ಉದ್ದೇಶಿತ ರಾಸಾಯನಿಕ ಗೊಬ್ಬರ ಕಾರ್ಖಾನೆ ಸ್ಥಾಪನೆ: ಕಾರ್ಯಸಾಧ್ಯತೆ ವರದಿ ಸಲ್ಲಿಕೆಗೆ ಸಂಸದರ ಸೂಚನೆ

ದಾವಣಗೆರೆ, ಡಿ.17- ಹರಿಹರ ತಾಲ್ಲೂಕು ಸಾರಥಿ-ಕರಲಹಳ್ಳಿ ಬಳಿ ಉದ್ದೇಶಿತ ರಾಸಾಯನಿಕ ಗೊಬ್ಬರ ಕಾರ್ಖಾನೆಯನ್ನು ಸ್ಥಾಪಿಸಲು ಸಕಾರಾತ್ಮಕ ವರದಿ ಸಿದ್ಧಪಡಿಸಿ ಸಚಿವಾಲಯಕ್ಕೆ ತ್ವರಿತಗತಿಯಲ್ಲಿ ಸಲ್ಲಿಸುವಂತೆ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಐಡಿಪಿಎಲ್‌ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ವಿಕಾಸ್‌ಗೌಡ ಅವರಿಗೆ ಸೂಚನೆ ನೀಡಿದರು. 

ಫೆಡರೇಶನ್‌ ನೀಡಿದ ಮಾಹಿತಿ ಆಧಾರದ ಮೇಲೆ ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದ ಲ್ಲಿರುವ ದೆಹಲಿಯ ಪ್ರಾಜೆಕ್ಟ್‌ ಅಂಡ್‌ ಡೆವಲಪ್‌ಮೆಂಟ್‌ ಇಂಡಿಯಾ ಲಿ. (ಐಡಿಪಿ ಎಲ್‌) ತಂಡ ಭೇಟಿ ನೀಡಿ, ನಂತರ ಜಿ.ಎಂ. ಐ.ಟಿ ಅತಿಥಿ ಗೃಹದಲ್ಲಿ ಇಂದು ನಡೆದ ಸಭೆ ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಖಾನೆ ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿದ್ದಾರೆ ಎಂದರು.

ಮಾಜಿ ಸಚಿವ ಅನಂತಕುಮಾರ್‌ ಕಾಳಜಿ ವಹಿಸಿ ದಾವಣಗೆರೆ ಜಿಲ್ಲೆಗೆ ರಾಸಾಯನಿಕ ಗೊಬ್ಬರ ಕಾರ್ಖಾನೆಗೆ ತಾತ್ವಿಕ ಅನುಮೋದನೆ ನೀಡಿದ್ದಾರೆ. ಹಾಲಿ ಸಚಿವರಾದ ಸದಾನಂದ ಗೌಡ ಅವರು ಶೀಘ್ರಗತಿಯಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. 

ದಾವಣಗೆರೆ ಜಿಲ್ಲಾಡಳಿತ ರಾಜ್ಯ ಮಾರ್ಕೆಟಿಂಗ್‌ ಫೆಡರೇಶನ್‌ ಕೆಐಎಡಿಬಿ ದಾವಣಗೆರೆ, ಕೇಂದ್ರ ರಾಸಾಯನಿಕ ಗೊಬ್ಬರ ಸಚಿವಾಲಯದ ಅಧೀನ ಸಂಸ್ಥೆಗಳ ಸಹಮತದೊಂದಿಗೆ ಕಾರ್ಯನಿರ್ವಹಿಸಿ ಮಹತ್ವದ ಕಾರ್ಯ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ರಾಸಾಯನಿಕ ಗೊಬ್ಬರ ಕಾರ್ಖಾನೆ ಸ್ಥಾಪನೆಗೆ ಅಗತ್ಯವಿರುವ ನೀರಿನ ಲಭ್ಯತೆ, ವಿದ್ಯುತ್ ಗ್ರಿಡ್‌ಗಳ ಅಂತರ, ಗ್ಯಾಸ್‌ ಪೈಪ್‌ಲೈನ್‌, ಜಮೀನಿನ ಮಣ್ಣಿನ ಗುಣಮಟ್ಟ, ಸಾರಿಗೆ ವ್ಯವಸ್ಥೆ, ಹತ್ತಿರದ ವಿಮಾನ ನಿಲ್ದಾಣದ ಮಾಹಿತಿ, ರೈಲ್ವೆ ನಿಲ್ದಾಣಗಳ ಮಾಹಿತಿ ಕುರಿತಂತೆ ಸಮಗ್ರ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳ ತಂಡ ಸಂಸದರೊಂದಿಗೆ ಚರ್ಚಿಸಿತು. 

ಐಡಿಪಿಎಲ್‌ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ವಿಕಾಸ್‌ಗೌಡ ಮಾತನಾಡಿ, ಇಂದು ಸಂಗ್ರಹಿಸಿರುವ ಮಾಹಿತಿಗಳನ್ನು ಆಧರಿಸಿ ಸಚಿವಾಲಯಕ್ಕೆ ಕಾರ್ಯಸಾಧ್ಯತೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಜಿಎಂಐಟಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ, ಐಡಿಪಿಎಲ್‌ ಹೆಚ್ಚುವರಿ ಮಹಾಪ್ರಬಂಧಕ ವಿಕಾಸ್‌ಗೌಡ, ಮಾರ್ಕೆಟಿಂಗ್‌ ಫೆಡರೇಷನ್‌ ಕಾರ್ಯಪಾಲಕ ಅಭಿಯಂತರ ಮಂಜುನಾಥ್‌, ಮಾರ್ಕೆಟಿಂಗ್‌ ಫೆಡರೇಷನ್‌ ನಿರ್ದೇಶಕರಾದ ಮಾಧುರಿ ಗಿರೀಶ್‌ ಮತ್ತಿತರರಿದ್ದರು.

error: Content is protected !!