ಕಾಯ್ದೆಗಳು ರಾತ್ರೋ ರಾತ್ರಿ ಉದ್ಭವಿಸಿಲ್ಲ

ನನಗೆ ಹೆಸರು ಬರುತ್ತದೆ ಎಂದು ಪ್ರತಿಪಕ್ಷಗಳಿಂದ ಪ್ರತಿಭಟನೆ

ಭೂಪಾಲ್, ಡಿ. 18 – ರಾಜಕೀಯ ಪಕ್ಷಗಳು, ಪರಿಣಿತರು ಹಾಗೂ ರೈತರು ಸುದೀರ್ಘ ಕಾಲದಿಂದ ನೂತನ ಕೃಷಿ ಕಾಯ್ದೆಗಳಿಗೆ ಒತ್ತಾಯಿಸುತ್ತಿದ್ದರು. ಕೃಷಿ ಕಾಯ್ದೆಗಳು ರಾತ್ರೋ ರಾತ್ರಿ ಉದ್ಭವಿಸಿದವುಗಳಲ್ಲ ಎಂದು ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರೆಯಲಿದೆ ಎಂದು ಭರವಸೆ ನೀಡಿದ್ದಾರೆ.

ಆನ್‌ಲೈನ್ ಮೂಲಕ ಮಧ್ಯ ಪ್ರದೇಶದ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ, ಇದೇ ರೀತಿಯ ಕಾಯ್ದೆಗಳನ್ನು ಪ್ರತಿಪಕ್ಷಗಳೂ ಪ್ರಸ್ತಾಪಿಸುತ್ತಿದ್ದವು. ಆದರೆ, ಈಗ ಸುಧಾರಣೆಯ ಶ್ರೇಯ ನಾನು ಪಡೆಯುತ್ತೇನೆ ಎಂಬ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.

ಸರ್ಕಾರ ರೈತರ ಜೊತೆ 24 ಗಂಟೆಗಳ ಮಾತುಕತೆಗೆ ಸಿದ್ಧವಿದೆ ಎಂದೂ ಪ್ರಧಾನಿ ತಿಳಿಸಿದ್ದಾರೆ. ದೆಹಲಿಯಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಈಗ 23ನೇ ದಿನಕ್ಕೆ ಕಾಲಿಟ್ಟಿದೆ.

ನೂತನ ಕೃಷಿ ಕಾಯ್ದೆಗಳು ರಾತ್ರೋ ರಾತ್ರಿ ಉದ್ಭವಿಸಿಲ್ಲ. ರಾಜಕೀಯ ಪಕ್ಷಗಳು, ಕೃಷಿ ಪರಿಣಿತರು ಹಾಗೂ ಪ್ರಗತಿಪರ ರೈತರು ಈ  ಬಗ್ಗೆ ಸುದೀರ್ಘ ಕಾಲದಿಂದ ಒತ್ತಾಯಿಸುತ್ತಿದ್ದರು. ಕಳೆದ 20-22 ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಸುಧಾರಣೆ ಬಗ್ಗೆ ಚರ್ಚಿಸಿವೆ. ರೈತ ಸಂಘಟನೆಗಳು, ಕೃಷಿ ವಿಜ್ಞಾನಿಗಳು ಹಾಗೂ ರೈತರು ನಿರಂತರವಾಗಿ ಈ ಬಗ್ಗೆ ಒತ್ತಾಯಿಸುತ್ತಾ ಬಂದಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಈಗ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ಪಕ್ಷಗಳೇ ತಮ್ಮ ಪ್ರಣಾಳಿಕೆಗಳಲ್ಲಿ ಮತ ಗಳಿಸುವ ಸಲುವಾಗಿ ಸುಧಾರಣೆಗಳ ಭರವಸೆ ಏಕೆ ನೀಡಿದ್ದವು ಎಂಬುದನ್ನು ರೈತರು ಪ್ರಶ್ನಿಸಬೇಕಿದೆ. ಮತಗಳಿಗಾಗಿ ಭರವಸೆ ನೀಡುತ್ತಿದ್ದ ಅವರು, ಎಂದೂ ಭರವಸೆ ಈಡೇರಿಸಲಿಲ್ಲ. ಇದು ಅವರ ಆದ್ಯತೆಯೇ ಆಗಿರಲಿಲ್ಲ ಎಂದು ಪ್ರಧಾನಿ ಟೀಕಿಸಿದ್ದಾರೆ.

ಮೋದಿ ಕೃಷಿ ಸುಧಾರಣೆ ಮಾಡಿರುವುದೇ ಅವರಿಗೆ ಸಮಸ್ಯೆಯಾಗಿದೆ. ಮೋದಿ ಏಕೆ ಈ ಹೆಗ್ಗಳಿಕೆ ಪಡೆಯಬೇಕು ಎಂದು ಅವರು ಯೋಚಿಸುತ್ತಿದ್ದಾರೆ. ಅವರು ತಮ್ಮ ಪ್ರಣಾಳಿಕೆಗೇ ಹೆಗ್ಗಳಿಕೆ ಕೊಡಲಿ, ನನಗೆ ಬೇಡ. ನಾನು ರೈತರ ಪ್ರಗತಿ ಬಯಸುತ್ತೇನಷ್ಟೇ. ಈ ವಿಷಯದಲ್ಲಿ ಅವರ ದಾರಿ ತಪ್ಪಿಸುವುದನ್ನು ಬಿಡಿ ಎಂದು ಕೇಳಿದ್ದಾರೆ.

ನೀವು ಅವರ ಪ್ರಣಾಳಿಕೆಯನ್ನು ನೋಡಿದರೆ ಈಗ ಜಾರಿಗೆ ತಂದಿರುವ ಸುಧಾರಣೆಗಳಿಗೂ ಅವರು ನೀಡಿದ ಭರವಸೆಗಳಿಗೂ ವ್ಯತ್ಯಾಸ ಕಾಣುವುದಿಲ್ಲ ಎಂದವರು ಹೇಳಿದ್ದಾರೆ.

ಪ್ರತಿಪಕ್ಷಗಳು ರೈತರ ಹೆಗಲ ಮೇಲೆ ಬಂದೂಕಿಟ್ಟು ಸರ್ಕಾರದ ಮೇಲೆ ಹಾರಿಸುತ್ತಿದ್ದಾರೆ ಎಂದು ಆರೋಪಿಸಿರುವ ಮೋದಿ, ಕೃಷಿ ಕಾಯ್ದೆಯಲ್ಲಿ ಏನು ಸಮಸ್ಯೆ ಇದೆ ಎಂದು ನಾವು ಪದೇ ಪದೇ ಕೇಳುತ್ತಿದ್ದೇವೆ. ಆದರೆ, ಅವರ ಬಳಿ ಉತ್ತರವಿಲ್ಲ ಎಂದಿದ್ದಾರೆ.

ದೇಶದಲ್ಲಿ ರಾಜಕೀಯ ನೆಲೆ ಕಳೆದುಕೊಂಡವರು ರೈತರು ತಮ್ಮಿಂದ ದೂರವಾಗುತ್ತಾರೆ ಎಂದು ಅವರ ದಾರಿ ತಪ್ಪಿಸುತ್ತಿದ್ದಾರೆ. ಈ ರಾಜಕೀಯ ಪಕ್ಷಗಳ ಬಣ್ಣ ಬಯಲು ಮಾಡುತ್ತೇನೆ. ಸ್ವಾಮಿನಾಥನ್ ವರದಿ ಇದಕ್ಕೊಂದು ಉದಾಹರಣೆಯಾಗಿದೆ. ವರದಿ ಬಂದಾಗ, ಅವರು ಎಂಟು ವರ್ಷಗಳ ಕಾಲ ಸುಮ್ಮನೆ ಇದ್ದರು. ರೈತರು ಪ್ರತಿಭಟನೆ ನಡೆಸಿದಾಗಲೂ ಲೆಕ್ಕಿಸಲಿಲ್ಲ. ರೈತರಿಗೆ ಹೆಚ್ಚು ಹಣ ಕೊಡಲು ಅವರು ಸಿದ್ಧವಿರಲಿಲ್ಲ ಎಂದು ಪ್ರಧಾನಿ ತರಾಟೆಗೆ ತೆಗೆದುಕೊಂಡರು.

ನಮ್ಮ ಸರ್ಕಾರ ರೈತರನ್ನು ಅನ್ನದಾತರೆಂದು ಪರಿಗಣಿಸಿದೆ. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತಂದಿದೆ. ನಾವು ಕೃಷಿ ವೆಚ್ಚದ 1.5 ಪಟ್ಟು ಹೆಚ್ಚಿನದನ್ನು ಬೆಂಬಲ ಬೆಲೆಯಾಗಿ ನಿಗದಿ ಪಡಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ರದ್ದುಗೊಳಿಸಲಾಗುತ್ತದೆ ಎಂದು ಹೆದರಿಕೆ ಹುಟ್ಟಿಸಲಾಗುತ್ತಿದೆ. ನಮ್ಮ ಸರ್ಕಾರ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಗಂಭೀರತೆ ಹೊಂದಿದ್ದು, ಬಿತ್ತನೆಗೆ ಮೊದಲೇ ಬೆಂಬಲ ಬೆಲೆ ಘೋಷಿಸುತ್ತಿದೆ ಎಂದವರು ಸಮರ್ಥಿಸಿಕೊಂಡರು.

ಕಳೆದ ಆರು ತಿಂಗಳಲ್ಲಿ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದ ನಂತರ, ಕೊರೊನಾ ವೈರಸ್ ನಡುವೆಯೂ ಹೆಚ್ಚಿನ ಪ್ರಮಾಣದ ಧಾನ್ಯಗಳನ್ನು ಖರೀದಿಸಲಾಗಿದೆ. ಬುದ್ದಿ ಇರುವ ಯಾರೂ ಕನಿಷ್ಠ ಬೆಂಬಲ ಬೆಲೆ ರದ್ದುಗೊಳಿಸುವ ವಾದವನ್ನು ಒಪ್ಪುವುದಿಲ್ಲ ಎಂದು ಮೋದಿ ತಿಳಿಸಿದರು.

ಎಪಿ.ಎಂ.ಸಿ.ಗಳ ಬಗ್ಗೆಯೂ ಅಪಪ್ರಚಾರ ಮಾಡಲಾಗುತ್ತಿದೆ. ನೂತನ ಕಾಯ್ದೆಯ ಅನ್ವಯ ರೈತರು ತಮ್ಮ ಉತ್ಪನ್ನಗಳನ್ನು ಈಗಿರುವ ಎ.ಪಿ.ಎಂ.ಸಿ.ಗಳಲ್ಲಿಯೂ ಮಾರಬಹುದು. ಕಳೆದ ಆರು ತಿಂಗಳಲ್ಲಿ ಒಂದೇ ಒಂದು ಮಂಡಿಯನ್ನೂ ಮುಚ್ಚಿಲ್ಲ. ಮತ್ತೊಂದೆಡೆ ಸರ್ಕಾರ ಮಂಡಿಗಳ ಆಧುನೀಕರಣಕ್ಕೆ 500 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದವರು ಹೇಳಿದ್ದಾರೆ.

ರೈತರು ಹಾಗೂ ಖಾಸಗಿ ಸಂಸ್ಥೆಗಳ ನಡುವೆ ಒಪ್ಪಂದ ಮಾಡಿಕೊಳ್ಳಲು ಕೃಷಿ ಕಾಯ್ದೆಯಲ್ಲಿ ಅವಕಾಶ ಇರುವುದರ ಕುರಿತು ಪ್ರಸ್ತಾಪಿಸಿದ ಮೋದಿ, ಈ ಹಿಂದೆಯೂ ಇಂತಹ ಒಪ್ಪಂದಕ್ಕೆ ಅವಕಾಶವಿತ್ತು. ಈಗ ಖಾಸಗಿ ಸಂಸ್ಥೆಗಳ ಮೇಲಿನ ನಿಯಂತ್ರಣ ಹೆಚ್ಚಿಸಲಾಗಿದೆ. ನಷ್ಟವಾದರೂ ಸಹ ಖಾಸಗಿ ಸಂಸ್ಥೆಗಳು ಒಪ್ಪಂದದಿಂದ ನುಣುಚಿಕೊಳ್ಳುವಂತಿಲ್ಲ ಎಂದು ಮೋದಿ ತಿಳಿಸಿದ್ದಾರೆ.

error: Content is protected !!