂಜಿನಿಯರ್ ಶಾಖೆಗೆ ಮತ್ತು ಇತರೆ ದೂರುಗಳಿಗೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಬಂದಿದ್ದು, ಸೂಕ್ತ ದಾಖಲಾತಿಗಳನ್ನು ಪಡೆದು ಸ್ಥಳದಲ್ಲಿಯೇ ಕೆಲಸ ಮಾಡಿಕೊಡಲಾಗುತ್ತಿದೆ. ವಾರದಲ್ಲಿ ಮೂರು ದಿನ ನಿಗದಿಪಡಿಸಿದ ವಾರ್ಡ್ಗಳಿಗೆ ಭೇಟಿ ನೀಡುತ್ತಿದ್ದು ಆಯ ವಾರ್ಡ್ನ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದೇವೆ. ಈ ವಿಶೇಷ ಕಾರ್ಯಕ್ರಮಕ್ಕೆ ಜನತೆ ಆಗಮಿಸಿ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
18ನೇ ವಾರ್ಡ್ನ ಸದಸ್ಯರಾದ ಸೋಗಿ ಶಾಂತ್ಕುಮಾರ್ ಸೇರಿದಂತೆ ಇತರರು ಇದ್ದರು.