9 ರಿಂದ 12ನೇ ತರಗತಿ ಜ.1 ರಿಂದ ಆರಂಭ

9 ರಿಂದ 12ನೇ ತರಗತಿ ಜ.1 ರಿಂದ ಆರಂಭ - Janathavaniಸರ್ಕಾರದಿಂದ ಇಂದು ಮಹತ್ವದ ನಿರ್ಧಾರದ ನಿರೀಕ್ಷೆ

ಬೆಂಗಳೂರು, ಡಿ. 18 – ಜನವರಿ 1 ರಿಂದ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸರ್ಕಾರ ನಾಳೆ ಮಹತ್ವದ ತೀರ್ಮಾನ ಕೈಗೊಳ್ಳಲಿದೆ. ಶಾಲೆಗಳು 9 ರಿಂದ 12ನೇ ತರಗತಿವರೆಗಿನ ತರಗತಿಗಳನ್ನು ಆರಂಭಿಸುವ ಸಾಧ್ಯತೆ ಇದೆ. 

ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್‍ಕುಮಾರ್ ಪಾಂಡೆ, ಶಿಕ್ಷಣ ಇಲಾಖೆಗೆ ಪತ್ರ ಬರೆದು, ತರಗತಿಗಳನ್ನು ಆರಂಭಿಸಬಹುದೆಂದು ತಿಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಹಾಗೂ ಗೃಹ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದಾರೆ. 

ಈಗಾಗಲೇ ಶಿಕ್ಷಣ ಇಲಾಖೆ ಹೊಣೆ ಹೊತ್ತಿರುವ ಸಚಿವ ಸುರೇಶ್‍ಕುಮಾರ್, ನಿನ್ನೆ 9 ರಿಂದ 12ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸುವ ಸಂಬಂಧ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. 

ಜನವರಿ 1 ರಿಂದಲೇ 8ನೇ ತರಗತಿವರೆಗೂ ಮಕ್ಕಳಿಗೆ ಮನೆಯ ಸಮೀಪವೇ ಶಿಕ್ಷಣ ನೀಡುವ ವಿದ್ಯಾಗಮ ಆರಂಭಗೊಳ್ಳಲಿದೆ. 

ಇದರ ಜೊತೆಯಲ್ಲೇ 10 ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸುವುದು, ಸಂಕ್ರಾಂತಿ ಹಬ್ಬದ ನಂತರ 9 ಮತ್ತು ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದೆ. 

ನಾಳೆ ಮುಖ್ಯಮಂತ್ರಿಯವರು ನಾಲ್ಕು ಇಲಾಖೆಯ ಅಧಿಕಾರಿಗಳೊಟ್ಟಿಗೆ ಸಮಾಲೋಚನೆ ನಡೆಸಿ, ತರಗತಿಗಳನ್ನು ಆರಂಭಿಸಲು ಹಸಿರು ನಿಶಾನೆ ನೀಡಲಿದ್ದಾರೆ. 

ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಇರುವುದರಿಂದ ಅವರ ಉನ್ನತ ಅಭ್ಯಾಸ ಹಾಗೂ ಭವಿಷ್ಯದ ದೃಷ್ಟಿಯಿಂದ ತರಗತಿಗಳ ಆರಂಭದ ಅವಶ್ಯಕತೆ ಇದೆ. ಹೀಗಾಗಿ ಮೊದಲು ಇವರಿಗೆ ತರಗತಿ ಪ್ರಾರಂಭಗೊಳ್ಳಲಿದೆ. 

ಕೊರೊನಾ ಸೋಂಕಿನ ಎರಡನೇ ಅಲೆ ರಾಜ್ಯದಲ್ಲಿ ಡಿಸೆಂಬರ್-ಜನವರಿಯಲ್ಲಿ ಬರಬಹುದೆಂದು ತಜ್ಞ ವೈದ್ಯರ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದೀಗ ತಜ್ಞ ವೈದ್ಯರು ಚಳಿಗಾಲ ಆರಂಭಗೊಂಡರೂ, ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿಲ್ಲ ಎಂದಿದ್ದಾರೆ. 

ಭಾರೀ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಪ್ರೌಢಶಿಕ್ಷಣವನ್ನು ಮೊದಲ ಹಂತದಲ್ಲಿ ಪ್ರಾರಂಭಿಸಲು ಮತ್ತು ಮನೆಯ ಅಂಗಳಗಳಲ್ಲೇ ವಿದ್ಯಾಗಮ ಪ್ರಾರಂಭಿಸಲು ಅಭ್ಯಂತರವಿಲ್ಲ ಎಂದು ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗೆ ತರಗತಿಗಳನ್ನು ಆರಂಭಿಸಲು ಹಸಿರು ನಿಶಾನೆ ತೋರಿದೆ. 

ಈ ಬಾರಿ ಶೇ. 40 ರಷ್ಟು ಪಠ್ಯ ಕಡಿತಗೊಳಿಸಿ, ಬೇಸಿಗೆ ರಜೆಯನ್ನು ಅಲ್ಪಮಟ್ಟಿಗೆ ಕಡಿತ ಮಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ. 

error: Content is protected !!