ತಾಣವೆಲ್ಲಿದೆ ಕಟ್ಟಡ ತ್ಯಾಜ್ಯಕ್ಕೆ?

ರಸ್ತೆ – ಹೆದ್ದಾರಿಗಳ ಬದಿ ಬಂದು ಬೀಳುತ್ತಿದೆ ತ್ಯಾಜ್ಯ

ದಾವಣಗೆರೆ, ಡಿ. 20 – ಊರೆಂದ ಮೇಲೆ ಹೊಲಗೇರಿ ಇದ್ದದ್ದೆ, ಮನೆ ಕಟ್ಟುವುದು ಎಂದ ಮೇಲೆ ತ್ಯಾಜ್ಯ ಉತ್ಪಾದನೆ ಅನಿವಾರ್ಯ. ಅಂತಹ ಅನಿವಾರ್ಯವಾದ ಕಸವನ್ನು ಏನು ಮಾಡುವುದು? ಎಂಬ ಪ್ರಶ್ನೆಗೆ ಪಾಲಿಕೆ ಇನ್ನೂ ಉತ್ತರ ಕಂಡುಕೊಂಡಿಲ್ಲ.

ನಿತ್ಯ ಉತ್ಪತ್ತಿಯಾಗುವ ಕಸವನ್ನು ಮನೆ ಮನೆಯಿಂದ ಸಂಗ್ರಹಿಸಲು ಹಾಗೂ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇತ್ತೀಚೆಗೆ ಪ್ಲಾಸ್ಟಿಕ್ ಕಸವನ್ನು ಸಿಮೆಂಟ್ ಕಾರ್ಖಾನೆಗೂ ರವಾನಿಸಲಾಗಿದೆ. ಆದರೆ, ಕಟ್ಟಡ ನಿರ್ಮಾಣದ ಅದರಲ್ಲೂ ಕಟ್ಟಡ ಮರು ನಿರ್ಮಾಣದ ಸಂದರ್ಭದಲ್ಲಿ ಉಂಟಾಗುವ ರಾಶಿ ರಾಶಿ ಕಸದ ವಿಲೇವಾರಿಗೆ ಇನ್ನೂ ವ್ಯವಸ್ಥೆ ಮಾಡದೇ ಇರುವುದು ಸ್ವಚ್ಛತೆಗೆ ಹಿನ್ನಡೆ ತಂದಿದೆ.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಗಳಲ್ಲೂ ಹಲವು ಬಾರಿ ಕಟ್ಟಡ ತ್ಯಾಜ್ಯದ ವಿಷಯ ಪ್ರಸ್ತಾವನೆ ಯಾಗಿದೆ. ಸ್ಮಾರ್ಟ್ ಸಿಟಿ ಹಾಗೂ ನಗರ ಪಾಲಿಕೆ ಗಳೆರಡೂ ಸೇರಿಕೊಂಡು ಕಟ್ಟಡ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಗುರುತಿಸಬೇಕೆಂಬ ತೀರ್ಮಾನವೂ ಸಭೆಯಲ್ಲಿ ಆಗಿತ್ತು. ಆದರೆ, ಅಂತಹ ಜಾಗ ಗುರುತಿಸಲು ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

ಕಟ್ಟಡ ತ್ಯಾಜ್ಯ ವಿಲೇವಾರಿಗೆ ಜಾಗ ಇನ್ನೂ ಗುರುತಿಸಿಲ್ಲ. ತ್ಯಾಜ್ಯವನ್ನು ರಸ್ತೆಗಳ ಪಕ್ಕ ಎಸೆಯುತ್ತಿರುವುದು ಗಮನಕ್ಕೆ ಬಂದಿದೆ. ಜಾಗವನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ.

ಊರು ಬೆಳೆಯುತ್ತಾ ಸಾಗಿದಂತೆ ಊರಲ್ಲಿರುವ ಸೀಮಿತ ಜಾಗಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಹಳೆಯದಾದ ಕಟ್ಟಡಗಳ ಮರು ನಿರ್ಮಾಣವೂ ಚುರುಕಿನಲ್ಲಿದೆ. ಇದೆಲ್ಲದರಿಂದ ಕಟ್ಟಡ ತ್ಯಾಜ್ಯದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಅಂದಾಜಿನ ಪ್ರಕಾರ 20×30 ಅಡಿ ಅಳತೆಯ ಪುಟ್ಟ ಮನೆ ಧ್ವಂಸಗೊಳಿಸಿದಾಗಲೂ 10 ಲಾರಿಯಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತದೆ.

ಈ ತ್ಯಾಜ್ಯದಲ್ಲಿ ಕಬ್ಬಿಣ ಮಾತ್ರ ಮರು ಬಳಕೆಗೆ ಗುಜರಿಯವರು ಪಡೆದುಕೊಳ್ಳುತ್ತಿದ್ದಾರೆ. ಉಳಿದ ಎಲ್ಲ ಕಟ್ಟಡ ತ್ಯಾಜ್ಯ ನಿರುಪಯುಕ್ತವಾಗಿದೆ. ಇದೆಲ್ಲವನ್ನೂ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ನಗರದ ಹೊರ ವಲಯದ ಹೆದ್ದಾರಿ, ರಸ್ತೆ ಪಕ್ಕದ ಜಾಗದಲ್ಲಿ ಸುರಿಯಲಾಗುತ್ತಿದೆ. ನಗರದ ಕೆಲವೆಡೆಗಳ ತಗ್ಗು ಪ್ರದೇಶಗಳಲ್ಲೂ ಸುರಿಯುವ ಪ್ರವೃತ್ತಿ ಇದೆ.

ಶಿರಮಗೊಂಡನಹಳ್ಳಿಗೆ ಸಾಗುವ ಮಾರ್ಗದಲ್ಲಿ ಹಲವೆಡೆ ಚಾನಲ್ ಪಕ್ಕದಲ್ಲೇ ಕಟ್ಟಡ ತ್ಯಾಜ್ಯ ಸುರಿಯಲಾಗುತ್ತಿದೆ. ಕಟ್ಟಡ ತ್ಯಾಜ್ಯವಷ್ಟೇ ಅಲ್ಲದೇ ಬೆಡ್ ಇತ್ಯಾದಿ ಗೃಹ ತ್ಯಾಜ್ಯಗಳನ್ನೂ ಸಾರಾ ಸಗಟಾಗಿ ತಂದು ಎಸೆಯಲಾಗುತ್ತಿದೆ. ಈ ಕಸದ ರಾಶಿ ಹಂದಿಗಳಿಗೂ ಆಹ್ವಾನ ನೀಡುತ್ತಿದೆ.

ಯಾರಾದರೂ ಈ ಕಟ್ಟಡ ತ್ಯಾಜ್ಯವನ್ನು ಎಸೆಯಬೇಡಿ ಎಂದು ಹೇಳಿದರೆ ಅವರನ್ನೇ ದಬಾಯಿಸುವುದೂ ನಡೆದಿದೆ. ಇಲ್ಲವಾದರೆ ಯಾರೂ ಇಲ್ಲದ ಸಮಯದಲ್ಲಿ ತ್ಯಾಜ್ಯವನ್ನು ಸುರಿಯಲಾಗುತ್ತದೆ. ಯಾರಾದರೂ ಕೇಳಿದರೆ ಇದು ಸರ್ಕಾರಿ ಜಾಗ ಎಂದು ಸಬೂಬು ಹೇಳಲಾಗುತ್ತಿದೆ.

error: Content is protected !!