ಬೆಂಗಳೂರು, ಡಿ. 17 – ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ರಾಜ್ಯ ಸರ್ಕಾರ ಮತ್ತು ಬ್ರಿಟಿಷ್ ಸರ್ಕಾರದ ನಡುವೆ ಗುರುವಾರ ಸಹಿ ಮಾಡಲಾಯಿತು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾಯಕತ್ವ ಬೆಳವಣಿಗೆಗೆ ಸಂಬಂಧಿಸಿದಂತೆ ಮೊಟ್ಟಮೊದಲ ಬಾರಿಗೆ ಮೂರು ವರ್ಷಗಳ ಅವಧಿಯ ಒಪ್ಪಂದಕ್ಕೆ ಎರಡೂ ಸರ್ಕಾರಗಳು ಸಹಿ ಮಾಡಿವೆ ಎಂದರು. ಸಹಕಾರ, ವಾಣಿಜ್ಯ, ವ್ಯಾಪಾರ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣಾ ಮತ್ತು ಸಂಸ್ಕೃತಿ ಮುಂತಾದ ಹಲವು ಕ್ಷೇತ್ರಗಳಿಗೆ ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧ ವೃದ್ಧಿಸಿದೆ.
ಕರ್ನಾಟಕ ಸರ್ಕಾರದ ಗ್ಲೋಬಲ್ ಇನ್ನೋವೇಷನ್ ಅಲಿಯನ್ಸ್ ಕಾರ್ಯಕ್ರಮವು ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗ ಳೊಂದಿಗೆ ನಾವೀನ್ಯತಾ ಪಾಲುದಾರಿಕೆ ಹೆಚ್ಚಿಸುವ ಮೂಲಕ ರಾಜ್ಯ ಮುಂಚೂಣಿಯಲ್ಲಿರುವ ತಂತ್ರಜ್ಞಾನ ಹಬ್ ಎಂಬ ಜಾಗತಿಕ ಕೀರ್ತಿಗೆ ಪಾತ್ರವಾಗಿಸಿದೆ ಎಂದವರು ಹೇಳಿದ್ದಾರೆ.
ಬ್ರಿಟನ್ ಕರ್ನಾಟಕದ ಬಹುಮುಖ್ಯ ಜಿ.ಐ.ಎ ಪಾಲುದಾರ ರಾಷ್ಟ್ರವಾಗಿದ್ದು, 2017-18 ರಲ್ಲಿ ಶೇ. 38 ರಷ್ಟು ಹೂಡಿಕೆಯನ್ನು ಭಾರತದಲ್ಲಿ ಮಾಡಿದೆ.
ಟೆಕ್ ಹಬ್, ಟೆಕ್ ಕ್ಲಸ್ಟರ್ಸ್ ಸ್ಥಾಪನೆ ಹಾಗೂ ಗೋ ಗ್ಲೋಬಲ್‌ನಂತಹ ಕಾರ್ಯಕ್ರಮಗಳು ಭಾರತದಿಂದ ನಾವೀನ್ಯತಾ ಸ್ಟಾರ್ಟ್ ಅಪ್‍ಗಳನ್ನು ಬ್ರಿಟನ್‍ಗೆ ತಲುಪಿಸಲು ಸಾಧ್ಯವಾಗಿ ರುವುದು ಸ್ವಾಗತಾರ್ಹ ಕ್ರಮ ಎಂದು ಮುಖ್ಯ ಮಂತ್ರಿ ತಿಳಿಸಿದರು.
ಬ್ರಿಟಿಷ್ ಸರ್ಕಾರ ದೊಂದಿಗೆ ಹವಾಮಾನ ಸ್ಥಿತಿಸ್ಥಾಪಕ ನಗರಗಳ ಸಮೃದ್ಧ ನಗರಾಭಿವೃದ್ಧಿ ಕಾರ್ಯಕ್ರಮದ ಮೂಲಕ ನಗರಾಭಿವೃದ್ಧಿ ಇಲಾಖೆ ಈಗಾಗಲೇ ಸಹಯೋಗ ಬೆಳೆಸಿದ್ದು, ಬೆಂಗಳೂರಿನಲ್ಲಿ ಬಹುವಿಧದ ಸಾರಿಗೆ ಹಬ್‍ಗಳ ವಿನ್ಯಾಸ ಮತ್ತು ಕಾರ್ಯಾಚರಣೆಗೆ ಪರಿವರ್ತಿತ ಯೋಜನೆ ತರುವಲ್ಲಿ ಸಹಕಾರಿಯಾಗಿದೆ.
ಬ್ರಿಟಿಷ್ ಕೌನ್ಸಿಲ್‍ನ (ಭಾರತ) ನಿರ್ದೇಶಕ ಬಾರ್ಬರಾ ವಿಕ್‍ಹ್ಯಾಮ್ ಮಾತನಾಡಿ, ಒಪ್ಪಂದವು ಭಾರತ ಸರ್ಕಾರ ಮತ್ತು ಬ್ರಿಟನ್ ನಡುವಿನ ಶೈಕ್ಷಣಿಕ ಸಂಬಂಧವನ್ನು ಸುಭದ್ರಗೊಳಿಸುವುದರ ಜೊತೆಗೆ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ತಿಳಿಸಲಾಗಿರುವ ಜ್ಞಾನ ವರ್ಧನೆಯ ಆಶಯವನ್ನು ಬೆಂಬಲಿಸಲಿದೆ ಎಂದರು.
ಕರ್ನಾಟಕದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಸೃಜಿಸಿ ರಾಜ್ಯ ಸರ್ಕಾರದ ಗುಣಮಟ್ಟವುಳ್ಳ ಉನ್ನತ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಗುರಿಯನ್ನು ತಲುಪಲು ನೆರವಾಗಲಿದೆ ಎಂದರು.