ಫೆಬ್ರವರಿ ಒಳಗೆ ಸಂಪೂರ್ಣ ಅನುದಾನ ಬಳಕೆಗೆ ಡಿಸಿ ಬೀಳಗಿ ಸೂಚನೆ
ದಾವಣಗೆರೆ, ಡಿ. 18 – ಪರಿಶಿಷ್ಟ ಜಾತಿ ಹಾಗೂ ಪಂಗಡಗಳವರಿಗೆ ಮೀಸಲಾಗಿರುವ ಎಸ್‌ಸಿಪಿ – ಟಿಎಸ್‌ಪಿ ಅನುದಾನ ಬಳಕೆಗೆ 2020ರ ಆರಂಭದಲ್ಲಿ ಕೊರೊನಾ ನಂತರ ಮಳೆಗಾಲದ ಅಡ್ಡಿ ಆನಂತರದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯ ನೀತಿ ಸಂಹಿತೆಯ ತೊಡಕು ಎದುರಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿ ಕಾರಿ ಮಹಾಂತೇಶ್ ಬೀಳಗಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಎಸ್‌ಸಿಪಿ – ಟಿಎಸ್‌ಪಿ ಅನುದಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವಾರು ಅಧಿಕಾರಿಗಳು ಅನುದಾನ ಬಳಕೆಗೆ ನೀತಿ ಸಂಹಿತೆಯ ಕಾರಣ ಮುಂದೆ ಮಾಡಿದರು.
ಜಿಲ್ಲೆಯಲ್ಲಿ ಒಟ್ಟಾರೆ ಎಸ್‌ಸಿಪಿ ಅನುದಾನದಲ್ಲಿ ಶೇ.57.02ರಷ್ಟು ಹಾಗೂ ಟಿಎಸ್‌ಪಿ ಅನುದಾನದಲ್ಲಿ ಶೇ.66.20ರಷ್ಟು ಮಾತ್ರ ಬಳಕೆಯಾಗಿದೆ ಎಂಬುದನ್ನು ಗಮನಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮುಂಬರುವ ದಿನಗಳಲ್ಲಿ ಚುರುಕಾಗಿ ಅನುದಾನ ಬಳಸಿಕೊಳ್ಳುವಂತೆ ತಿಳಿಸಿದರು.
ಮಳೆಗಾಲ ಹಾಗೂ ಕೊರೊನಾ ಕಾರಣದಿಂದಾಗಿ ಅನುದಾನದ ಬಳಕೆಯಲ್ಲಿ ಹಿನ್ನಡೆಯಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ ಬೀಳಗಿ, ಜನವರಿ – ಫೆಬ್ರವರಿ ಒಳಗೆ ಅನುದಾನ ಬಳಕೆಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳಿಗೆ ನೋಟಿಸ್ : ಕಾರ್ಮಿಕ ಇಲಾಖೆ, ಯುವಜನ ಕ್ರೀಡಾ ಇಲಾಖೆ, ಭಾರೀ ನೀರಾವರಿ ಇಲಾಖೆ ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು ಪ್ರಗತಿ ಕಡಿಮೆ ಮಾಡಿರುವ ಜೊತೆಗೆ ಸಭೆಗೆ ಹಾಜರಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಬೀಳಗಿ, ಇವರಿಗೆ ನೋಟಿಸ್ ಕಳಿಸುವಂತೆ ತಿಳಿಸಿದರು.
ದಾವಣಗೆರೆ ವಿ.ವಿ.ಗೆ ಬೇಕಿರುವುದು 2.50 ಕೋಟಿ ರೂ., ಕೊಟ್ಟಿದ್ದು 50 ಲಕ್ಷ ರೂ.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳ ಯೋಜನೆಗಳಿಗೆ 2.50 ಕೋಟಿ ರೂ. ಅಗತ್ಯವಿದೆ. ಆದರೆ, ಸರ್ಕಾರ ಬಿಡುಗಡೆ ಮಾಡಿರುವುದು ಕೇವಲ 50 ಲಕ್ಷ ರೂ. ವಿಶ್ವವಿದ್ಯಾನಿಲಯದ ಎಸ್ಸಿ – ಎಸ್ಟಿ ಸೆಲ್ನ ಪ್ರೊ. ಲಕ್ಷ್ಮಣ್ ಅವರು ಸಭೆಗೆ ಈ ವಿಷಯ ತಿಳಿಸಿ, 28 ಪಿಹೆಚ್ಡಿ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಲಿಕ್ಕಾಗಿಯೇ 60 ಲಕ್ಷ ರೂ. ಬೇಕು. ಹೀಗಿರುವಾಗ ವಿದ್ಯಾರ್ಥಿಗಳಿಗೆ ಅನುದಾನದ ತೀವ್ರ ಕೊರತೆಯಾಗಿದೆ ಎಂದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರಕ್ಕೆ ವಿವರಗಳೊಂದಿಗೆ ಶಿಫಾರಸ್ಸು ಮಾಡಿ ಕಳಿಸುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಅತಿ ವೇಗದ ಪ್ರಗತಿಗೆ ಅಚ್ಚರಿ : ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂ ತರ ರಾಘವೇಂದ್ರ ಅವರು, ಎಸ್‌ಸಿಪಿ – ಟಿಎಸ್‌ಪಿ ಅನುದಾನದ ಶೇ.100ರಷ್ಟು ಬಳಕೆ ಈಗಾಗಲೇ ಪೂರ್ಣಗೊಂಡಿದೆ ಎಂದು ಹೇಳಿದ್ದು ಜಿಲ್ಲಾಧಿಕಾರಿ ಬೀಳಗಿ ಅವರ ಅಚ್ಚರಿಗೆ ಕಾರಣವಾಯಿತು. ಅನುದಾನದಲ್ಲಿ 13 ಕಡೆಗಳಲ್ಲಿ ಚೆಕ್‌ಡ್ಯಾಂಗಳನ್ನು ಕಟ್ಟಲಾಗಿದೆ. ಪ್ರತಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಸುಮಾರು ಮೂರು ತಿಂಗಳು ಸಮಯ ಬೇಕಾಯಿತು ಎಂದು ಅಧಿಕಾರಿ ವಿವರ ನೀಡಿದರು.
ಕೊರೊನಾ ಹಾಗೂ ಮಳೆಗಾಲದ ಕಾರಣದಿಂದಾಗಿ ಕಾಮಗಾರಿಗಳು ವಿಳಂಬವಾಗಿವೆ. ಹೀಗಿರುವಾಗ ನೀವು ಯಾವಾಗ ಕೆಲಸ ಮಾಡಿಸಿದಿರಿ? ಈ ಎಲ್ಲ ಚೆಕ್‌ಡ್ಯಾಮ್‌ಗಳ ಬಗ್ಗೆ ಪರಿಶೀಲಿಸಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಅವರಿಗೆ ತಿಳಿಸಿದರು.
ಪಾಲಿಕೆಯಿಂದ ಐಎಎಸ್ ತರಬೇತಿ : ಪಾಲಿಕೆಯಲ್ಲಿರುವ ಎಸ್‌ಸಿಪಿ – ಟಿಎಸ್‌ಪಿಯ 12 ಲಕ್ಷ ರೂ.ಗಳ ಹಣ ಬಳಸಿಕೊಂಡು ಪ್ರತಿ ಭಾವಂತ ವಿದ್ಯಾರ್ಥಿಗಳಿಗೆ ಐಎಎಸ್ ಪರೀ ಕ್ಷೆಯ ತರಬೇತಿ ಕೊಡಿಸುವಂತೆ ಡಿಸಿ ಬೀಳಗಿ ಅವರು ಸಭೆಯಲ್ಲಿದ್ದ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಜೆಡಿಎ ಶ್ರೀನಿವಾಸ್ ಚಿಂ ತಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ಆಯುಕ್ತ ಕೆ.ಎಸ್.ವಿಜಯ್ ಕುಮಾರ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಸಮಾಜ ಕಲ್ಯಾಣ ಇಲಾ ಖೆಯ ಉಪ ನಿರ್ದೇಶಕಿ ರೇಷ್ಮಾ ಕೌಸರ್, ಡಿಡಿಪಿಐ ಪರಮೇಶ್ವರಪ್ಪ ಮತ್ತಿತರರಿದ್ದರು.