ಸಮಾಜಕ್ಕೆ ಅರಿವು ಮೂಡಿಸುವ ಹರ ಜಾತ್ರೆ

ಹರಿಹರ, ಡಿ.20- ಬರುವ ಜನವರಿ 14-15 ರಂದು ಎರಡು ದಿನಗಳ ಕಾಲ ಪಂಚಮಸಾಲಿ ಪೀಠದ ಆವರಣದಲ್ಲಿ ನಡೆಯುವ ವರ್ಚುವಲ್  ಹರ ಜಾತ್ರೆ ಆಯೋಜಿಸಲಾಗಿದ್ದು, ಇತರೆ ಜಾತ್ರೆಗಳಂತೆ ರಥೋತ್ಸವದ ಜಾತ್ರೆ ನಡೆಸದೆ ಯೋಗ ವಿಜ್ಞಾನ ಶಿಬಿರ, ಭೂ ತಪಸ್ವಿ ಸಮಾವೇಶ, ಹಾಗೂ ಯುವ ರತ್ನ ಸಮಾವೇಶ ನಡೆಸಿ ಜನತೆಯಲ್ಲಿ ಅರಿವು ಮೂಡಿಸುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಲಾಗುವುದು ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮೀಜಿ ಹೇಳಿದರು.

ನಗರದ ಹೊರವಲಯದಲ್ಲಿರುವ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಜಾತ್ರೆ ನಡೆಸಲಾಗುವುದು ಎಂದರು.

ಸಮಾಜದ ಬೆಳವಣಿಗೆ ದೃಷ್ಟಿಯಿಂದ ಬೆಳಗ್ಗೆ 6 ರಿಂದ 7ಗಂಟೆ ವರೆಗೆ ಯೋಗ ಶಿಬಿ ನಡೆಸಲಾಗುವುದು. ಕೃಷಿಯಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಕರೆಸಿ ಅವರಿಂದ ಸಮಾಜದ ಕೃಷಿಕರಿಗೆ ಜಾಗೃತಿ ಮೂಡಿಸಲು ಬೆಳಗ್ಗೆ 11 ರಿಂದ  2 ರವರೆಗೆ  `ಭೂ ತಪಸ್ವಿ’ ಸಮಾವೇಶ ಹಾಗೂ ಯುವಕರಿಗೆ  3 ರಿಂದ 5ರವರೆಗೆ  `ಯುವರತ್ನ ಸಮಾವೇಶ’ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

 ದಿ.15 ರಂದು ಮೀಸಲಾತಿ ವಿಚಾರದ ಬಗ್ಗೆ  `ಅಂದು, ಇಂದು, ಮುಂದು’ ಎಂಬ   ಮೀಸಲಾತಿ ವಿಚಾರ ಸಂಕಿರಣ ಆಯೋಜಿಸಸಲಾಗುವುದು. ಈ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಮಾಜಿ ಸಿ.ಎಂ. ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ತಾವರಕರ್ ಗ್ಲೋವೇಟ್ ಮತ್ತು ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರನ್ನು ಆಹ್ವಾನಿಸಲಾಗಿದೆ ಎಂದರು.

ಕಳೆದ ವರ್ಷದ ಹರ ಜಾತ್ರೆಯಿಂದಾಗಿ ಪಂಚಮಸಾಲಿಗರು ಯಾರೆಂದು ಜನತೆಗೆ ತಿಳಿದಿದೆ. ಹಿಂದಿನ ವರ್ಷದ ಜಾಗ್ರತೆ ಹಿಮ್ಮಡಿಸಲು ಈ ಬಾರಿಯೂ ಹರ ಜಾತ್ರೆ ನಡೆಯಲಿದೆ ಎಂದರು. ಕಳೆದ ವರ್ಷ 4 ಲಕ್ಷ ಸಮಾಜ ಬಾಂಧವರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಈ ಬಾರಿ ಆನ್‌ಲೈನ್ ಮೂಲಕ ಮನೆಯಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಪಂಚಮಸಾಲಿಗರನ್ನು ಉತ್ತರ ಕರ್ನಾಟಕದ ಭಾಗದಲ್ಲಿ ಪಂಚಮಸಾಲಿ, ದಕ್ಷಿಣ ಕರ್ನಾಟಕ ಭಾಗದಲ್ಲಿ ಲಿಂಗಾಯತ ಗೌಡ್ರು, ಕರಾವಳಿ ಭಾಗದಲ್ಲಿ ಗೌಳಿ ಲಿಂಗಾಯತ, ಮಲೆನಾಡು ಭಾಗದಲ್ಲಿ ಮಲೆಗೌಡ್ರು ಎಂದು ಕರೆಯಲಾಗುತ್ತದೆ.  ಮುಂದಿನ ದಿನಗಳಲ್ಲಿ ಮೈಸೂರು ಭಾಗದಿಂದ ಗ್ರಾಮ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಸಮಾಜವನ್ನು ಇನ್ನೂ ಸದೃಢಗೊಳಿಸಲಾಗುತ್ತದೆ ಎಂದು ಹೇಳಿದರು.

ಹರ ಜಾತ್ರಾ ಮಹೋತ್ಸ ಸಮಿತಿ ಅಧ್ಯಕ್ಷ ಬಿ. ಲೋಕೇಶ್ ಮಾತನಾಡಿ, ಈ ಬಾರಿ ಕೋವಿಡ್ ಇರುವುದರಿಂದ ಹರ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತದೆ. ಆದಾಗ್ಯೂ ಸುಮಾರು 15 ಸಾವಿರಕ್ಕೂ ಹೆಚ್ಚು ಸಮಾಜದ ಭಕ್ತರು ಪಾಲ್ಗೊಳ್ಳಲಿದ್ದಾರೆ. ಅವರಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಪೀಠದ ಆವರಣದಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೀಠದ ಧರ್ಮದರ್ಶಿ ಬಿ.ಸಿ. ಉಮಾಪತಿ, ಪಿ.ಡಿ. ಶಿರೂರು ಹಾವೇರಿ, ಹೆಚ್.ಪಿ. ಬಾಬಣ್ಣ, ವಾಣಿ ಶಿವಣ್ಣ, ಬೆಳಗಾವಿ ರಾಜು, ಅಂದನೂರು ಮುರುಗೇಶಪ್ಪ, ಚಂದ್ರಶೇಖರ್ ಪೂಜಾರ್, ಕರಿಬಸಪ್ಪ ಇತರರು ಹಾಜರಿದ್ದರು.

error: Content is protected !!